ಶಿವಮೊಗ್ಗ

ಈಶ್ವರಪ್ಪ ವಿರುದ್ಧ ವಿವಿಧ ಸಂಘಟನೆಗಳ ಆಕ್ರೋಶ

Published On :

ಕ.ಪ್ರ. ವಾರ್ತೆ, ಶಿವಮೊಗ್ಗ, ಏ.10
ವಿಪ್ರ ವೇದಿಕೆ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಡಿಸಿಎಂ ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ವಿವಿಧ ಸಂಘಟನೆಗಳು ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿದರೆ, ಮತ್ತೆ ಕೆಲವು ಸಂಘಟನೆಗಳು ಚುನಾವಣಾ ಆಯೋಗಕ್ಕೆ ದೂರು ನೀಡಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ನೇರವಾಗಿ ಪ್ರಕರಣ ದಾಖಲಿಸಿದೆ.
ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಕೋಮು ಪ್ರಚೋದಕ ಭಾಷಣ ಮಾಡುವ ಮೂಲಕ ಸಾಮಾಜಿಕ ಸಾಮರಸ್ಯ ಕೆಡಿಸುವ ಯತ್ನ ನಡೆಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ರಾಜ್ಯ ಚುನಾವಣಾ ಆಯುಕ್ತರನ್ನು ಒತ್ತಾಯಿಸಿದೆ.
ಏಪ್ರಿಲ್ 9ರಂದು ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪನವರು ಮತೀಯ ಭಾವನೆ ಕೆರಳಿಸುವ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಯವರ ಮೂಲಕ ಆಯೋಗಕ್ಕೆ ಸಲ್ಲಿಸಲಾದ ಮನವಿಯಲ್ಲಿ ಆರೋಪಿಸಲಾಗಿದೆ.
ಈಶ್ವರಪ್ಪನವರು ನೀಡಿರುವ ಹೇಳಿಕೆಯು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂತದ್ದು. ಇದು ಶಾಂತಿ- ಸುವ್ಯವಸ್ಥೆಗೆ ಧಕ್ಕೆ ತರಲಿದೆ. ಮತ ಪಡೆಯುವ ಉದ್ದೇಶದಿಂದ ಕೋಮು ಪ್ರಚೋದಕ ಭಾಷಣ ಮಾಡಿದ್ದಾರೆ. ಇದರಿಂದ ಚುನಾವಣಾ ಕ್ಷೇತ್ರದ ಸಾಮರಸ್ಯ ವಾತಾವರಣ ಕದಡುವಂತಾಗಿದೆ. ಇದು ಚುನಾವಣಾ ನೀತಿ- ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಕೂಡಲೇ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯುಕ್ತರು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಿದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ಮುಖಂಡರಾದ ರಮೇಶ್ ಹೆಗೆಡೆ, ಎನ್.ರಮೇಶ್, ದೇವೇಂದ್ರಪ್ಪ ಮತ್ತಿತರರು ಹಾಜರಿದ್ದರು.
ರಾಷ್ಟ್ರೀಯ ಹಿಂದೂಸ್ಥಾನ ಸೇನೆ: ಕೆ.ಎಸ್. ಈಶ್ವರಪ್ಪನವರ ಮೇಲೆ ಚುನಾವಣಾ ನೀತಿ ಸಂಹಿತೆ ಕಾಯ್ದೆ ಅಡಿಯಲ್ಲಿ ಶಿಸ್ತುಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಹಿಂದೂಸ್ತಾನ ಸೇನೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯವರಿಗೆ ದೂರು ಸಲ್ಲಿಸಿದೆ.
ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಮಂಗಳವಾರ ಸಂಜೆ ವಿಪ್ರ ವೇದಿಕೆ ಎಂಬ ಅನಾಮದೇಯ ಸಂಸ್ಥೆಯಿಂದ ಕೆ.ಎಸ್. ಈಶ್ವರಪ್ಪನವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಭಾಷಣ ಮಾಡುವಾಗ ಈಶ್ವರಪ್ಪನವರು ಸ್ಪಷ್ಟವಾಗಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿಪ್ರ ಸಮಾಜಕ್ಕೆ 25 ಎಕರೆ ಭೂಮಿಯನ್ನು ಕೊಡುವುದಾಗಿ ಆಮಿಷ ಒಡ್ಡುವ ಮುಖಾಂತರ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ.
