ಹುಚ್ಚೂರಾಯಸ್ವಾಮಿ ರಥೋತ್ಸವ ಆಚರಣೆಗೆ ಸಿದ್ಧತೆ
ಕ.ಪ್ರ ವಾರ್ತೆ, ಶಿಕಾರಿಪುರ, ಏ.12
ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಪಟ್ಟಣದ ಪ್ರಸಿದ್ಧ ಹುಚ್ಚೂರಾಯಸ್ವಾಮಿ ರಥೋತ್ಸವವನ್ನು ವಿಜೃಂಭಣೆಯಿಂದ ನೀತಿ ಸಂಹಿತೆಗೆ ಧಕ್ಕೆಯಾಗದಂತೆ ಆಚರಿಸಲು ಶುಕ್ರವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸರ್ಕಾರಿ ಅಧಿಕಾರಿಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ತಹಸೀಲ್ದಾರ್ ಐ.ಕೆ. ಗಣಾಚಾರ್ ಮಾತನಾಡಿ, ಪಟ್ಟಣದ ಆರಾಧ್ಯದೈವ ಹುಚ್ಚೂರಾಯಸ್ವಾಮಿ ರಥೋತ್ಸವ ಇದೇ 25, 26ರಂದು ಜರುಗಲಿದೆ. ಈ ದಿಸೆಯಲ್ಲಿ ಇದೀಗ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ನೀತಿ ಸಂಹಿತೆಗೆ ಧಕ್ಕೆಯಾಗದಂತೆ ವಿಜೃಂಭಣೆಯಿಂದ ಆಚರಿಸಿ ಆಗಮಿಸುವ ಸಹಸ್ರಾರು ಭಕ್ತಾದಿಗಳ ಧಾರ್ಮಿಕ ಭಾವನೆಗೆ ಚ್ಯುತಿಯಾಗದಂತೆ ಪಟ್ಟಣದ ನಾಗರಿಕರ ಪೂರಕ ಸಹಕಾರ ಅತ್ಯಗತ್ಯ ಎಂದರು.
ಕಳೆದ ಬಾರಿಯ ರಥೋತ್ಸವಕ್ಕೆ ಅಂದಾಜು ರು. 5 ಲಕ್ಷ ವೆಚ್ಚವಾಗಿದೆ. ಮುಜರಾಯಿ ಇಲಾಖೆಯಿಂದ ರು. 1.3 ಲಕ್ಷ ಅನುದಾನ ಮಾತ್ರ ಸಾಧ್ಯವಿದೆ. ಬಾಕಿಯುಳಿದ ಮೊತ್ತವನ್ನು ದಾನಿಗಳಿಂದ ಸಂಗ್ರಹಿಸುವ ಅಗತ್ಯವಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಮಿತಿ ರಚಿಸಿ ದೇಣಿಗೆ ಸಂಗ್ರಹಿಸಲು ಜಿಲ್ಲಾಧಿಕಾರಿ ಅನುಮತಿ ಪಡೆಯಲಾಗುವುದು ಎಂದರು.
ನೀತಿ ಸಂಹಿತೆ ಧಕ್ಕೆಯಾಗದಿರಲಿ: ರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ನಾಡಿನ ವಿವಿಧ ಬಾಗದಿಂದ ಭಕ್ತರು ಆಗಮಿಸಲಿದ್ದಾರೆ. ಅನ್ನಸಂತರ್ಪಣೆಯನ್ನು ಸ್ಥಗಿತಗೊಳಿಸದಂತೆ ದೇವಸ್ಥಾನ ಸಮಿತಿಯ ಮಾಜಿ ಸದಸ್ಯ ಹುಚ್ಚಪ್ಪ ವಿನಂತಿಸಿದರು. ಕಳೆದ ಬಾರಿ ಸಮಿತಿ ಅಸ್ಥಿತ್ವದಲ್ಲಿರದೆ ಸ್ಥಳೀಯರ ಸಹಕಾರದಿಂದ ಲೋಪದೋಷವಾಗದಂತೆ ಅನ್ನಸಂತರ್ಪಣೆ ಜತೆಗೆ ಧಾರ್ಮಿಕ ಕಾರ್ಯ ಅದ್ಧೂರಿಯಾಗಿ ನೆರವೇರಿದೆ. ಪಕ್ಷಾತೀತವಾಗಿ ಜರುಗಲಿರುವ ಜಾತ್ರೆಗೆ ನೀತಿ ಸಂಹಿತೆ ನೆಪದಲ್ಲಿ ಧಕ್ಕೆಯಾಗದಂತೆ ಎಚ್ಚರವಹಿಸಲು ತಿಳಿಸಿದರು.
