ವೈಯಕ್ತಿಕ ದೋಷಗಳಿಂದಾಗಿ ಯಡಿಯೂರಪ್ಪಗೆ ಶಿಕ್ಷೆ
ಕ.ಪ್ರ.ವಾರ್ತೆ, ಸೊರಬ, ಏ.16
ಸ್ವಾರ್ಥತೆ, ದೌರ್ಬಲ್ಯ, ವೈಯುಕ್ತಿಕ ದೋಷಗಳಿಂದಾಗಿ ಯಡಿಯೂರಪ್ಪ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದರು.
ಮಂಗಳವಾರ ಪಟ್ಟಣದಲ್ಲಿ ಬಿಜೆಪಿಯಿಂದ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಕೆಜೆಪಿ, ಜೆಡಿಎಸ್ ಕೇವಲ ಅಪ್ಪ ಮಕ್ಕಳ ಪಕ್ಷವಲ್ಲ, ಅವು ಅಣಬೆಯಂತೆ, ಇಂದು ಕಂಡು ನಾಳೆ ನಶಿಸುತ್ತವೆ. ಇಂತಹ ಪಕ್ಷಗಳಿಂದ ದೇಶಕ್ಕೆ ಯಾವುದೇ ಲಾಭವೂ ಇಲ್ಲ, ಲುಕ್ಸಾನು ಇಲ್ಲ, ಆದರೆ ಅಮವಾಸ್ಯೆ ರಾತ್ರಿಯಲ್ಲಿಯಲ್ಲೂ ಕಾಣುವ ಬಾವಿಯಂತಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರದಂತೆ ಮಾತ್ರ ಎಚ್ಚರವಹಿಸಬೇಕು ಎಂದ ಅವರು, ಹಿಂದೆ ಕಾಂಗ್ರೆಸ್ ನಡೆಸಿದ ದುರಾಡಳಿತದ ಫಲವಾಗಿ ಇಂದು ದೇಶವನ್ನು ಸರಿದಾರಿಗೆ ತರುವಲ್ಲಿ ಅಪರಿಮಿತ ಶ್ರಮಪಡಬೇಕಿದೆ.
ಇಷ್ಟಾಗ್ಯೂ ರಾಜ್ಯದಲ್ಲಿ 5 ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಕೊಡುವಲ್ಲಿ ಯಶಸ್ವಿಯಾಗಿದೆ. ಅಭಿವೃದ್ಧಿಯ ಬೆನ್ನಲ್ಲೆ ಪಕ್ಷದಿಂದಾದ ತಪ್ಪಿನ ಕುರಿತು ಪಶ್ಚಾತ್ತಾಪವಿದೆ ಎಂದರು.
ನೇರ ಹೊಣೆ: ಯುಪಿಎ ದುರಾಡಳಿತದ ಕುರಿತು ತೀವ್ರ ಟೀಕಾ ಪ್ರಹಾರನಡೆಸಿ, ಇಂದು ದೇಶದ ಅಭದ್ರತೆ, ಭಯೋತ್ಪಾದನೆ, ದುರಾಡಳಿತ, ಭ್ರಷ್ಟಾಚಾರಕ್ಕೆ ಸೋನಿಯಾಗಾಂಧಿಯವರೆ ನೇರ ಹೊಣೆಗಾರರು ಎಂದರು.
ಇಂದು ರಾಜ್ಯದ ಅಭಿವೃದ್ಧಿ ಕಾರ್ಯಗಳು ವಾಜಪೇಯಿ ಅವರ ಕನಸಿನ ಪರಿಕಲ್ಪನೆಗಳು ಒಟ್ಟಾಗಿ ಬಿಜೆಪಿ ಪಕ್ಷದಿಂದ ಸೃಜನೆಯಾಗಿದೆ. ಹಾಗಾಗಿ, ರಾಜ್ಯ ಅಭಿವೃದ್ಧಿ ಕಂಡದ್ದು ನನ್ನಿಂದ ಎನ್ನುವವರ ಬಗ್ಗೆ ತುಸು ಎಚ್ಚರವಹಿಸಿ, ಬಿಜೆಪಿಗೆ ದ್ರೋಹ ಮಾಡಿದವರಿಗೆ, ಮತದಾರನಿಗೆ ಅನ್ಯಾಯ ಮಾಡಿದವರಿಗೆ ಬುದ್ಧಿಕಲಿಸಲು ಬಿಜೆಪಿಯೊಂದಿಗೆ ಕೈಜೋಡಿಸಿ, ಸರಳ, ಸಜ್ಜನಿಕೆಯ ಸಾಮಾನ್ಯ ಕೃಷಿಕ, ಬಿಜೆಪಿ ಸೊರಬ ಕ್ಷೇತ್ರದ ಅಭ್ಯರ್ಥಿ ಚಿಕ್ಕಾವಲಿ ನಾಗರಾಜಗೌಡ ಅವರನ್ನು ಬೆಂಬಲಿಸಿ ಎಂದು ಕೋರಿದರು.
ಮಾತು ಗೊತ್ತಿಲ್ಲ: ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ರಾಮಣ್ಣ ಮಾತನಾಡಿ, ಬಹುಮತ ಪಡೆದು ಆಡಳಿತ ನಡೆಸುವ ಒಂದೆ ಆಸೆಯಿಂದ ನಾವು ಮಾಡಿದ ತಪ್ಪೇನು ಎಂಬುದರ ಅರಿವಾಗಿದೆ, ಮತ್ತೆ ಅಂತಹ ತಪ್ಪು ಮಾಡುವುದಿಲ್ಲ, ಕ್ಷಮೆ ಇರಲಿ ಎಂದರು. ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿಕ್ಕಾವಲಿ ನಾಗರಾಜಗೌಡ ಮಾತನಾಡಿ, ನಾನು ಸಾಮಾನ್ಯ ಕೃಷಿಕ, ನನಗೆ ಕೆಲಸ ಗೊತ್ತಿದೆ, ಮಾತು ಗೊತ್ತಿಲ್ಲ, ಕೃಷಿಕನ ಏಳ್ಗೆಯೆ ದೇಶದ ಏಳ್ಗೆ ಎಂದು ಭಾವಿಸಿರುವ ನನಗೆ ಮತನೀಡಿ, ಜನಸೇವೆಗೆ ಸಹಕರಿಸಿ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅನ್ವರ್, ತಾಲೂಕು ಅಧ್ಯಕ್ಷ ಈಶ್ವರ್ ಚನ್ನಪಟ್ಣ, ಮುಖಂಡರಾದ ಪಾಣಿರಾಜಪ್ಪ, ಎಚ್.ಎಸ್. ಮಂಜಪ್ಪ, ಕುಸುಮಾ ಪಾಟೀಲ್, ಹುನವಳ್ಳಿ ಗಂಗಾಧರಪ್ಪ, ಎಂ. ನಾಗಪ್ಪ ವಕೀಲ್, ವಿ.ಜಿ. ಪರಶುರಾಮ್, ಶ್ರೀಧರ್ ಆನವಟ್ಟಿ, ಚಂದ್ರಕಲಾ ಹೆಗಡೆ, ಗಜಾನನರಾವ್ ಉಳವಿ, ಎ.ಎಲ್. ಅರವಿಂದ್, ಪ್ರಭಾಕರ ರಾಯ್ಕರ್, ಎಂ.ಕೆ. ಯೋಗೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

