ಕಳಪೆ ಅಕ್ಕಿ ವಿತರಣೆಗೆ ವಿರೋಧ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಏ.21
ಸರ್ಕಾರ ಬಡವರಿಗೆ ನ್ಯಾಯಬೆಲೆ ಅಂಗಡಿಯಿಂದ ಕೊಡುತ್ತಿರುವ ಅಕ್ಕಿ ಕಳಪೆಯಾಗಿದ್ದು, ಗ್ರಾಹಕರು ಅದನ್ನು ತೀವ್ರವಾಗಿ ವಿರೋಧಿಸಿ ನ್ಯಾಯಬೆಲೆ ಅಂಗಡಿಯ ಬಾಗಿಲು ಹಾಕಿಸಿರುವ ಘಟನೆ ಶಿರಾಳಕೊಪ್ಪ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ನ್ಯಾಯಬೆಲೆ ಅಂಗಡಿ ನಂ.9ರಲ್ಲಿ ಈ ಘಟನೆ ನಡೆದಿದ್ದು, ಆ ನ್ಯಾಯಬೆಲೆ ಅಂಗಡಿಯಲ್ಲಿ 4,5,6,ವಾರ್ಡಿನ ಬಡಜನರು ಈ ಅಕ್ಕಿ ಪಡೆಯುವಾಗ ಕಳಪೆ ಅಕ್ಕಿ ವಿತರಿಸಲಾಗುತ್ತಿದೆ ಎಂದು ಆರೋಪಿಸಿ 4ನೇ ವಾರ್ಡಿನ ಸದಸ್ಯ ಸಮಿಉಲ್ಲಾ ಖಾನ್ ನೇತೃತ್ವದಲ್ಲಿ ಅಲ್ಲಿಯ ಜನರು ತೀವ್ರವಾಗಿ ಪ್ರತಿಭಟಿಸಿ ಅಂಗಡಿ ಬಾಗಿಲು ಹಾಕಿಸಿ ಉತ್ತಮ ಅಕ್ಕಿ ಬಂದನಂತರ ವಿತರಿಸಿ ಎಂದರು.
ವಾಪಾಸು ಕಳುಹಿಸಿ: ಬೇರೆ ಎಲ್ಲಾ ವಾರ್ಡ್ಗಳಲ್ಲಿ ಉತ್ತಮ ಗುಣಮಟ್ಟದ ಅಕ್ಕಿ ವಿತರಿಸುವಾಗ 9ನೇ ವಾರ್ಡಿನಲ್ಲಿ ಮಾತ್ರ ಏಕೆ ಇಂತಹ ಅಕ್ಕಿ ವಿತರಿಸುತ್ತಿರುವಿರಿ ಎಂದು ನ್ಯಾಯಬೆಲೆ ಅಂಗಡಿಯ ವಿತರಕರನ್ನು ಪ್ರಶ್ನಿಸಿದಾಗ ಈ ಅಕ್ಕಿ ಸರ್ಕಾರ ವಿತರಿಸಿರುವಂತಹದು. ಆ ಬಗ್ಗೆ ನಾವು ಗೋಡನ್ ಮ್ಯಾನೇಜರ್ ಅವರನ್ನು ವಿಚಾರಿಸಿದಾಗ ಅವುಗಳನ್ನು ವಾಪಾಸು ಕಳುಹಿಸಿ ಬೇರೆ ಅಕ್ಕಿ ಕೊಡುತ್ತೇವೆ ಎಂದಿದ್ದಾರೆ ಎಂದು 9ನೇ ವಾರ್ಡಿನ ಮಾಲಿಕರು ತಿಳಿಸಿದ್ದಾರೆ.
