ಶುರುವಾಯ್ತು ಕುತಂತ್ರ ರಾಜಕಾರಣ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.21
ವಿವಿಧ ಸೌಲಭ್ಯಗಳ ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರ ಗ್ರಾಹಕನ ಬ್ಯಾಂಕ್ ಖಾತೆಯ ಮೂಲಕವೇ ಕೊಡಬೇಕೆಂದು ಹೊರಟಿದೆ. ಕೇಂದ್ರದ ಈ ತಂತ್ರವನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡ ರಾಜಕೀಯ ಪಕ್ಷಗಳು ಈ ಬಾರಿ ಜನರಿಗೆ ನೀಡುವ ಮತಕ್ಕಾಗಿನ ಕಾಸನ್ನು ನೇರವಾಗಿ ಮತದಾರನ ಖಾತೆಗೆ ಜಮಾ ಮಾಡಲು ಮುಂದಾಗಿವೆ.
ಮತದಾರನಿಗೆ ಹಣ ಹಂಚುವುದನ್ನು ತಡೆಯುವ ಉದ್ದೇಶದಿಂದ ಚುನಾವಣಾ ಆಯೋಗ ಬಿಗಿ ಕ್ರಮ ಅನುಸರಿಸುತ್ತಿದ್ದು, ಭಾರಿ ಬಂದೋಬಸ್ತ್ ಏರ್ಪಡಿಸುತ್ತಿದೆ. ಕೇಂದ್ರೀಕೃತ ತನಿಖಾ ಠಾಣೆಗಳನ್ನು ತೆರೆದಿದೆ. ಪ್ರತಿ ವಾಹನಗಳನ್ನು ತಡೆದು ನಿಲ್ಲಿಸಿ ಹಣದ ಹರಿವು ಆಗದಂತೆ ಹದ್ದಿನ ಕಣ್ಣಿಟ್ಟಿದೆ, ಹತ್ತಾರು ಪ್ರಕರಣಗಳನ್ನು ದಾಖಲಿಸಿ ಹಣ ವಶಕ್ಕೆ ಪಡೆದುಕೊಂಡಿವೆ.
ಈ ರೀತಿ ಪರಿಸ್ಥಿತಿ ಬಿಗಿಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಹಣವನ್ನು ಬೇರೆ ರೀತಿಯಲ್ಲಿ ಜನರಿಗೆ ಮುಟ್ಟಿಸಲು ಮುಂದಾಗಿವೆ.
ಹೊಸ ಸಂಪ್ರದಾಯ: ಪ್ರಮುಖವಾಗಿ ಸಂಘ ಸಂಸ್ಥೆ, ಸ್ತ್ರೀಶಕ್ತಿ- ಸ್ವಸಹಾಯ ಗುಂಪುಗಳಿಗೆ ಹಣ ಸಂದಾಯ ಮಾಡುವುದು ರಾಜಕೀಯ ಪಕ್ಷಗಳಿಗೆ ಸುಲಭ. ಆದರೆ, ಈ ವ್ಯವಸ್ಥೆಯಿಂದ ಹೊರಗಿರುವ ಮತದಾರನಿಗೆ ಹಣ ಹಂಚುವುದು ಇಂದು ತ್ರಾಸದ ಕೆಲಸ. ಹೀಗೆ ಗುಂಪು ಚಟುವಟಿಕೆಯಿಂದ ಹೊರತಾಗಿರುವ ಮತದಾರನಿಗೆ ಹಣ ತುಂಬಲು ಬ್ಯಾಂಕ್ ಖಾತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಮತಕ್ಕಾಗಿನ ಹಣವನ್ನು ಮತದಾರನ ಖಾತೆಗೆ ಹಾಕಿ ನಂತರ ಮತದಾರನಿಗೆ ಸುದ್ದಿ ಮುಟ್ಟಿಸಿ ಕೈತೊಳೆದುಕೊಳ್ಳುವುದು ರಾಜಕೀಯ ಪಕ್ಷಗಳ ಹೊಸ ಸಂಪ್ರದಾಯ.
