ಇಬ್ಬರು ಹಾಲಿ ಶಾಸಕರು ಅತಂತ್ರ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಏ.7
ಪ್ರಮುಖ ರಾಜಕೀಯ ಪಕ್ಷಗಳು ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಯಾರಿಗೆಂದು ಬಹುತೇಕ ಅಂತಿಮಗೊಳಿಸಿದೆ. ಈ ಮಧ್ಯೆಯೇ ಅಲ್ಲಲ್ಲಿ ಒಂದೊಂದು ಆಸ್ಫೋಟಗಳು ಸಂಭವಿಸಿವೆ. ಬಂಡಾಯದ ಹೊಗೆ ಎದ್ದಿದ್ದು, ಇದನ್ನು ಶಮನ ಮಾಡುವ ನಿಟ್ಟಿನಲ್ಲಿ ಪ್ರಯತ್ನವೂ ಆರಂಭವಾಗಿದೆ.
ಭದ್ರಾವತಿ: ಭದ್ರಾವತಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಶಾಸಕ ಬಿ.ಕೆ. ಸಂಗಮೇಶ್ ಇನ್ನೂ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟಗೊಂಡಿಲ್ಲ. ಈ ನಡುವೆಯೇ ಭದ್ರಾವತಿ ಟಿಕೆಟ್ ಗಿಟ್ಟಿಸುವ ನಿಟ್ಟಿನಲ್ಲಿ ಕೆಲವು ಪ್ರಭಾವಿ ನಾಯಕರು ಮುಂದಾಗಿದ್ದಾರೆ.
ಇದರಲ್ಲಿ ಭದ್ರಾವತಿಗೆ ಸೇರಿದವರೂ ಇದ್ದಾರೆ ಎನ್ನಲಾಗಿದೆ. ಈ ನಡುವೆ ಟಿಕೆಟ್ ದೊರೆಯದೇ ಇದ್ದರೆ ಸಂಗಮೇಶ್ ಪಕ್ಷೇತರರಾಗಿ ಕಣಕ್ಕಿಳಿಯುವುದಂತೂ ದಿಟ ಎಂಬ ಮಾತು ಕೇಳಿಬಂದಿದೆ. ಕೆಜೆಪಿ ಕೂಡ ಸಂಧಾನ ನಡೆದರೂ ಆಶ್ಚರ್ಯವಿಲ್ಲ. ಏಕೆಂದರೆ, ಇಲ್ಲಿ ಇನ್ನೂ ಕೆಜೆಪಿ ಅಭ್ಯರ್ಥಿ ಅಂತಿಮವಾಗಿಲ್ಲ.
ಶಿವಮೊಗ್ಗ
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರನಾಗಿ ಕಣಕ್ಕಿಳಿಯುವ ಅಭಿಲಾಷೆ ವ್ಯಕ್ತಪಡಿಸಿದ್ದ ಬಿಜೆಪಿ ಹಿರಿಯ ಮುಖಂಡ ಪದ್ಮನಾಭ ಭಟ್ ಪುತ್ರ ತೇಜಸ್ವಿಯವರ ಆಸೆಗೆ ಬಿಜೆಪಿ ಮುಖಂಡರು ತಣ್ಣೀರೆರೆದಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತ ಜವಾಬ್ದಾರಿ ಕೊಡುವ ಜೊತೆಗೆ ಕಣಕ್ಕಿಳಿಯದಂತೆ ಮನವರಿಕೆ ಮಾಡಿಕೊಡುವ ಪ್ರಯತ್ನ ಯಶ ಕಂಡಿದೆ. ತೇಜಸ್ವಿ ಚುನಾವಣೆಯಿಂದ ಹಿಂದೆ ಸರಿದಿರುವ ಕುರಿತು ಕನ್ನಡಪ್ರಭಕ್ಕೆ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಕಟ್ಟಾಳು ಪದ್ಮನಾಭ ಭಟ್ ಅವರ ಪುತ್ರರಾಗಿರುವ ತೇಜಸ್ವಿಯವರು ಕಣಕ್ಕಿಳಿಯುವುದಾಗಿ ಅಭಿಪ್ರಾಯ ಹೊರಹಾಕಿದಾಗ ಬಿಜೆಪಿಯ ಮುಖಂಡರೇ ಒಂದು ತಕ್ಷಣ ಮುಜುಗರಕ್ಕೀಡಾಗಿದ್ದರು.