ಸರ್ಕಾರ ಉತ್ತಮ ಅಕ್ಕಿಯನ್ನು ಕೊಡುತ್ತಿದ್ದರೂ ಗೋಡನ್ ಮ್ಯಾನೇಜರ್, ಕೆಲ ಅಧಿಕಾರಿಗಳು ಹಾಗೂ ಕೆಲವು ವ್ಯಾಪಾರಿಗಳು ಶಾಮೀಲಾಗಿ ಇಂತಹ ಕೃತ್ಯ ನಡೆಸುತ್ತಿದ್ದಾರೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿ ಬಂದಿದೆ: ಈ ಬಗ್ಗೆ ಆಹಾರ ನಿಗಮದ ಮ್ಯಾನೇಜರ್ ಶ್ರೀನಿವಾಸ ಅವರನ್ನು ಪತ್ರಿಕೆ ದೂರವಾಣಿ ಮುಖಾಂತರ ಮಾತನಾಡಿಸಿದಾಗ ಕೆಲವು ಕಡೆ ಕಳಪೆ ಅಕ್ಕಿ ಬಂದಿರುವ ಬಗ್ಗೆ ಮಾಹಿತಿ ಬಂದಿದೆ. ಆದರೆ ಭಾರತ ಆಹಾರ ನಿಗಮ ದಿಂದ ಬರುವಂತಹ ಅಕ್ಕಿ ಇದಾಗಿದ್ದು, ನಮಗೆ ಅಕ್ಕಿ ಹೇಗೆ ಇದೆ ಎಂದು ತಿಳಿಸುವುದಿಲ್ಲ. ಆ ಅಕ್ಕಿಯನ್ನು ವಾಪಾಸ್ ಪಡೆದು ಬೇರೆ ಕೊಡುವುದಾಗಿ ತಿಳಿಸಿದ್ದಾರೆ.
ಹಾಗೆಯೇ ಶಿಕಾರಿಪುರ ಆಹಾರ ನಿಗಮದ ನಿಜಗುಣ ಅವರನ್ನು ಪತ್ರಿಕೆ ಪ್ರಶ್ನಿಸಿದಾಗ ಅವರು ಈ ಅಕ್ಕಿ ಕಳೆದ ವರ್ಷ ರೈತರಿಂದ ಖರೀದಿಸಿದ ಬತ್ತದಿಂದ ಮಾಡಿರುವಂತಹದು. ಈ ಬಾರಿ ಕೆಲವೆಡೆ ಕಳಿಸಿದ ಅಕ್ಕಿ ನೋಡಿದಾಗ ಕಳಪೆಯಾಗಿರುವುದು ಗಮನಕ್ಕೆ ಬಂದಿದೆ. ಮುಂದೆ ಉತ್ತಮ ಅಕ್ಕಿ ಬರುತ್ತದೆ ಎಂದು ಭರವಸೆ ನೀಡಿದರು.
ಬೆಂಬಲ ಬೆಲೆ: ಶಿರಾಳಕೊಪ್ಪ ಭಾಗದ ಆಹಾರ ನಿಗಮದ ಅಧಿಕಾರಿ ಕೃಷ್ಣಾಜೋಯ್ಸ್ ಅವರನ್ನು ಪ್ರಶ್ನಿಸಿದಾಗ ಬೆಂಬಲ ಬೆಲೆಯಲ್ಲಿ ಖರೀದಿಸಿದ ಬತ್ತದಲ್ಲಿ ಅಕ್ಕಿ ಈ ರೀತಿ ಬಂದಿದೆ ಎಂದು ತಿಳಿಸಿ ಬೇರೆ ಅಕ್ಕಿಯನ್ನು ವಿತರಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು ಎಂದು ಪಪಂ ಸದಸ್ಯ ಸಮಿಉಲ್ಲಾ ಖಾನ್, ಯೋಗೇಶ್, ತಿಪ್ಪಣ್ಣ, ಜಾಫರ್ ಆರೀಪ್, ದಸ್ತಗೀರ್, ಸಾವಿತ್ರಮ್ಮ, ಜುಬೇದಾ ಮೊದಲಾದವರು ಒತ್ತಾಯಿಸಿದ್ದಾರೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

