ಶಿವಮೊಗ್ಗ

ನಿರಾಸಕ್ತ ಮತದಾರ ಬದಲಾಗುವನೇ?

Published On :

- ಹೊನ್ನಾಳಿ ಚಂದ್ರಶೇಖರ್
ಕ.ಪ್ರ. ವಾರ್ತೆ  ಶಿವಮೊಗ್ಗ  ಏ.5
ಸ್ವಾತಂತ್ರ್ಯಾನಂತರ ನಡೆದ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದ ಏಕೈಕ ಕ್ಷೇತ್ರವಿದು. ಈ ಅವಧಿಯ 13 ಚುನಾವಣೆಯಲ್ಲಿ ಅತಿ ಹೆಚ್ಚುಬಾರಿ ಕಾಂಗ್ರೆಸ್‌ಗೆ ಒಲವು ತೋರಿದ್ದರೂ ನಂತರದ ದಿನಗಳಲ್ಲಿ ಬಿಜೆಪಿ ಭದ್ರಕೋಟೆಯಾಗಿತ್ತು.
 ಆದರೆ ಅದೇಕೋ ಈ ಕ್ಷೇತ್ರದ ಮತದಾರರಿಗೆ ಚುನಾವಣೆಗಳೆಂದರೇ ನಿರಾಸಕ್ತಿ. ಚುನಾವಣೆ ದಿನ ಮತಗಟ್ಟೆಗೆ ಬಂದು ಮತದಾನ ಮಾಡುವುದಕ್ಕೆ ಅವರಿಗೆ ಆಸಕ್ತಿ ಇಲ್ಲ. ಹಾಗಾಗಿ ಪ್ರತಿ ಬಾರಿಯೂ ಇಲ್ಲಿ ಜಿಲ್ಲೆಯ ಬೇರೆ ಕ್ಷೇತ್ರಗಳಿಗಿಂತ ಕಡಿಮೆ ಮತದಾನ ಆಗುತ್ತಿರುತ್ತದೆ.
ನಾಲ್ಕು ಬಾರಿ ಆಯ್ಕೆ: 1952ರಿಂದ ಈವರೆಗೆ ಎಂಟು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ರತ್ನಮ್ಮ ಮಾಧವರಾವ್, ಎ.ಆರ್. ಬದರಿನಾರಾಯಣ್ ಹಾಗೂ ಕೆ.ಎಚ್. ಶ್ರೀನಿವಾಸ್ ತಲಾ ಎರಡು ಬಾರಿ ಆಯ್ಕೆಯಾಗಿದ್ದರೆ, ಕೆ.ಎಸ್. ಈಶ್ವರಪ್ಪ ಅವರು ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.
ಮೊದಲ ಆರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. ಮೊಟ್ಟಮೊದಲ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ನಾಗಪ್ಪ ಶೆಟ್ಟರು ಆಯ್ಕೆಯಾದರೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಡೆದ ಜೆಪಿ ಚಳವಳಿಯ ಸಂದರ್ಭದಲ್ಲೂ ಕಾಂಗ್ರೆಸ್ ಆಯ್ಕೆಯಾಗಿರುವುದು ವಿಶೇಷ. ಇದೂವರೆಗೆ ಒಮ್ಮೆಯೂ ಜನತಾ ಪರಿವಾರದ ಅಭ್ಯರ್ಥಿ ಈ ಕ್ಷೇತ್ರದಲ್ಲಿ ಆರಿಸಿ ಬಂದಿಲ್ಲ.
 ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2008ರ ಚುನಾವಣೆ ವೇಳೆಗೆ ಉದಯಿಸಿದ ಕ್ಷೇತ್ರ. ಅದಕ್ಕೂ ಮುನ್ನ ಶಿವಮೊಗ್ಗ ನಗರ, ಗ್ರಾಮಾಂತರ ಹಾಗೂ ಹೊಸನಗರ ಕ್ಷೇತ್ರದೊಂದಿಗೆ ಹರಿದು ಹಂಚಿಹೋಗಿತ್ತು. ಈಗ ಒಂದಿಷ್ಟು ಟ್ರಿಮ್ ಆಗಿದೆ. ಆದರೆ ಶಿವಮೊಗ್ಗ ನಗರಸಭೆಯ ಎಲ್ಲಾ ವಾರ್ಡ್‌ಗಳೂ ಈ ಕ್ಷೇತ್ರಕ್ಕೆ ಸೇರಿಲ್ಲ ಎಂಬುದು ಅಚ್ಚರಿ.
