ಶಿಕಾರಿಪುರ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಕ್ರೋಶ
ಕ.ಪ್ರ ವಾರ್ತೆ, ಶಿರಾಳಕೊಪ್ಪ ಏ.8
ಚುನಾವಣೆಗೆ ಟಿಕೆಟ್ ಹಂಚಿಕೆಯಾಗಿ 24 ಗಂಟೆ ಕಳೆಯುವುದರೊಳಗೆ ಶಿಕಾರಿಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಬಿ.ಎಸ್. ಯಡಿಯೂರಪ್ಪ ಸ್ಪರ್ಧಿ, ಅವರ ವಿರುದ್ಧ ಕಾಂಗ್ರೆಸ್‌ನಿಂದ ಬಿಎಸ್‌ವೈ ಒಂದು ಕಾಲದ ಸ್ನೇಹಿತ ಶಾಂತವೀರಪ್ಪ ಗೌಡ ಅವರನ್ನು ಕಣಕ್ಕಿಳಿಸುವ ಪಕ್ಷದ ತೀರ್ಮಾನಕ್ಕೆ ಸ್ಥಳೀಯವಾಗಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಮುಖಂಡರು ಸಭೆ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೇ, ಪರ್ಯಾಯ ಚಿಂತನೆಗೂ ಒಲವು ತೋರಿದ್ದಾರೆ. ಹಾಗೊಂದು ವೇಳೆ ಒಮ್ಮತ ಮೂಡದೇ ಇದ್ದರೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕಣಕ್ಕಿಳಿಯುವ ಸಾದ್ಯತೆಯೂ ಇಲ್ಲದಿಲ್ಲ.
ಏಕೆ ಅಸಮಾಧಾನ: 1999ರಲ್ಲಿ ಶಿಕಾರಿಪುರದ ನರಸಪ್ಪ ಬಯಲು ರಂಗಮಂದಿರದ ಬಿಜೆಪಿ ಸಭೆಯಲ್ಲಿ ಆಗ ಬಿಜೆಪಿ ಧುರೀಣರಾಗಿದ್ದ ಶಾಂತವೀರಪ್ಪಗೌಡ ಬಹಿರಂಗ ಸಭೆಯಲ್ಲೇ ಬಿಜೆಪಿ ವಿರುದ್ಧ ಕಾಂಗ್ರೆಸ್ಸಿನವರು ಯಾರಾದರೂ ಹಗುರವಾಗಿ ಮಾತನಾಡಿದರೆ ನಾಲಿಗೆ ಸೀಳಿಬಿಡುತ್ತೇವೆ ಎಂದು ಗುಡುಗಿದರು. ಇಂತಹ ವ್ಯಕ್ತಿ ಕಳೆದ ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಅಂತಹ ವ್ಯಕ್ತಿಗೆ ಚುನಾವಣೆಗೆ ಟಿಕೆಟ್ ಕೊಟ್ಟಿರುವುದು ಕಾಂಗ್ರೆಸ್ ಪಕ್ಷದ ದುರ್ದೈವ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಣ್ಣ ಕಿಡಿಕಾರಿದ್ದಾರೆ.
'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಶಾಂತವೀರಪ್ಪ ಗೌಡ ಕಾಂಗ್ರೆಸ್‌ಗೆ ಬಂದನಂತರ ಅವರ ಸರ್ವಾಧಿಕಾರಿ ಧೋರಣೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದಿರುವ ಪರಿಣಾಮ ಇಂದು ಪಕ್ಷದ ಕಾರ್ಯಕರ್ತರು ರೋಸಿಹೋಗಿದ್ದಾರೆ. ಕಳೆದ 20ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಬ್ಲಾಕ್ ಅಧ್ಯಕ್ಷನಾದ ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಿದರು.
ಟೀಕಾ ಪ್ರಹಾರ: ತಮಗೆ ಬೇಕಾದ ವ್ಯಕ್ತಿಗಳನ್ನು ಜೊತೆಯಲ್ಲಿ ಇಟ್ಟುಕೊಂಡು ತಾಲೂಕಿನಲ್ಲಿ ಕಾಗ್ರೆಸ್ ಪಕ್ಷದ ವರ್ಚಸ್ಸನ್ನು ಹಾಳು ಮಾಡುತ್ತಿರುವ ವ್ಯಕ್ತಿ. ಹಾಗೆಯೇ ಸೌಜನ್ಯಕ್ಕಾಗಿಯೂ ಮಾಜಿ ಶಾಸಕ ಮಹಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಿಯಾಗಿ ಯಾವ ಮುಖಂಡರನ್ನೂ ವಿಶ್ವಾಕ್ಕೆ ತೆಗೆದು ಕೊಳ್ಳದ ವ್ಯಕ್ತಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವುದು ಎಷ್ಟು ಸರಿ ಎಂಬುದು ಸ್ಥಳೀಯ ಕಾಂಗ್ರೆಸ್ಸಿಗರ ನೋವಿನ ಮಾತು.
