ರಾಯಚೂರು

ಸಾಲಗುಂದಾ: ನೀರಿನ ಸಮಸ್ಯೆ ತೀವ್ರ

Published On :

ಸಿಂಧನೂರು: ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
  ಗ್ರಾಮದಲ್ಲಿ ಬೇಸಿಗೆ ಬಂದರೆ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಇಡೀ ಗ್ರಾಮದಲ್ಲಿ ನೀರು ನೀರು ಎನ್ನುವಂತಾಗಿದ್ದು, ಜನತೆಯ ಗೋಳು ಕೇಳುತ್ತಿಲ್ಲ. ಗ್ರಾಮದ ಅಂಬೇಡ್ಕರ ನಗರ, 1ನೇ ವಾರ್ಡ್, 2ನೇ ವಾರ್ಡ್‌ಗಳು ಸೇರಿ ಬಹುತೇಕ ಇಡೀ ಗ್ರಾಮದ ಜನತೆ 3 ಕಿಮೀ ದೂರದ ಕೆರೆಗೆ ಹೋಗಿ ನೀರು ತರುವಂತಹ ಹೀನಾಯ ಸ್ಥಿತಿ ಒದಗಿದೆ.
ಗೋಗರೆದರೂ ಸಮಸ್ಯೆ ಕೇಳುತ್ತಿಲ್ಲ: ಅಲ್ಲಲ್ಲಿ ಬಾವಿಗಳಿದ್ದರೂ ಅದರಲ್ಲಿನ ನೀರು ಕುಡಿದರೆ ರೋಗಗಳಿಗೆ ತುತ್ತಾಗುವ ಭೀತಿ ಇದೆ. ಅಂಬೇಡ್ಕರ್ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಇದೇ ಸಮಸ್ಯೆಯಿದ್ದು, ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಯೂ ಈ ಬಗ್ಗೆ ಗಮಹರಿಸುತ್ತಿಲ್ಲ ಎಂದು ದೂರಿದ್ದಾರೆ.
ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆಯೇ ಹೊರತು ತೊಂದರೆ ತಪ್ಪುತ್ತಿಲ್ಲ. ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಗ್ರಾಪಂ, ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬಾವಿಯ ನೀರಿನಲ್ಲಿ ಕಸ ಕಡ್ಡಿ ಬಿದ್ದಿದ್ದು, ಸ್ವಚ್ಛತೆ ಇಲ್ಲವಾಗಿದೆ. ದೂರದ ಕೆರೆಗೆ ಹೋಗಿ ನೀರು ತಂದರೂ ಆ ನೀರು ಶುದ್ಧವಾಗಿಲ್ಲ. ಕುಡಿಯಲು ಅಷ್ಟೇ ಅಲ್ಲದೆ, ಸ್ನಾನ ಮಾಡಲೂ ನೀರಿಲ್ಲವಾಗಿದೆ ಎಂಬ ಆರೋಪ ಮಹಿಳೆಯರದ್ದು.
ಜನರ ಹಿಡಿಶಾಪ: ಇಂತಹ ಆತಂಕದ ಸ್ಥಿತಿಯಲ್ಲಿರುವ ಜನತೆ ಬಗ್ಗೆ ಯಾರೊಬ್ಬರೂ ಕಾಳಜಿ ವಹಿಸದಿರುವುದಕ್ಕೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಸಿಂಧನೂರಿನಲ್ಲಿ ಮನೆ ಮಾಡಿರುವುದರಿಂದ ತಮ್ಮ ಗೋಳನ್ನು ಕೇಳಲು ಯಾರೂ ಇಲ್ಲದಂತಾಗಿದೆ. ಅಧಿಕಾರಿಗಳು ಎಚ್ಚೆತ್ತು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಗ್ರಾಮದ ಸತ್ಯನಾರಾಯಣ ಗುಡಿ, ಜಡಿಯಪ್ಪ, ತಿಮ್ಮಣ್ಣ, ವಿರೂಪಾಕ್ಷಪ್ಪ ಮತ್ತಿತರರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.