ನಿದ್ದೆಗೆಡಿಸಿದ ಹಾರುಬೂದಿಗೆ ಮುಕ್ತಿ ಸಿಕ್ಕೀತೆ?
ಕ.ಪ್ರ. ವಾರ್ತೆ , ರಾಯಚೂರು , ಮೇ 21
ಥರ್ಮಲ್ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯಾಗುವ ಹಾರೂಬೂದಿಯ ನಿರ್ವಹಣೆ ವಿದ್ಯುತ್ ಕೇಂದ್ರಗಳಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
ದಿನವೂ ಸಾವಿರಾರು ಟನ್ ಹಾರೂಬೂದಿ ಉತ್ಪಾದನೆಯಾಗುತ್ತಿದ್ದರೂ ಬಳಕೆ ಪ್ರಮಾಣ ಮಾತ್ರ ಉತ್ಪಾದನೆಯ ಅರ್ಧದಷ್ಟು ಮಾತ್ರ. ಹಾರೂಬೂದಿ ಬಳಕೆ ನಿಟ್ಟಿನಲ್ಲಿ ಅಧ್ಯಯನ, ಸಂಶೋಧನೆ ನಿರಂತರವಾಗಿ ಸಾಗಿದ್ದು, ಈ ಹಿನ್ನೆಲೆ ನಗರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸಮ್ಮೇಳನ ಮಹತ್ವದ ಪಾತ್ರ ವಹಿಸಲಿದೆ.
ದೇಶದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಿದಂತೆ ಪರ್ಯಾಯ ಇಂಧನಗಳ ಹುಡುಕಾಟ ಮತ್ತು ಅನುಷ್ಠಾನಕ್ಕೆ ತರುವುದು ಅನಿವಾರ್ಯ. ಅಂತೆಯೇ ದೇಶದ ವಿವಿಧೆಡೆ ಸದ್ಯ ಲಭ್ಯವಿರುವ ಕಲ್ಲಿದ್ದಲು ಬಳಸಿ ವಿದ್ಯುತ್ ಮಾಡುವ ಥರ್ಮಲ್ ವಿದ್ಯುತ್ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಆದರೆ ಹೀಗೆ ಸ್ಥಾಪನೆಯಾಗಿರುವ ಥರ್ಮಲ್ ವಿದ್ಯುತ್ ಘಟಕಗಳು ಹೊರ ಹಾಕುತ್ತಿರುವ ಹಾರೂಬೂದಿ ಸಮಸ್ಯೆ ನಿರ್ವಹಣೆಗೆ ವಿದ್ಯುತ್ ಕೇಂದ್ರದವರು ಪರದಾಡುವಂತಾಗಿದೆ.
ಏನಿದು: ಥರ್ಮಲ್ ವಿದ್ಯುತ್ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಬಳಸಲಾಗುತ್ತದೆ. ಹೀಗೆ ಕಲ್ಲಿದ್ದಲು ಬಳಕೆಯಿಂದ ಉತ್ಪಾದನೆಯಾಗುವುದೇ ಹಾರೂಬೂದಿ. ಈ ಹಾರೂಬೂದಿಯನ್ನು ಕೆಲ ವರ್ಷಗಳ ಹಿಂದೆ ವಿದ್ಯುತ್ ಕೇಂದ್ರಗಳಿಂದ ವಾತಾವರಣಕ್ಕೆ ಚೆಲ್ಲಲಾಗುತ್ತಿತ್ತು. ಆದರೆ ಅದರಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದ್ದಂತೆಯೇ ಅದರ ಬಳಕೆಗೆ ಸಂಶೋಧನೆ ನಡೆದವು.
ಹಾರೂಬೂದಿ ಉತ್ಪಾದನೆ ಪ್ರಮಾಣ: ಒಂದು ಅಂದಾಜಿನಂತೆ ಸದ್ಯ ದೇಶದ ವಿವಿಧೆಡೆಯಿರುವ ಸುಮಾರು 100 ಥರ್ಮಲ್ ವಿದ್ಯುತ್ ಘಟಕಗಳಿದ್ದು, ಅವುಗಳಿಂದ ವರ್ಷಕ್ಕೆ 140 ಮಿಲಿಯನ್ ಟನ್ ಹಾರೂಬೂದಿ ಉತ್ಪಾದನೆಯಾಗುತ್ತಿದೆ. ಹಾಗೆಯೇ ಶಕ್ತಿನಗರದ ಥರ್ಮಲ್ ಘಟಕದ 8 ಘಟಕಗಳಿಂದ ದಿನವೂ 8 ಸಾವಿರ ಟನ್ ಹಾರೂಬೂದಿ ಉತ್ಪಾದಿಸಲಾಗುತ್ತಿದೆ.
ಬಳಕೆ: ದೇಶದ ವಿವಿಧೆಡೆಯ ಥರ್ಮಲ್ ಘಟಕಗಳಿಂದ ಉತ್ಪಾದನೆಯಾಗುವ 140 ಮಿಲಿಯನ್ ಟನ್‌ನಲ್ಲಿ ಸದ್ಯ ಕೇವಲ ಶೇ.50 ರಷ್ಟು ಹಾರೂಬೂದಿ ಮಾತ್ರ ಬಳಕೆ ಮಾಡಲಾಗುತ್ತಿದೆ. ಸಿಮೆಂಟ್ ತಯಾರಿಕೆ ಕಂಪನಿಗಳು ಇಂಥ ಹಾರೂಬೂದಿ ಖರೀದಿಸುತ್ತಿವೆ. ಇನ್ನುಳಿದಂತೆ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತದೆ. ಇನ್ನುಳಿದ ಶೇ.50 ರಷ್ಟು ಹಾರೂಬೂದಿಯನ್ನು ತೊಟ್ಟಿಯಲ್ಲಿ ಹರಿಬಿಟ್ಟು ನೀರಿನೊಂದಿಗೆ ಮಿಶ್ರಣ ಮಾಡಿ ಇಂಗಿಸುವ ಕಾರ್ಯ ಮಾಡಲಾಗುತ್ತದೆ.