ಅವರಿಗೆ ಟಿಕೆಟ್ ದೊರೆಯುತ್ತದೆಂಬ ಸಂಗತಿ ಗೊತ್ತಾದಾಗ ಪಕ್ಷದ ಹಿರಿಯರು ಮಧ್ಯಸ್ಥಿಕೆ ವಹಿಸಿ ಸೂಕ್ತ ವ್ಯಕ್ತಿಯನ್ನು ಶಿಫಾರಸು ಮಾಡಬಹುದಿತ್ತು. ಪಕ್ಷದ ಈಗಿನ ನಿರ್ಧಾರ ಪಕ್ಷದ ಬಹುಪಾಲು ಕಾರ್ಯಕರ್ತರಿಗೆ ಬೇಸರತಂದಿದೆ. ಈ ಹಿನ್ನೆಲೆಯಲ್ಲಿಯೇ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಕಾರ್ಯಕರ್ತರಿಂದ ಒತ್ತಡ ಬರುತ್ತಿದೆ ಎಂದು ಚಂದ್ರಣ್ಣ ವಿವರಿಸಿದ್ದಾರೆ.
ಕಾಂಗ್ರೆಸ್ ಇಂತಹ ಅಹಂಕಾರಿ ವ್ಯಕ್ತಿಗೆ ಸ್ಪರ್ರ್ಧಿಸಲು ಟಿಕೆಟ್ ನೀಡಿರುವುದು ದುರ್ದೈವ. ಭಾನುವಾರ ಮಾಜಿ ಶಾಸಕರು ಹಾಗೂ ಕೆಲವು ಕಾರ್ಯಕರ್ತರು ಮುಂದಿನ ನಡೆ ಬಗ್ಗೆ ಕುರಿತು ಚರ್ಚೆ ನಡೆಸಿದ್ದೇವೆ. ಇನ್ನೆರಡು ದಿನದಲ್ಲಿ ತಾಲೂಕಿನ ಪ್ರಮುಖರೆಲ್ಲ ಸೇರಿ ಸೂಕ್ತ ನಿರ್ಧಾರ ಕೈಗೊಂಡು ಮುಂದಿನ ನಡೆ ಪ್ರಕಟಿಸುತ್ತೇವೆಂದು ಕನ್ನಡಪ್ರಭಕ್ಕೆ ತಿಳಿಸಿದರು.
ಬಂಡಾಯದ ಮಾತು: ಕಾರ್ಯಕರ್ತರ ಒತ್ತಡದಿಂದಾಗಿ ಸಭೆ ನಡೆಸಿರುವ ಪ್ರಮುಖರು ಬಂಡಾಯದ ಮಾತುಗಳನ್ನಾಡಿದ್ದಾರೆ. ತಾಲೂಕಿನಲ್ಲಿ ಸೂಕ್ತ ವ್ಯಕ್ತಿಯನ್ನು ಏಕೆ ಕಣಕ್ಕೆ ಇಳಿಸಬಾರದು ಎಂಬ ಚರ್ಚೆ ಸಭೆಯಲ್ಲಿ ನಡೆದಿದೆ. ಬಂಡಾಯ ಅಭ್ಯರ್ಥಿಯನ್ನು ನಿಲ್ಲಿಸುವ ಕುರಿತು ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಬಗ್ಗೆ ಹಲವರು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಾಜಿ ಶಾಸಕ ಮಹಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಣ್ಣ, ಉಪಾಧ್ಯಕ್ಷ ಮಾಳಗೊಂಡನಕೊಪ್ಪದ ವೀರಣ್ಣ, ಬ್ಲಾಕ್ ಎಸ್ಸಿ ಮೋರ್ಚಾ ಅಧ್ಯಕ್ಷ ಶಿವಾನಂದಪ್ಪ, ಹಿಂದುಳಿದ ವರ್ಗದ ಬ್ಲಾಕ್ ಅಧ್ಯಕ್ಷ ನಿರಂಜನ, ಕಸುಗೂರ ಗ್ರಾಪಂ ಸದಸ್ಯ ಮಲ್ಲೇಶಪ್ಪ, ಹೇಮನಗೌಡ, ನಾಗರಾಜ್, ಮಾಲತೇಶ್, ನಾರಾಯಣಮೂರ್ತಿ ಹಾಗೂ ಇತರ ಪ್ರಮುಖರು ಚರ್ಚೆಯಲ್ಲಿ ಭಾಗವಹಿಸಿದ್ದರು.
- ಬಿ.ವಿ. ಶೇಷಗಿರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

