ಸನಾತನ ಸಂಸ್ಕೃತಿ ಉಳಿವಿಗೆ ಸಂಸ್ಕಾರ ತರಬೇತಿ ಸಹಕಾರಿ
ಕ.ಪ್ರ. ವಾರ್ತೆ, ಲಿಂಗಸ್ಗೂರು, ಮೇ 20
ವಿಶ್ವದಲ್ಲಿ ಶ್ರೇಷ್ಠ ಸನಾತನ ಸಂಸ್ಕೃತಿ ಹೊಂದಿದ ಭಾರತದಲ್ಲಿ ಇಂದು ಪಾಶ್ಚಿಮಾತ್ಯ ರಾಷ್ಟ್ರಗಳ ಆಚರಣೆಗಳ ವ್ಯಾಮೋಹದಿಂದ ಮಂಕು ಕವಿಯುತ್ತಿದ್ದು, ಇಂತಹ ದಿನಮಾನಗಳಲ್ಲಿ ಸಂಸ್ಕಾರ ಶಿಬಿರದಂತಹ ಕಾರ್ಯಕ್ರಮಗಳು ದೇಶದ ಸಂಸ್ಕೃತಿ ಉಳಿವಿಗೆ ಸಹಕಾರಿಯಾಗಲಿವೆ ಎಂದು ಅಮರೇಶ್ವರ ಅಭಿನವಗುರು ಗಜದಂಡ ಸ್ವಾಮಿಗಳು ನುಡಿದರು.
ತಾಲೂಕಿನ ಸುಕ್ಷೇತ್ರ ಅಮರೇಶ್ವರದಲ್ಲಿ ಅಮರೇಶ್ವರ ಜನಕಲ್ಯಾಣ ಪ್ರತಿಷ್ಠಾನದಿಂದ ಸೋಮವಾರ ಸಂಜೆ ಹಮ್ಮಿಕೊಂಡಿದ್ದ 2ನೇ ರಾಜ್ಯ ಮಟ್ಟದ ವೀರಶೈವ ಜಂಗಮ ಸಂಸ್ಕಾರ ತರಬೇತಿ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಇಂದಿನ ಸ್ಪರ್ಧಾತ್ಮಕ ಮತ್ತು ಆಧುನಿಕ ಯುಗದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದು ಎಲ್ಲರ ಕರ್ತವ್ಯ. ಆದರೆ ಮಕ್ಕಳನ್ನು ಎಂಜಿನಿಯರ್, ಡಾಕ್ಟರ್ ಸೇರಿದಂತೆ ಉನ್ನತ ಹುದ್ದೆ ಅಲಂಕರಿಸುವ ವ್ಯಾಮೋಹದಲ್ಲಿ ದೇಶದ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ವಿಷಾದದ ಸಂಗತಿಎಂದರು.
ಸಂಸ್ಕಾರವಂತರಾಗಿ: ಅಮರೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಪದಾಧಿಕಾರಿಗಳು ಮಕ್ಕಳಲ್ಲಿ ದೇಶದ ಧರ್ಮ, ಸಂಸ್ಕಾರ, ಸಂಸ್ಕೃತಿ, ವೇದ, ಉಪನಿಷತ್ತು, ಜೋತಿಷ್ಯ, ವಿದ್ಯೆ ನೀಡುವ ಸಂಕಲ್ಪ ತೊಟ್ಟಿರುವುದು ಸಂತಸದ ಸಂಗತಿಯಾಗಿದ್ದು, ಮಕ್ಕಳು ಶಿಬಿರದ ಸದುಪಯೋಗ ಪಡೆದುಕೊಂಡು ಉತ್ತಮ ಸಂಸ್ಕಾರವಂತರಾಗಬೇಕೆಂದು ಕರೆ ನೀಡಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಸದಸ್ಯ ರಾಜಾ ಶ್ರೀನಿವಾಸ ನಾಯಕ ಮಾತನಾಡಿ, ದೇಶದ ಸಂಸ್ಕೃತಿ, ಧರ್ಮ, ಸಂಸ್ಕಾರ ಉಳಿಸುವಲ್ಲಿ ಅದರಲ್ಲೂ ಈ ಭಾಗದ ಆರಾಧ್ಯದೈವ ಅಮರೇಶ್ವರ ಸುಕ್ಷೇತ್ರದ ಅರ್ಚಕ ಬಳಗದಿಂದ ಪಾಠಶಾಲೆ ಆರಂಭಿಸಿರುವುದು ಸಂತಸ ತಂದಿದೆ. ಮಕ್ಕಳು ಶಿಬಿರದ ಸದುಪಯೋಗ ಪಡೆದು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕೆಂದು ಕರೆ ನೀಡಿದರು.
ಶಿಬಿರವನ್ನು ಗುರುಗುಂಟಾ ಗ್ರಾಪಂ ಮಾಜಿ ಅಧ್ಯಕ್ಷ ರಾಜಾ ಸೋಮನಾಥ ನಾಯಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಗಜೇಂದ್ರ ನಾಯಕ, ಪ್ರಧಾನ ಅರ್ಚಕ ತ್ರಿಪುರಾಂತಯ್ಯಸ್ವಾಮಿ, ಅರ್ಚಕರಾದ ಡಾ. ವಿಜಯ ಮಹಾಂತೇಶ, ಅಮರೇಶ ತಿಳಿ, ಗಂಗಾಧರಯ್ಯಸ್ವಾಮಿ, ಶಂಭುಲಿಂಗಯ್ಯ ಕಳಸದಗುಡಿ, ಮಲ್ಲಿಕಾರ್ಜುನ ಕಳಸದಗುಡಿ ಸೇರಿದಂತೆ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