ವಾಸ್ತವವಾಗಿ ತೇಜಸ್ವಿಯವರು ಎಬಿವಿಪಿ ಸೇರಿದಂತೆ ಬಿಜೆಪಿ ಯುವ ಮೋರ್ಚಾದ ಜವಾಬ್ದಾರಿಗಳನ್ನು ನಿಭಾಯಿಸಿ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಒಂದಷ್ಟು ಪ್ರಯತ್ನ ಹಾಕಿದ್ದರು.
ಶಿವಮೊಗ್ಗ ಗ್ರಾಮಾಂತರ
ಈ ಕ್ಷೇತ್ರದಲ್ಲಿ ಕೆಜೆಪಿ ಹೆಚ್ಚಿನ ಬಂಡಾಯದ ಬಿಸಿ ಅನುಭವಿಸುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯ ಅಶೋಕ್ ನಾಯ್ಕ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆಂಬ ಮಾತಿದ್ದರೂ ಅಂತಿಮವಾಗಿ ಜಿ. ಬಸವಣ್ಯಪ್ಪ ಕೆಜೆಪಿ ಟಿಕೆಟ್ ಗಿಟ್ಟಿಸಿಕೊಂಡು ಬಂದಿದ್ದರು.
ಇದರಿಂದ ವ್ಯಘ್ರಗೊಂಡಿದ್ದ ಅಶೋಕ್ ನಾಯ್ಕ ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆಯೂ ಇತ್ತು. ಈ ಮಧ್ಯೆ ಪರಿಸ್ಥಿತಿ ಉಪಯೋಗಿಸಿಕೊಂಡ ಬಿಜೆಪಿ ಅಶೋಕ್ ನಾಯ್ಕ ಅವರನ್ನು ತನ್ನ ತೆಕ್ಕೆಗೆ ಬರಸೆಳೆದು ಅಪ್ಪಿಕೊಂಡಿದೆ.
ಈ ಮೂಲಕ ಪಕ್ಷಕ್ಕಾಗುತ್ತಿದ್ದ ಹೊಡೆತ ತಪ್ಪಿಸಿಕೊಳ್ಳುವುದು ಒಂದೆಡೆಯಾದರೆ, ವ್ಯಘ್ರಗೊಂಡ ಅಶೋಕ್ ನಾಯ್ಕ ಅವರನ್ನು ಇಟ್ಟುಕೊಂಡು ಕೆಜೆಪಿ ಪ್ರಭಾವ ತಗ್ಗಿಸಲು ಅಸ್ತ್ರವಾಗಿ ಹೂಡುವ ಸಾದ್ಯತೆ ದಟ್ಟವಾಗಿದೆ.
ಆದಾಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಶಿವರುದ್ರಯ್ಯ ಸ್ವಾಮಿಯವರು ತಾವು ಕೆಜೆಪಿ ಬಂಡಾಯ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ.
ಇದರೊಟ್ಟಿಗೆ ಕಾಂಗ್ರೆಸ್‌ನಲ್ಲೂ ಅಸಮಾಧಾನದ ಹೊಗೆ ಎದ್ದಿದೆ. ಮಾಜಿ ಶಾಸಕ ಕರಿಯಣ್ಣರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗುತ್ತಿದ್ದಂತೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಹೊರಬಿದ್ದಿದೆ.
ಕಳೆದ 1-2 ವರ್ಷದಿಂದ ಕಣ ಸಿದ್ಧಪಡಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರವಿಕುಮಾರ್ ಪಕ್ಷದ ಈ ಬೆಳವಣಿಗೆಯಿಂದ ಬೇಸತ್ತಿದ್ದಾರೆ. ಇದೇ ರೀತಿ ಇನ್ನಿಬ್ಬರು ಆಕಾಂಕ್ಷಿಗಳೂ ಸಹ ಮನನೊಂದಿದ್ದು ಪಕ್ಷಕ್ಕೆ ಅಡ್ಡಗಾಲಾಗುವ ಸಾದ್ಯತೆ ಇದೆ.
ಸಾಗರ
ಸಾಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಸದ್ಯಕ್ಕೆ ತ್ರಿಶಂಕುಸ್ಥಿತಿ. ಕಾಂಗ್ರೆಸ್ ಟಿಕೆಟ್ ಸಿಕ್ಕೇಸಿಗುತ್ತದೆಂಬ ಅತಿಯಾದ ಆಶಾಭಾವನೆಯಲ್ಲಿ ಬಿಜೆಪಿಯಿಂದ ದೂರಾದ ಬೇಳೂರರಿಗೆ ಈಗ ಕಾಂಗ್ರೆಸ್ ಸೊಪ್ಪು ಹಾಕಿಲ್ಲ.