ಬೆಳಕಿಗೆ ಬಂತು: ಹಳೇ ಶಿವಮೊಗ್ಗ ವ್ಯಾಪ್ತಿಯ ರವಿವರ್ಮ ಬೀದಿ, ತಿಮ್ಮಪ್ಪನಕೊಪ್ಪಲು ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲವು ಮತದಾರರಿಂದ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಪ್ರಮುಖ ಒಂದು ಪಕ್ಷದ ಕಾರ್ಯಕರ್ತರು ಪಡೆದುಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮನೆಗೆ ಪ್ರಚಾರಕ್ಕೆಂದು ಬಂದ ಪಕ್ಷದ ಕಾರ್ಯಕರ್ತರು ಪರಿಚಯದ ಆಧಾರದ ಮೇಲೆ ಖಾತೆಯ ಬಗ್ಗೆ ವಿಚಾರಣೆ ನಡೆಸಿ ಖಾತೆಯ ಸಂಖ್ಯೆಯನ್ನು ಪಡೆದು ಹೋಗಿರುವುದು ಗೊತ್ತಾಗಿದೆ.
ಅದೇ ರೀತಿ ತೀರ್ಥಹಳ್ಳಿ ತಾಲೂಕಿನಲ್ಲಿ ಅನುಮತಿ ಇಲ್ಲದೇ ವಾಹನವೊಂದು ಪಕ್ಷವೊಂದರ ಪ್ರಚಾರಕ್ಕಿಳಿದಿತ್ತು. ವಾಹನವನ್ನು ತಪಾಸಣೆಗೊಳಪಡಿಸಿದಾಗ ಕರಪತ್ರಗಳು, ಟೋಪಿ, ಶಾಲಿನ ಜೊತೆಗೆ 5 ನೋಟ್ ಪುಸ್ತಕ ದೊರೆತಿದ್ದು, ಇದರಲ್ಲಿ ಬ್ಯಾಂಕ್ ಖಾತೆಗಳ ವಿವರ ಇದ್ದಿದ್ದು ಬೆಳಕಿಗೆ ಬಂದಿದೆ. ಈ ವಾಹನ ಗ್ರಾಮೀಣ ಭಾಗದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಮನೆ ಮನೆಗೆ ಪ್ರಚಾರ ನಡೆಸಿದ ವೇಳೆ ಮತದಾರನ ಬ್ಯಾಂಕ್ ಖಾತೆಯ ಸಂಖ್ಯೆ ಪಡೆದಿದ್ದಾರೆ ಎಂಬುದು ಪೊಲೀಸ್ ಮೂಲಗಳ ಮಾಹಿತಿ.
ಹೇಗೆ ಹಂಚಿಕೆ: ಇದೀಗ ಪ್ರಚಾರ ಮಾಡುವ ಸಮಯ. ಪಕ್ಷದ ಮುಖಂಡರು, ಕಾರ್ಯಕರ್ತರು ಮತದಾರರ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕರ್ತರು ಮಾಡುತ್ತಿರುವ ಮಹತ್ವದ ಕಾರ್ಯ ಎಂದರೆ ಮತದಾರನ ಮನೆಯ ಸದಸ್ಯರ ಬ್ಯಾಂಕ್ ಖಾತೆಗಳನ್ನು ಕೇಳಿ ಪಡೆಯುತ್ತಿದ್ದಾರೆ.