ಸ್ಥಳೀಯ ವಿ.ಹಿಂ.ಪ ಅದ್ಯಕ್ಷ ಮಂಜುನಾಥ್ ರಾಜಲಕ್ಷ್ಮಿ ಮಾತನಾಡಿ, ನಾಡಿನ ಹಲವೆಡೆಯಿಂದ ಆಗಮಿಸುವ ಸಹಸ್ರಾರು ಭಕ್ತಾಧಿಗಳ ಧಾರ್ಮಿಕ ಭಾವನೆಗೆ ನೀತಿಸಂಹಿತೆ ನೆಪದಲ್ಲಿ ಧಕ್ಕೆಯಾದಲ್ಲಿ ಇದೀಗ ಚಂದ್ರಗುತ್ತಿ ಜಾತ್ರೆಯ ರೀತಿಯಲ್ಲಿ ತನ್ನ ವಿಶೇಷತೆ ಕಳೆದುಕೊಳ್ಳಲಿದೆ ಎಂದರು.
ಪುರಸಭಾ ಸದಸ್ಯ ಎಲ್ಲಪ್ಪ ಮಾತನಾಡಿ, ದೇವಸ್ಥಾನ ಸಮೀಪದ ನೂತನ ಪುಷ್ಕರಣಿಯಲ್ಲಿ ಕಳೆದ ತಿಂಗಳಿನಲ್ಲಿಯೇ ಇಬ್ಬರು ಬಿದ್ದು ದಾರುಣವಾಗಿ ಸಾವು ಕಂಡಿದ್ದಾರೆ. ಕೂಡಲೇ ಸ್ವಚ್ಛತೆಗೆ ಗಮನಹರಿಸುವ ಮೂಲಕ ದೇವರ ಕಾರ್ಯಕ್ಕೆ ವಿಘ್ನವಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಮುಖಂಡ ಜೀನಳ್ಳಿ ದೊಡ್ಡಪ್ಪ ಮಾತನಾಡಿ, ರಥ ಶಿಥಿಲವಾಗಿರುವ ಸಾಧ್ಯತೆಯಿದೆ. ಈ ಕೂಡಲೇ ಅಗತ್ಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಜಾತ್ರೆಯ ನೆಪದಲ್ಲಿ ದೇವರ ಭಾವಚಿತ್ರವಿರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ಮಾತ್ರ ಅಳವಡಿಸಲು ಪುರಸಭೆಯ ಅನುಮತಿ ಖಡ್ಡಾಯವಾಗಿದೆ ಎಂದು ಮನೋಹರ್ ತಿಳಿಸಿದರು.
ಸೂಕ್ತ ಕ್ರಮಕ್ಕೆ ಸೂಚನೆ: ನಂತರ ತಹಸೀಲ್ದಾರ್ ಗಣಾಚಾರ್ ಮಾತನಾಡಿ, ರಥ ಸುಗಮವಾಗಿ ಚಲಿಸಲು ರಸ್ತೆಯಲ್ಲಿನ ಹಂಪ್ ತೆರವಿಗೆ, ಭಕ್ತರಿಗೆ ಸೂಕ್ತ ಬಂದೋಬಸ್ತ್‌ಗೆ ಮಹಿಳಾ ಪೊಲೀಸ್ ಸಹಿತ ಹೆಚ್ಚಿನ ಪೊಲೀಸರ ನೇಮಕ, ರಥದ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ ಸೂಕ್ತ ಕ್ರಮಕ್ಕೆ ಸೂಚಿಸಿದರು.
ತಾಪಂ ಇಒ ಡಾ. ಚಂದ್ರಶೇಖರ್, ಸಿಪಿಐ ಮಾದಪ್ಪ, ಉಪ ತಹಸೀಲ್ದಾರ್ ರಾಜೀವ್, ಚಂದ್ರಶೇಖರ್, ರಾಜಸ್ವ ನಿರೀಕ್ಷಕ ಮಂಜುನಾಥ್, ರಾಜೇಶ್ವರಿ, ಪಿಎಸ್‌ಐ ಕಿರಣಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಕೇಶ್ ಮುಖಂಡ ಶ್ರೀಪತಿ ಭಟ್, ಮಂಜುನಾಥ್, ಸೋಮಶೇಖರ್, ಸುರೇಶ್, ಮಂಜಪ್ಪ, ಶಿವಶಂಕರಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

