ಗೈರು ಹಾಜರಾಗುವ ನೌಕರರ ವಿರುದ್ಧ ಕ್ರಿಮಿನಲ್ ಕೇಸ್
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.21
ಚುನಾವಣಾ ಕಾರ್ಯದ ಬಗ್ಗೆ ಅಸಡ್ಡೆ ತೋರಿಸಿ ಕೈಕೊಡುವ ಸಿಬ್ಬಂದಿಗೊಂದು ಎಚ್ಚರಿಕೆ ಸುದ್ದಿ ಇದೆ.
ಮುಂಬರುವ ವಿಧಾನಸಭಾ ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ಸರ್ಕಾರಿ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಒಂದು ವೇಳೆ ಸಕಾರಣವಿಲ್ಲದೆ ಹಾಗೂ ಯಾವುದೇ ಮಾಹಿತಿ ನೀಡದೆ ಕರ್ತವ್ಯಕ್ಕೆ ಗೈರು ಹಾಜರಾಗುವ ಸಿಬ್ಬಂದಿಯ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ಧರಿಸಲಾಗಿದೆ.
ಕಠಿಣ ಕ್ರಮ: ಕರ್ತವ್ಯಕ್ಕೆ ಗೈರಾಗುವ ಸಿಬ್ಬಂದಿಗಳ ವಿರುದ್ಧ ಪ್ರಜಾಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 134ರ ಅನ್ವಯ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಕೂಡ ಸ್ಪಷ್ಟ ನಿರ್ದೇಶನ ನೀಡಿದೆ.
ಚುನಾವಣಾ ಕರ್ತವ್ಯಕ್ಕಾಗಿ ಜಿಲ್ಲೆಯಲ್ಲಿ ಸರಿಸುಮಾರು 8 ಸಾವಿರ ಸರ್ಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಕರ್ತವ್ಯಕ್ಕೆ ನಿಯೋಜಿಸಿರುವವರಿಗೆ ಜಿಲ್ಲಾ ಚುನಾವಣಾ ಶಾಖೆಯಿಂದ ಈಗಾಗಲೇ ಸೂಕ್ತ ಮಾಹಿತಿ ರವಾನಿಸಲಾಗಿದೆ.
2 ಹಂತದಲ್ಲಿ ತರಬೇತಿ: ಚುನಾವಣಾ ಕೆಲಸಕ್ಕೆ ನೇಮಕವಾದ ಸಿಬ್ಬಂದಿಗೆ ಎರಡು ಹಂತದಲ್ಲಿ ತರಬೇತಿ ನೀಡಲು ನಿರ್ಧರಿಸಲಾಗಿದೆ. ಏ.23ರಿಂದ ಪ್ರಥಮ ಹಂತದ ತರಬೇತಿ ಆರಂಭವಾಗಲಿದೆ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ನಿಯೋಜಿತರಾದ ಸಿಬ್ಬಂದಿಗೆ 23ರಂದೇ ತರಬೇತಿ ನೀಡಲಾಗುತ್ತದೆ. ಉಳಿದ ವಿಧಾನಸಭಾ ಕ್ಷೇತ್ರಗಳಿಗೆ ಫೆ.24ರಂದು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ತರಬೇತಿ ನಡೆಯಲಿದೆ.
2ನೇ ಹಂತದ ತರಬೇತಿಯು ತೀರ್ಥಹಳ್ಳಿ ಹೊರತುಪಡಿಸಿ ಉಳಿದ ಆರು ಕ್ಷೇತ್ರಗಳಲ್ಲಿ ಫೆ.29ರಂದು ನಡೆಯಲಿದೆ. ತೀರ್ಥಹಳ್ಳಿಯಲ್ಲಿ ಫೆ.27 ರಂದು ನಡೆಯಲಿದೆ. ಚು. ಆಯೋಗ ನಿಯೋಜಿಸಿರುವ ವೀಕ್ಷಕರು ಈಗಾಗಲೇ ತಮ್ಮ ಕರ್ತವ್ಯ ಆರಂಭಿಸಿದ್ದು, ಭದ್ರತಾ ಕಾರ್ಯಕ್ಕೆ ಕೇಂದ್ರ ಚುನಾವಣಾ ಆಯೋಗ ಜಿಲ್ಲೆಗೆ ಕೇಂದ್ರಿಯ ಮೀಸಲು ಪಡೆ ತುಕಡಿಗಳನ್ನು ಈಗಾಗಲೇ ಕಳುಹಿಸಿಕೊಟ್ಟಿದೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