ನಂತರದ ದಿನಗಳಲ್ಲಿ ಅನಾಮಿಕ ವ್ಯಕ್ತಿಗಳು ಮತದಾರನ ಖಾತೆಗೆ ನೇರವಾಗಿ ಹಣ ತುಂಬಲಿದ್ದಾರೆ. ಕೋರ್ ಬ್ಯಾಂಕಿಂಗ್ ಇರುವುದರಿಂದ ಯಾವುದೇ ಶಾಖೆಯಿಂದ ಮತದಾರನ ಖಾತೆಗೆ ಹಣ ತುಂಬಬಹುದು. ಈ ಚಟುವಟಿಕೆಯಿಂದ ಯಾರು ಯಾರಿಗೆ ಹಣ ನೀಡಿದರು ಎಂಬುದು ಎಲ್ಲೂ ಗೊತ್ತಾಗುವುದೇ ಇಲ್ಲ. ಯಾವ ಕಾರಣಕ್ಕೆ ಖಾತೆಗೆ ಹಣ ತುಂಬಲಾಗಿದೆ ಎಂಬುದೂ ಹೊರಜಗತ್ತಿಗೆ ಗೊತ್ತಾಗುವುದೇ ಇಲ್ಲ.
ಹಂಚಿಕೆ ಸುಲಭ: ರಾಜಕೀಯದವರ ಈ ತಂತ್ರಗಾರಿಕೆ ಕುರಿತು ಬ್ಯಾಂಕ್ನ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದು, ನೇರವಾಗಿ ಖಾತೆಗೆ ಹಣ ಜಮಾ ಮಾಡುವುದು ಅಷ್ಟು ಸುಲಭವಲ್ಲ ಹಾಗೂ ಅಷ್ಟೇನು ಕಷ್ಟವಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಅಭಿಪ್ರಾಯಪಟ್ಟರು. ದೊಡ್ಡ ಮೊತ್ತದ ಹಣ ಖಾತೆಗೆ ಸಂದಾಯವಾದರೆ ಸುಲಭವಾಗಿ ಪತ್ತೆ ಹಚ್ಚಬಹುದು.
ಆದರೆ, 400, 500, 1000 ರುಪಾಯಿ ಹಣವನ್ನು ಖಾತೆದಾರನ ಖಾತೆಗೆ ಜಮಾ ಮಾಡಿದರೆ ಹೇಗೆ ಪತ್ತೆ ಹಚ್ಚಲು ಸಾಧ್ಯವಿದೆ ಎಂದು ಹೇಳುವ ಅವರು, ಒಂದೇ ರೀತಿಯ ಮೊತ್ತವನ್ನು ಒಂದು ಬ್ಯಾಂಕ್ ಶಾಖೆಯಲ್ಲಿ ತುಂಬಲು ಬಂದಾದ ಬ್ಯಾಂಕ್ ಅಧಿಕಾರಿಗಳು ಗಮನಿಸಲು ಅವಕಾಶವುಂಟು ಎಂದು ಹೇಳುತ್ತಾರೆ.
ಹತ್ತಾರು ಕಾರ್ಯಕರ್ತರು ಹಲವು ಚಲನ್ಗಳೊಂದಿಗೆ ಬಂದು ಹಣ ತುಂಬಿ ಹೋದರೆ ಗೊತ್ತಾಗುವುದೇ ಇಲ್ಲ. ಹೀಗಾಗಿ ರಾಜಕೀಯದವರ ಈ ತಂತ್ರಗಾರಿಕೆ ಒಂದರ್ಥದಲ್ಲಿ ಸುಲಭ ಎಂದೂ ಅವರು ಹೇಳುತ್ತಾರೆ.
ಚುನಾವಣಾಧಿಕಾರಿಯಾಗಿರುವ ಬನ್ಸಲ್ ಅವರ ಪ್ರತಿಕ್ರಿಯೆ ಕೇಳಿದಾಗ, ನನಗೆ ಸದ್ಯ ಈ ಬಗ್ಗೆ ಮಾಹಿತಿ ಇಲ್ಲ. ಪರಿಶೀಲನೆ ನಡೆಸುತ್ತೇನೆ. ಮಾಹಿತಿ ದೊರೆತರೆ ಖಂಡಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಒಟ್ಟಾರೆ ತಂತ್ರ, ಪ್ರತಿತಂತ್ರ ನಡೆಸುತ್ತಿದ್ದ ರಾಜಕಾರಣಿಗಳು ಇದೀಗ ಕುತಂತ್ರ ರಾಜಕಾರಣ ಆರಂಭಿಸಿದ್ದಾರೆ.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

