ಹಳೆಯ ಮೀನುಗಳ ಮಾರಾಟ: ಪ್ರತಿಭಟನೆ
ಕ.ಪ್ರ ವಾರ್ತೆ, ಶಿಕಾರಿಪುರ, ಏ.4
ಸ್ವಾದಿಷ್ಟ ಹಾಗೂ ರುಚಿಕರವಾಗಿ ಮನುಷ್ಯನ ದೇಹಕ್ಕೆ ಯೋಗ್ಯವಾದ ಸ್ಥಳೀಯ ಮೀನುಗಳನ್ನು ಬೇರೆಡೆಗೆ ಸಾಗಿಸಿ ಪರಸ್ಥಳದ ಹಳೆಯ ಮೀನುಗಳನ್ನು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ವಿತರಿಸುತ್ತಿರುವ ಸ್ಥಳೀಯ ವರ್ತಕರ ವಿರುದ್ಧ ಜಯಕರ್ನಾಟಕದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ಜಯಕರ್ನಾಟಕ ಸಂಘಟನೆ ಅದ್ಯಕ್ಷ ಕೃಷ್ಣ ಹುಲಗಿ ಮಾತನಾಡಿ, ರಾಜ್ಯದಲ್ಲಿಯೇ ಅತೀ ಹೆಚ್ಚಿನ ಕೆರೆಗಳನ್ನು ಹೊಂದಿರುವ ಶಿಕಾರಿಪುರ ಸಹಜವಾಗಿ ವಿವಿಧ ಜಾತಿ, ತಳಿಯ ಮೀನುಗಳ ತಾಣವಾಗಿದೆ. ಇಂತಹ ಉತ್ತಮವಾದ ಮೀನುಗಳು ಇಂದು ಕಾಣೆಯಾಗಿ ಪರಸ್ಥಳದಿಂದ 3-4 ದಿನದ ಹಳೆಯ ಮೀನುಗಳು ಸರಬರಾಜಾಗುತ್ತಿದೆ. ಇಂತಹ ಪರಿಸ್ಥಿತಿಯಿಂದಾಗಿ ಗ್ರಾಹಕರು ಅನಿವಾರ್ಯವಾಗಿ ಖರೀದಿಸಿ ವಂಚನೆಯ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ ಎಂದರು.
ದೊಡ್ಡ ಲಾಭಿ: ನಿತ್ಯ ದೂರದ ಸ್ಥಳದಿಂದ ಐಸ್ ಮತ್ತಿತರ ತಂಪು ಯಂತ್ರದ ಮೂಲಕ ನಡೆಯುತ್ತಿರುವ ಈ ವ್ಯಾಪಕ ದಂಧೆಯಲ್ಲಿ ಬಹುದೊಡ್ಡ ಲಾಭಿ ಅಡಗಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ಶಿಕಾರಿಪುರದಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಈ ದಿಸೆಯಲ್ಲಿ ತಮ್ಮ ಕರ್ತವ್ಯ ಮರೆತು ಜಾಲದಲ್ಲಿ ಕೈಜೋಡಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಪರಸ್ಥಳದ ಕಳಪೆ ಮೀನುಗಳು ಮಾರುಕಟ್ಟೆ ಯನ್ನು ಸಂಪೂರ್ಣವಾಗಿ ಆಕ್ರಮಿಸಿರುವುದರಿಂದ ಲಕ್ಷಾಂತರ ವೆಚ್ಚದಲ್ಲಿ ಕೆರೆಗಳನ್ನು ವಾರ್ಷಿಕವಾಗಿ ಗುತ್ತಿಗೆ ಪಡೆದಿರುವ ಸ್ಥಳೀಯರು ಸಂಗ್ರಹಿಸಿದ ಮೀನುಗಳಿಗೆ ಬೇಡಿಕೆಯಿಲ್ಲದೆ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಅತ್ಯಂತ ಕಳಪೆಯ ಮೀನುಗಳು ಪಟ್ಟಣದ ಮಧ್ಯ ಭಾಗದ ಸಂತೆ ಮಾರುಕಟ್ಟೆ ಸ್ಥಳದಲ್ಲಿದ್ದು, ಅವ್ಯವಸ್ಥೆಯ ಆಗರವಾಗಿ ಶುಚಿತ್ವವಿಲ್ಲದೆ ರೋಗರುಜಿನದ ಕೇಂದ್ರವಾಗಿರುವ ಮಾರುಕಟ್ಟೆಯಲ್ಲಿನ ಕಳಪೆ ಮೀನುಗಳನ್ನು ಬಳಸಿದ ಗ್ರಾಹಕ ಅನಾರೋಗ್ಯಕ್ಕೆ ತುತ್ತಾಗುವುದರಲ್ಲಿ ಸಂಶಯವಿಲ್ಲ ಎಂದ ಅವರು ಈ ಕೂಡಲೇ ಮಾರುಕಟ್ಟೆಯನ್ನು ಪಟ್ಟಣದ ಹೊರವಲಯ ಆಶ್ರಯ ಬಡಾವಣೆಯ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿ ಉತ್ತಮ ಗುಣಮಟ್ಟದ ಮೀನುಗಳ ವಿತರಣೆಗೆ ತಾಲೂಕು ಆಡಳಿತಕ್ಕೆ ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡಬೇಕಾಗಿದೆ ಎಂದರು.
ರೋಗ ಮುಕ್ತಗೊಳಿಸಿ: ಹೊಟೇಲ್ಗಳಿಗೆ ಸರಬರಾಜಾಗುತ್ತಿರುವ ಬಹುತೇಕ ಮೀನುಗಳು ಕಳಪೆಯಾಗಿದೆ. ಈ ಕೂಡಲೇ ಅಧಿಕಾರಿಗಳು ಗಮನಹರಿಸಿ ಜನತೆಯ ಆರೋಗ್ಯದ ಮೂಲಕ ಪಟ್ಟಣವನ್ನು ಸಾಂಕ್ರಾಮಿಕ ರೋಗದಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದರು. ನಂತರದಲ್ಲಿ ಕಳಪೆ ಐಸ್ ಮೀನು ಮಾರಾಟಕ್ಕೆ ಕಡಿವಾಣ ಹಾಕಿ ಸ್ಥಳೀಯವಾಗಿ ಸಂಗ್ರಹಿಸಿದ ಮೀನುಗಳ ಸಮರ್ಪಕ ವಿತರಣೆಗೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘಟನೆಯ ನೂರ್ಜಹಾನ್, ಪ್ರದೀಪ್, ತೋಫಿಕ್, ಇಮಾಮ್ ಹುಸೇನ್, ಹೇಮಾವತಿ, ಸುರೇಶ್, ರಾಮು ಹುಲ್ಮಾರ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