ಅದೇ ರೀತಿ ಬ್ರಾಹ್ಮಣ ಮುಸ್ಲಿಮರು ಹೆಣ್ಣುಮಕ್ಕಳನ್ನು ತೇಜೋವಧೆಯಾಗುವ ರೀತಿಯಲ್ಲಿ ಮಾತನಾಡಿದ್ದಾರೆ. 68 ಹೆಣ್ಣು ಮಕ್ಕಳನ್ನು ಮುಸಲ್ಮಾನ ಯುವಕರು ಅಪಹರಿಸಿ 6 ತಿಂಗಳು, ವರ್ಷವಿಟ್ಟುಕೊಂಡು ಬಿಸಾಕಿ ಹೋಗುತ್ತಾರೆ ಎಂಬ ಹೇಳಿಕೆ ನೀಡಿದ್ದಾರೆ. ಇದು ಸ್ಪಷ್ಟವಾಗಿ ಕೋಮು ಪ್ರಚೋದನಾಕಾರಿ ಹೇಳಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಇವರ ವಿರುದ್ಧ ಹೋರಾಟಕ್ಕೆ ಇಳಿದು ಜನ ಜೀವನ ಅಸ್ತವ್ಯಸ್ತಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಆದ್ದರಿಂದ ಈಶ್ವರಪ್ಪನವರ ಮೇಲೆ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಚುನಾವಣಾ ನೀತಿ ಸಂಹಿತೆಗಳ ಅನ್ವಯ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಸೇನೆಯ ಮುಖಂಡ ಶ್ರೀಕಾಂತ ಜಿ. ಭಟ್ ಒತ್ತಾಯಿಸಿದ್ದಾರೆ.
ಪ್ರಕರಣ ದಾಖಲು: ಏ.9ರಂದು ಶಿವಮೊಗ್ಗದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಆಯೋಜನೆಗೊಂಡ ಸಭೆಯಲ್ಲಿ ಮುಸ್ಲಿಮರ ವಿರುದ್ಧ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾನಹಾನಿಕರ ಹೇಳಿಕೆ ನೀಡಿದ್ದು, ಅವರ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸಯ್ಯದ್ ವಾಹೀದ್ ಅಡ್ಡು ತಿಳಿಸಿದ್ದಾರೆ.
ಜಮಿಯಾ ಮಸೀದಿ ಖಂಡನೆ: ಶಿವಮೊಗ್ಗದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಬಂಧುಗಳು ಚುನಾವಣಾ ಆಯೋಗದ ನೀತಿಗೆ ವಿರುದ್ಧವಾಗಿ ಈಶ್ವರಪ್ಪನವರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಈ ಸಮಾರಂಭದಲ್ಲಿ ಮುಸ್ಲಿಮರ ಬಗ್ಗೆ ಈಶ್ವರಪ್ಪ ಅವಹೇಳನಕಾರಿಯಾಗಿ ಹೇಳಿಕೆ ಕೊಟ್ಟಿದ್ದು, ಇದು ಖಂಡನಾರ್ಹ ಎಂದು ಗಾಂಧಿ ಬಜಾರ್ ಸುನ್ನಿ ಜಾಮಿಯಾ ಮಸೀದಿ ತಿಳಿಸಿದೆ.
ಮತ್ತೆ ಈಶ್ವರಪ್ಪರನ್ನು ಗೆಲ್ಲಿಸಬೇಕಾ: ಶಿವಮೊಗ್ಗದಲ್ಲಿ ಬ್ರಾಹ್ಮಣ ಸಮಾಜದ 68 ಹೆಣ್ಣು ಮಕ್ಕಳನ್ನು ಮುಸ್ಲಿಮರು ಹೊತ್ತುಕೊಂಡು ಹೋಗಿ 6 ತಿಂಗಳು ಅಥವಾ ಒಂದು ವರ್ಷ ಬಳಸಿಕೊಂಡು ವಾಪಾಸ್ ಮನೆಗೆ ಕಳುಹಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ, ಹಾಗಿದ್ದಮೇಲೆ ಆ 68 ಹೆಣ್ಣು ಮಕ್ಕಳ ಪಟ್ಟಿಯನ್ನು ಈಶ್ವರಪ್ಪ ಬಿಡುಗಡೆ ಮಾಡಲಿ ಎಂದು ಜ್ಯೋತಿಷಿ ವಿ. ಸುಬ್ರಹ್ಮಣ್ಯ ಜೋಯಿಸಾ ಸವಾಲೆಸೆದಿದ್ದಾರೆ. ಬ್ರಾಹ್ಮಣ ಹೆಣ್ಣು ಮಕ್ಕಳ ಕುರಿತಾಗಿ ಹಗುರವಾಗಿ ಹೇಳಿಕೆ ಕೊಟ್ಟಿದ್ದನ್ನು ಸಹಿಸಬೇಕಾ ಎಂದು ಜೋಯಿಸಾ ಅವರು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.