ಸಂಶೋಧನೆ: ಸಂಶೋಧನೆಗಳು ಹಾರೂಬೂದಿಯನ್ನು ಕೃಷಿ ಕ್ಷೇತ್ರದಲ್ಲೂ ಬಳಸಬಹುದು ಎಂಬುದನ್ನು ಸಾಬೀತುಪಡಿಸಿವೆ. ಅತಿಯಾದ ನೀರಿನ ಬಳಕೆಯಿಂದ ಸವಳಾಗಿರುವ ಜಮೀನಿಗೆ ಇದನ್ನು ಸರಿಯಾದ ರೀತಿಯಲ್ಲಿ ತಜ್ಞರ ಸಹಾಯದೊಂದಿಗೆ ಮಿಶ್ರಣ ಮಾಡಿದಲ್ಲಿ ಕೃಷಿ ಪ್ರದೇಶಕ್ಕೆ ಮತ್ತೆ ಫಲವತ್ತತೆ ಮರಳುತ್ತದೆ ಎಂಬುದು ಕೃಷಿ ವಿಜ್ಞಾನಿಗಳ ಅಭಿಪ್ರಾಯ.
ಈ ಕುರಿತು ಕನ್ನಡಪ್ರಭಕ್ಕೆ ಮಾತನಾಡಿದ ಕೃಷಿ ವಿವಿ ನಿವೃತ್ತ ಡೀನ್ ಡಾ. ಸಿ.ವಿ. ಪಾಟೀಲ್, ಕೃಷಿಯಲ್ಲಿಯೂ ಹಾರೂಬೂದಿ ಬಳಕೆ ಮಾಡುವ ಮೂಲಕ ಮಣ್ಣಿಗೆ ಫಲವತ್ತತೆ ತಂದುಕೊಡಬಹುದು. ರಾಯಚೂರು ಜಿಲ್ಲೆಯಲ್ಲಿ 1986ರಲ್ಲಿಯೇ ಹಾರೂಬೂದಿಯ ಬಳಕೆ ಪ್ರಯೋಗ ನಡೆಸಲಾಗಿದೆ. ಅನೇಕ ಸಂಶೋಧನೆಗಳನ್ನು ರಾಯಚೂರು ಕೃಷಿ ವಿವಿಯಿಂದ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಬೂದಿ ಪ್ರಮಾಣ ಹೆಚ್ಚು: ದೇಶದ ಸಿಂಗರೇಣಿ ಮತ್ತು ವೆಸ್ಟರ್ನ್ ಕೋಲ್ ಫೀಲ್ಡ್‌ನಲ್ಲಿ ಲಭ್ಯವಿರುವ ಕಲ್ಲಿದ್ದಲಿನಲ್ಲಿ ಬೂದಿಯ ಪ್ರಮಾಣ ಹೆಚ್ಚಿರುತ್ತದೆ. ಶೇ.30 ರಿಂದ 40ರಷ್ಟು ಬೂದಿ ಕಲ್ಲಿದ್ದಲಿನಲ್ಲಿರುತ್ತದೆ. ಅದರಿಂದಾಗಿಯೇ ಥರ್ಮಲ್ ಘಟಕಗಳಲ್ಲಿ ಬೂದಿಯ ಉತ್ಪಾದನೆಯೂ ಹೆಚ್ಚಳ ಕಂಡು ನಿರ್ವಹಣೆಯ ಸವಾಲೊಡ್ಡಿದೆ ಎಂದು ಮೂಲಗಳು ತಿಳಿಸಿವೆ.
ಒಂದೆಡೆ ವಿದ್ಯುತ್‌ಗೆ ಬೇಡಿಕೆ ಏರುಮುಖವಾಗಿದೆ. ಮತ್ತೊಂದೆಡೆ ರಾಯಚೂರು ಹಾಗೂ ದೇಶದ ವಿವಿಧೆಡೆ ಥರ್ಮಲ್ ಘಟಕಗಳ ಸ್ಥಾಪನೆಗೆ ಒತ್ತು ನೀಡುತ್ತಿರುವುದು ಹಾರೂಬೂದಿಯ ಸಮಸ್ಯೆ ನಿರ್ವಹಣೆಯೆಡೆಗೆ ಕಾಳಜಿ ಹೆಚ್ಚಿಸಿದೆ. ರಾಯಚೂರಿನಲ್ಲಿ ಮೇ 23 ಮತ್ತು 24ರಂದು ಈ ನಿಟ್ಟಿನಲ್ಲಿ ಆಯೋಜಿಸಿರುವ ಹಾರೂಬೂದಿ ಬಳಕೆ ಕುರಿತ ಸಮ್ಮೇಳನ ಮತ್ತಷ್ಟು ಅವಕಾಶಗಳನ್ನು ತೆರೆದಿಡುವುದರಲ್ಲಿ ಸಂದೇಹವಿಲ್ಲ.
-ಜಗನ್ನಾಥ ಆರ್.ದೇಸಾಯಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

