ಕೃಷಿ ಕ್ಷೇತ್ರ ಸುಸ್ಥಿರ ಅಭಿವೃದ್ಧಿಗೆ ಹಾರುಬೂದಿ ಸಹಕಾರಿ
ರಾಯಚೂರು: ದೇಶದ ಜನತೆಗೆ ಆಹಾರ ಭದ್ರತೆ ಒದಗಿಸಲು ಆಹಾರಧಾನ್ಯ ಉತ್ಪಾದನೆ ಪ್ರಮಾಣ ಹೆಚ್ಚಳದ ನಿಟ್ಟಿನಲ್ಲಿ ಹಾರುಬೂದಿಯ ಬಳಕೆ ಕೃಷಿ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಆ ಮೂಲಕ ಕೃಷಿ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗೆ ನೆರವಾಗಲಿದೆ ಎಂದು ನವದೆಹಲಿಯ ಸಿ-ಫಾರ್ಮ್ ಸಂಸ್ಥೆಯ ಸಲಹೆಗಾರ ಡಾ. ವಿಮಲ್‌ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆರಂಭಗೊಂಡ ಕೃಷಿ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹಾರುಬೂದಿಯ ಲಾಭದಾಯಕ ಬಳಕೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿದ ಅವರು, ಕಳೆದ ಕೆಲ ವರ್ಷಗಳಲ್ಲಿ ನಡೆದಿರುವ ವಿವಿಧ ಸಂಶೋಧನೆಗಳು ಥರ್ಮಲ್ ವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನೆಯಾಗುವ ಹಾರುಬೂದಿ ಹಾನಿಕಾರಕವಲ್ಲ ಎಂಬ ಅಂಶವನ್ನು ಸಾಬೀತು ಪಡಿಸಿವೆ ಎಂದು ಹೇಳಿದರು.
ಕಟ್ಟಡ ನಿರ್ಮಾಣದಲ್ಲೂ ಬಳಕೆ: ಸಂಶೋಧನೆಯ ವೇಳೆ ಹಾರುಬೂದಿಯನ್ನು ಕೇವಲ ಸಿಮೆಂಟ್ ಅಷ್ಟೇ ಅಲ್ಲ, ಕಟ್ಟಡ ನಿರ್ಮಾಣ ಕಾರ್ಯದ ಎಲ್ಲ ಹಂತದಲ್ಲಿಯೂ ಬಳಸಬಹುದಾಗಿದೆ ಎಂಬುದು ಸಾಬೀತಾಗಿದೆ. ಅದರಲ್ಲೂ ಕೃಷಿ ಕ್ಷೇತ್ರದಲ್ಲಿ ಹಾರುಬೂದಿಯ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಳ ಕಾಣಲಿದೆ. ಆ ಮೂಲಕ ಆಹಾರೋತ್ಪಾದನೆಯ ಪ್ರಮಾಣದಲ್ಲಿಯೂ ಏರಿಕೆಯಾಗಿರುವುದು ಕಂಡುಬಂದಿದೆ ಎಂದು ತಿಳಿಸಿದರು.
ಕೃಷಿ ಕ್ಷೇತ್ರದಲ್ಲಿ ಹಾರುಬೂದಿಯ ಸಮರ್ಪಕ ಬಳಕೆಗೆ ಸಂಬಂಧಿ ವೊಲಿಕೆ ಕಾರ್ಯವನ್ನು ಕೃಷಿ ವಿಶ್ವವಿದ್ಯಾಲಯಗಳು ಮಾಡಬೇಕಿದೆ ಎಂದ ಅವರು, ಹಾರುಬೂದಿ ಬಳಸಿ ಬೆಳೆದ ಬೆಳೆ ಹಾಗೂ ಅದನ್ನು ಬಳಸದೇ ಬೆಳೆದ ಬೆಳೆಯನ್ನು ಸೇವಿಸಿದ ಜಾನುವಾರುಗಳ ವಿವಿಧ ಸಂಶೋಧನೆಗಳಿಗೆ ಒಳಪಡಿಸಿದಾಗ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಿಲ್ಲ ಎಂದು ಹೇಳಿದರು.
ಯಾವುದೇ ಅಪಾಯವಿಲ್ಲ: ಹಾರುಬೂದಿ ಒಳಗೊಂಡಿರುವ ಅಂಶಗಳ ಬಳಕೆಯಿಂದ ಮಾನವನ ಜೀವಕ್ಕೆ ಯಾವುದೇ ಅಪಾಯವಿಲ್ಲ. ಅದನ್ನು ಬಳಸಿ ಬೆಳೆದ ಆಹಾರದಲ್ಲೂ ಯಾವುದೇ ರೀತಿಯ ಅಪಾಯಕಾರಿ ಅಂಶಗಳು ಕಂಡುಬಂದಿಲ್ಲ. ಆದರೆ ಈ ನಿಟ್ಟಿನಲ್ಲಿ ಅನಗತ್ಯ ಅನುಮಾನಗಳಿವೆ. ಅಂಥ ಅನುಮಾನ ನಿವಾರಿಸಿ ಬಳಕೆಗೆ ಹೆಚ್ಚು ಉತ್ತೇಜನ ನೀಡುವುದು ಗುರಿಯಾಗಬೇಕಿದೆ ಎಂದು ಹೇಳಿದರು. ಕೃಷಿಯಲ್ಲಿ ಹಾರುಬೂದಿಯ ಬಳಕೆಯಿಂದ ಆಹಾರೋತ್ಪಾದನೆಯ ಪ್ರಮಾಣ ಗಣನೀಯ ಏರಿಕೆ ಕಂಡಿರುವುದು ಸಂಶೋಧನೆಗಳಿಂದ ಗೊತ್ತಾಗಿದೆ. ಶೇ.15ರಿಂದ 20ರಷ್ಟು ಉತ್ಪಾದನೆಯ ಹೆಚ್ಚಳ ಕಾಣಬಹುದು ಎಂದರು.
ಆದಾಯ ವಿನಿಯೋಗವಾಗಲಿ: ಹಾರುಬೂದಿಯನ್ನು ಸದ್ಯ ಕೇವಲ ಸಿಮೆಂಟ್ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿದೆ. ಸರ್ಕಾರಗಳು ಕೃಷಿ ಕ್ಷೇತ್ರದಲ್ಲಿಯೂ ಇದರ ಬಳಕೆಗೆ ಸಂಬಂಧಿಸಿ ಕ್ರಮ ಕೈಗೊಳ್ಳಬೇಕಿದೆ.
ಅದರಲ್ಲೂ ಉದ್ಯಮಗಳಿಗೆ ಮಾರಾಟ ಮಾಡುವುದರಿಂದ ದೊರೆಯುವ ಆದಾಯವನ್ನು ರೈತಾಪಿ ವರ್ಗಕ್ಕೆ ಹಾರುಬೂದಿ ತಲುಪಿಸಲು ಸಾಗಣೆ ವೆಚ್ಚವಾಗಿ ಬಳಕೆ ಮಾಡುವ ಅವಶ್ಯಕತೆಯಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