ಅರಳಿದ ಕಮಲ: ಭಾರತೀಯ ಜನಸಂಘ ಈ ಕ್ಷೇತ್ರವನ್ನು ವಶಕ್ಕೆ ಪಡೆಯಲು ಎಲ್ಲಾ ಚುನಾವಣೆಗಳಲ್ಲೂ ಪ್ರಯತ್ನ ನಡೆಸಿತ್ತು. 1972ರಲ್ಲಿ ಸ್ವತಃ ಡಿ.ಎಚ್. ಶಂಕರಮೂರ್ತಿ ಸ್ಪರ್ಧಿಸಿದ್ದರು. ನಂತರ ಜೆಪಿ ಚಳವಳಿ ಸಂದರ್ಭದಲ್ಲಿ 1978ರ ಚುನಾವಣೆಯಲ್ಲಿ ಇವರು ಜನತಾ ಪಕ್ಷದಿಂದ ಕಣಕ್ಕಿಳಿದಿದ್ದರು. ಸಾಧ್ಯವಾಗಿರಲಿಲ್ಲ. ಬಿಜೆಪಿ ಪಕ್ಷ ಸ್ಥಾಪನೆಯಾದ ನಂತರ 1983ರಲ್ಲಿ ಈ ಕ್ಷೇತ್ರದಲ್ಲಿ ಕಮಲ ಅರಳಿತ್ತು. ಆನಂದರಾವ್ ಗೆದ್ದಿದ್ದರು. ತನ್ನ ಪ್ರಾಭಲ್ಯವನ್ನು ಬಿಜೆಪಿ ಹೆಚ್ಚಿಸಿಕೊಳ್ಳುತ್ತಲೇ ಹೋಯಿತು. 1985ಲ್ಲಿ ಸಾಧ್ಯವಾಗದಿದ್ದರೂ 1989ರಲ್ಲಿ ಸಚಿವರಾಗಿದ್ದ ಕೆ.ಎಚ್. ಶ್ರೀನಿವಾಸ್ ಅವರನ್ನು ಸೋಲಿಸಿದ ಕೆ.ಎಸ್. ಈಶ್ವರಪ್ಪ ಜೈಂಟ್ ಕಿಲ್ಲರ್ ಎನಿಸಿಕೊಂಡರು.
 1999 ವ್ಯತಿರಿಕ್ತ ವರ್ಷ. ಸಾರೇಕೊಪ್ಪ ಬಂಗಾರಪ್ಪ ಅವರ ಅಲೆ ಜೋರಾಗಿದ್ದ ಚುನಾವಣೆ ಅದು. ಯಾರಿಗೂ ಹೆಚ್ಚು ಪರಿಚಯವಿರದ ಎಚ್.ಎಂ. ಚಂದ್ರಶೇಖರಪ್ಪ ಅವರು ಈ ಅಲೆಯಲ್ಲಿ ತೇಲಿಬಂದು ಕಾಂಗ್ರೆಸ್ ಶಾಸಕರಾದರು. ನಂತರದ ಚುನಾವಣೆಗಳಲ್ಲಿ ಮತ್ತೆ ಬಿಜೆಪಿಯದ್ದೇ ಅಬ್ಬರ.
ಈ ಬಾರಿ: ಈ ಬಾರಿ ಮತ್ತೆ ಬಿಜೆಪಿಯಿಂದ ಕೆ.ಎಸ್. ಈಶ್ವರಪ್ಪ ಕಣಕ್ಕಿಳಿಯಲಿದ್ದಾರೆ. ಇವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಅವರ ಒಂದು ಕಾಲದ ಒಡನಾಡಿ ಯಡಿಯೂರಪ್ಪ ಅವರು ತಮ್ಮ ನೂತನ ಕರ್ನಾಟಕ ಜನತಾ ಪಕ್ಷದಿಂದ ಹೊಸಮುಖ ರುದ್ರೇಗೌಡರನ್ನು ಕಣಕ್ಕಿಳಿಸಿದ್ದಾರೆ.
   ಜೆಡಿಎಸ್‌ಗೆ ಈ ಕ್ಷೇತ್ರದಲ್ಲಿ ಎಂದೂ ಕಾಣದ ಜಯ ತಂದುಕೊಡಲು ಶ್ರಮಿಸುತ್ತಿದ್ದಾರೆ. ಬ್ರಾಹ್ಮಣರ ಮತಗಳ ಮೇಲೆ ಕಣ್ಣಿಟ್ಟರುವ ಕಾಂಗ್ರೆಸ್ ಕೆ.ಬಿ. ಪ್ರಸನ್ನ ಅವರಿಗೆ ಟಿಕೆಟ್ ನೀಡಿದೆ.
  ಆದರೆ ಗೆಲ್ಲುವವರು ಒಬ್ಬರೇ. ಅವರು ಯಾರು ಎಂಬುದನ್ನು ಮತದಾರರೇ ನಿರ್ಣಯಿಸಲಿದ್ದಾರೆ.
ಜಿಲ್ಲೆಯ ಭೂಪಟದಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ವಿಸ್ತರಣ ಸಣ್ಣದೆಂಬಂತೆ ಕಾಣುತ್ತದೆ.
ಆದರೆ ಮತದಾರರು ಕಿಕ್ಕಿರಿದಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ.
  ಮತದಾನ ಪ್ರಮಾಣ ಈ ಬಾರಿ ಕನಿಷ್ಠ ಶೇ.85 ತಲುಪಿದರೆ ನಿರಾಸಕ್ತ ಮತದಾರರ ಕ್ಷೇತ್ರವೆಂಬ ಹಣೆಪಟ್ಟಿಯೂ ಅಳಿಸಿ ಹೋಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.