ಭದ್ರಾ ಎಡನಾಲೆಗೆ ನೀರು ಹರಿಸಿ
ಕ.ಪ್ರ. ವಾರ್ತೆ, ಶಿವಮೊಗ್ಗ, ಏ.1
ಭದ್ರಾ ಎಡನಾಲೆಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ಎಡದಂಡೆ ನಾಲೆ ಅಚ್ಚುಕಟ್ಟು ರೈತರು ಸೋಮವಾರ ಭದ್ರಾ ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಏ.12ರ ವರೆಗೆ ಎಡನಾಲೆಗೆ ನೀರು ಹರಿಸಬೇಕಿತ್ತು. ಆದರೆ, ಅಧಿಕಾರಿಗಳು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ನೀರು ನಿಲ್ಲಿಸಿದ್ದಾರೆ. ಐದು ದಿನ ನಿಲ್ಲಿಸಿ ನಂತರ ಮತ್ತೆ ಹರಿಸುವುದಾಗಿ ಹೇಳುತ್ತಿದ್ದಾರೆ. ಇದರಿಂದ ನಾಲೆಯ ಆರಂಭದಲ್ಲಿರುವ ರೈತರಿಗೆ ಅನುಕೂಲವಾಗುತ್ತದೆಯೇ ಹೊರತು ಇಡೀ ತಾಲೂಕಿಗೂ ನೀರು ಸಿಗುತ್ತಿಲ್ಲ ಎಂದು ರೈತರು ಆರೋಪಿಸಿದರು.
8 ರಿಂದ 17 ರ ವರೆಗೆ ನೀರು ಬಿಡುಗಡೆ: ಸ್ಥಳಕ್ಕೆ ಭೇಟಿ ನೀಡಿದ ಕಾಡಾ ಅಧ್ಯಕ್ಷ ಗಿರೀಶ್ ಪಟೇಲ್ ಅವರು ರೈತರೊಂದಿಗೆ ಚರ್ಚಿಸಿದರು. ನಂತರ ಕಚೇರಿಯ ಸಭಾಂಗಣದಲ್ಲಿ ತಕ್ಷಣ ಅನೌಪಚಾರಿತ ತುರ್ತು ಸಭೆ ನಡೆಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರೈತರನ್ನು ವಿಶ್ವಾಸಕ್ಕೆ ಪಡೆಯದೆ ಅಧಿಕಾರಿಗಳು ವೇಳಾಪಟ್ಟಿ ಪರಿಷ್ಕರಣೆ ಮಾಡುವುದು ಸರಿಯಲ್ಲ. ಹಳೇ ವೇಳಾಪಟ್ಟಿಯಂತೆ ಎಡ ನಾಲೆಗೆ ನೀರು ಹರಿಸಿದರೂ ತಾಲೂಕಿನ ಕೆಲ ಭಾಗಗಳಿಗೆ ನೀರು ಹೋಗಿಲ್ಲ. ಹೀಗಿರುವಾಗ ತಕ್ಷಣ ನೀರು ಸ್ಥಗಿತಗೊಳಿಸಲಾಗಿದೆ. ಹಳೇಯ ವೇಳಾಪಟ್ಟಿಯಂತೆ ಏ.3 ರಿಂದ 7 ರವರೆಗೆ ನೀರು ಸ್ಥಗಿತ, ಏ.8 ರಿಂದ 17 ರ ವರೆಗೆ ನೀರು ಬಿಡುವುದು ಮತ್ತು ಏ.18 ರಿಂದ 26 ರ ವರೆಗೆ ಸ್ಥಗಿತಗೊಳಿಸಲಾಗುತ್ತದೆ ಎಂದರು.
ಕೊನೆ ಭಾಗಗಳಿಗೆ ನೀರಿಲ್ಲ: ಇದಕ್ಕೆ ರೈತರು, ಅಧಿಕಾರಿಗಳು ಒಂದು ವಾರ ನೀರು ಬಿಟ್ಟರೆ ಮುಂದಿನ ಒಂದು ವಾರ ನೀರು ಸ್ಥಗಿತಗೊಳಿಸುತ್ತಾರೆ. ಇದ್ದರಿಂದ ತಾಲೂಕಿನ ಕೊನೆ ಭಾಗಗಳಿಗೆ ನೀರು ಹರಿಯುವುದಿಲ್ಲ. ಭತ್ತಗಳು ಒಣಗುತ್ತಿವೆ. ಇದನ್ನು ಅಧಿಕಾರಗಳ ಗಮನಕ್ಕೆ ತಂದರೂ ಕೊನೆ ಭಾಗಗಳಿಗೆ ನೀರು ಹರಿಸಲು ಮನಸ್ಸು ಮಾಡುತ್ತಿಲ್ಲ. ಹೀಗಿರುವಾಗ ಪುನಃ 5 ದಿನ ನೀರನ್ನು ನಿಲ್ಲಿಸಿ ಮುಂದಿನ 10 ದಿನಗಳ ಕಾಲ ನೀರು ಬಿಟ್ಟರೆ ನೀರು ಕೊನೆ ಭಾಗಗಳಿಗೆ ತಲುಪುವುದಿಲ್ಲ. ಆದ್ದರಿಂದ ಹಿಂದಿನ ವೇಳಾ ಪಟ್ಟಿಯಂತೆ, ಏ.15ರ ವರೆಗೆ ನಿರಂತರವಾಗಿ ನೀರು ಹರಿಸಬೇಕು. ನಂತರ ಮೇ 2 ರವರೆಗೆ ಸ್ಥಗಿತಗೊಳಿಸಲಿ ಎಂದು ಒತ್ತಾಯಿಸಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಭದ್ರಾ ಕಾಡಾ ಅಧ್ಯಕ್ಷ ಗಿರೀಶ್ ಪಟೇಲ್ ಭದ್ರಾ ಯೋಜನಾ ವ್ಯಾಪ್ತಿಗೆ ಬರುವ ಅಧಿಕಾರಿಗಳೊಂದಿಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ, ನಂತರ ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಿ ಎಂದು ಆಡಳಿತಾಧಿಕಾರಿಗೆ ತಿಳಿಸಿದ್ದಾರೆ. ಕೂಡಲೇ ಏ.2ರಂದು ಸಂಜೆ 4 ಗಂಟೆಗೆ ಸಭೆ ಕರೆಯುವಂತೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ಶಾಸಕ ಕೆ.ಜಿ. ಕುಮಾರಸ್ವಾಮಿ, ಆಡಳಿತಾಧಿಕಾರಿ ಅಣ್ಣಯ್ಯ, ಎಡನಾಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಘುನಾಥ್, ಕಾರ್ಯದರ್ಶಿ ವೈ.ಜಿ. ಮಲ್ಲಿಕಾರ್ಜುನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