ಕಾಗೋಡು ತಿಮ್ಮಪ್ಪನವರಿಗೆ ಟಿಕೆಟ್ ನೀಡುವ ಮೂಲಕ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಇತ್ತ ಜೆಡಿಎಸ್‌ನಿಂದಲಾದರೂ ಟಿಕೆಟ್ ಗಿಟ್ಟಿಸಬೇಕೆಂಬ ಹೊರಟ ಬೇಳೂರು ಮೊದಲ ಲಿಸ್ಟ್‌ನಲ್ಲಿ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಕೆಜೆಪಿಯಿಂದ ಬಿ.ಆರ್. ಜಯಂತ್ ಈಗಾಗಲೇ ಕಣಕ್ಕಿಳಿದಿರುವುದರಿಂದ ಬೇಳೂರು ಗೋಪಾಲಕೃಷ್ಣರಿಗೆ ಸದಸ್ಯ ಜೆಡಿಎಸ್ ಬಾಗಿಲು ಕಾಯುವುದು ಅನಿವಾರ್ಯ. ಇಲ್ಲವಾದರೆ ಪಕ್ಷೇತರರಾಗಿ ಸ್ಪರ್ಧೆಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಸೊರಬ
ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿ ಅಂತಹ ಬಂಡಾಯಗಳು ಇಲ್ಲ. ಇರುವುದು ಬಿಜೆಪಿ ಟಿಕೆಟ್‌ಗಷ್ಟೇ ಪೈಪೋಟಿ. ಹುಲ್ತಿಕೊಪ್ಪ ಶ್ರೀಧರ್ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಈ ಮಧ್ಯೆ ಬಿಜೆಪಿಯ ಕೆಲವು ಹಳೇ ಹುಲಿಗಳು ತಾವೂ ಒಂದು ಕೈನೋಡುವ ಆತುರದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಕುಮಾರ್ ಬಂಗಾರಪ್ಪ, ಜೆಡಿಎಸ್‌ನಿಂದ ಮಧು ಬಂಗಾರಪ್ಪ, ಕೆಜೆಪಿಯಿಂದ ಹರತಾಳು ಹಾಲಪ್ಪನವರಿಗೆ ಟಿಕೆಟ್ ಖಚಿತವಾಗಿದ್ದು, ಇವರ ಮಧ್ಯೆ ಸೆಣಸಲು ಹುಲ್ತಿಕೊಪ್ಪ ಶ್ರೀಧರ್ ಈಗಾಗಲೇ ಹಲವಾರು ರೀತಿಯಲ್ಲಿ ತಯಾರಿ ನಡೆಸಿಕೊಂಡಿದ್ದಾರೆ. ಇಲ್ಲಿ ಬಿಜೆಪಿ ಯಾರಿಗೆ ಟಿಕೆಟ್ ಕೊಟ್ಟರೂ ಸಣ್ಣ ಭಿನ್ನಮತ ಖಚಿತ.
ಶಿಕಾರಿಪುರ
ಶಿಕಾರಿಪುರದಲ್ಲಿ ಪ್ರಮುಖ ಹುರಿಯಾಳು ಬಿ.ಎಸ್. ಯಡಿಯೂರಪ್ಪ. ಇವರನ್ನು ಹೆಣೆಯುವ ಉದ್ದೇಶದಿಂದ ಬಿಎಸ್‌ವೈ ಅವರ ಆಪ್ತ ಶಾಂತವೀರಪ್ಪ ಗೌಡರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದ್ದು, ಇದು ಸ್ಥಳೀಯ ಕಾಂಗ್ರೆಸ್ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಕಟ್ಟಿ ಬೆಳೆಸಿ ಹೋರಾಟ ಮಾಡಿಕೊಂಡು ಬಂದವರು ನಾವು, ಈಗ ಶಾಂತವೀರಪ್ಪ ಗೌಡರಿಗೆ ಟಿಕೆಟ್ ನೀಡುವ ಪಕ್ಷದ ಕ್ರಮ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ಪರ್ಯಾಯ ಚಿಂತನೆಗೂ ಮುಂದಾಗಿದ್ದಾರೆ.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

