ಹಿತ ಕಾಯುವಲ್ಲಿ ಬಿಜೆಪಿ ವಿಫಲ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.22
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪರವಾಗಿ ಮತದಾರರ ಒಲವಿದೆ. ಹೀಗಾಗಿ ಪಕ್ಷ ನಿಚ್ಚಳವಾಗಿ ಬಹುಮತ ಪಡೆಯಲಿದೆ ಎಂದು ಕಾಂಗ್ರೆಸ್ನ ಜಿಲ್ಲಾ ವೀಕ್ಷಕರಾಗಿ ಆಗಮಿಸಿರುವ ಗೋವ ವಿಧಾನಸಭೆ ಸದಸ್ಯ ಜಿತೇಂದ್ರ ದೇಶಪ್ರಭು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಗೆಲುವು ಖಚಿತವಾಗಿದೆ. ಉಳಿದ ಮೂರು ಕಡೆಗಳಲ್ಲಿ ಗೆಲ್ಲುವ ವಿಶ್ವಾಸವಿದೆ, ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದರು.
ಮತದಾರರ ಮನ ಸೆಳೆಯಲು ಪಕ್ಷದ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಬಿಜೆಪಿ ಆಡಳಿತದಿಂದ ಜನತೆ ಬೇಸತ್ತಿದ್ದಾರೆ. ಬಿಜೆಪಿಯು ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಮತ್ತು ಪರಿಶಿಷ್ಟ ಹಿತ ಕಾಯುವಲ್ಲಿ ವಿಫಲವಾಗಿದೆ. ಅವರೆಲ್ಲ ಕಾಂಗ್ರೆಸ್ ಪರ ಈ ಬಾರಿ ನಿಂತಿದ್ದಾರೆ. ಈ ಹಿಂದಿನ ಅವಧಿಯಲ್ಲಿ ತಾವು ಮತ ನೀಡಿದವರಿಂದ ಸ್ವತಹ ಅನುಭವಿಸಿದ ಸಂಕಷ್ಟ ಪರಿಶಿಷ್ಟ ಜಾತಿ, ಪಂಗಡದವರು ಅರಿತಿದ್ದಾರೆಂದರು.
ಪಕ್ಷದ ಮೇಲೆ ಅಭಿಮಾನವಿಲ್ಲ: ಕಾಂಗ್ರೆಸ್ನಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ. ಕಾರ್ಯಕರ್ತರು, ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹಿಸಿಯೇ ಒಂದು ತೀರ್ಮಾನಕ್ಕೆ ಬರುತ್ತದೆ.
ಈ ಕಾರಣದಿಂದಾಗಿಯೇ ಭದ್ರಾವತಿಯಲ್ಲಿ ಸಿಎಂ ಇಬ್ರಾಹಿಂ ಅವರಿಗೆ ಟಿಕೆಟ್ ನೀಡಲಾಯಿತು ಎಂದು ಜಿತೇಂದ್ರ ದೇಶಪ್ರಭು ಹೇಳಿದರು.
ಪಕ್ಷದ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದ್ದ ಸಂಗಮೇಶ್ ಅವರ ಮನವೊಲಿಕೆಗೆ ಪಕ್ಷದ ಮುಖಂಡರು ಪ್ರಯತ್ನಿಸಿದರು.
ಆದರೆ, ಅವರು ಋಣಾತ್ಮಕವಾಗಿ ಪ್ರತಿಕ್ರಿಯಿಸಿದರು. ಕಣದಲ್ಲಿ ಉಳಿಯಲು ತೀರ್ಮಾನಿಸಲಾಗಿದೆ, ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ ಎಂದು ಸಂಗಮೇಶ್ ತಿಳಿಸಿದರು ಎಂದು ಪ್ರಶ್ನೆಯೊಂದಕ್ಕೆ ದೇಶಪ್ರಭು ಉತ್ತರಿಸಿದರು.
ಪಕ್ಷ ಪ್ರೇಮವಿಲ್ಲ: ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ನಿರ್ಧಾರವನ್ನು ಇವರು ಉಲ್ಲಂಘಿಸುತ್ತಾರೆ ಎಂದಾದರೆ ಸಂಗಮೇಶ್ ಅವರು ಪಕ್ಷ ಪ್ರೇಮ ಎಷ್ಟಿದೆ ಎಂದು ಗೊತ್ತಾಗುತ್ತದೆ ಎಂದು ಟೀಕಿಸಿದರು.
ಕೆ. ದಿವಾಕರ್ ಮಾತನಾಡಿ, ಶಿವಮೊಗ್ಗ ನಗರದ ಚಾನಲ್ ದಂಡೆಯ ಮೇಲೆ ವಾಸವಿರುವ ಸಾವಿರಕ್ಕೂ ಹೆಚ್ಚಿನ ಜನರಿಗೆ ಕಾಂಗ್ರೆಸ್ ಪುನರ್ವಸತಿ ಕಲ್ಪಿಸಲು ಬದ್ಧವಾಗಿದೆ ಎಂದ ಅವರು, ಈ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಶಿವಮೊಗ್ಗದ ಕೆಜೆಪಿ ಅಭ್ಯರ್ಥಿ ರುದ್ರೇಗೌಡರು ಕೆಪಿಎಸ್ಸಿಯಲ್ಲಿ ಸದಸ್ಯರಾಗಿದ್ದಾಗ ಶಿವಮೊಗ್ಗದ ಎಷ್ಟು ಅರ್ಹರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಲಿ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎಸ್.ಪಿ. ದಿನೇಶ್, ಶಿವಾನಂದ, ಮಾರ್ಟಿಸ್, ಸತ್ಯನಾರಾಯಣ ಮತ್ತಿತರರು ಹಾಜರಿದ್ದರು.
ಈಶ್ವರಪ್ಪಗೆ ಕಾಂಗ್ರೆಸ್ ಸವಾಲ್
ಈಶ್ವರಪ್ಪನವರೇ, ವಾಮಮಾರ್ಗ ಬಿಟ್ಟು ಚುನಾವಣೆ ಎದುರಿಸಿ ಎಂದು ಕಾಂಗ್ರೆಸ್ ಸವಾಲೆಸೆದಿದೆ.
ಹೇಗಾದರೂ ಚುನಾವಣೆ ಗೆಲ್ಲಬೇಕೆಂಬ ಗುರಿಯೊಂದಿಗೆ ಕೆ.ಎಸ್. ಈಶ್ವರಪ್ಪನವರು ಜನಾಂಗೀಯ ಕಲಹ, ಕೋಮು ಗಲಭೆ ಹುಟ್ಟುಹಾಕಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಿವಮೊಗ್ಗದ ಪ್ರಜ್ಞಾವಂತ ಮತದಾರರು ಈಶ್ವರಪ್ಪನವರ ಹೇಳಿಕೆ ಬಗ್ಗೆ ಹೇಸಿಗೆಪಟ್ಟಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಕೆ. ದಿವಾಕರ್ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ನ್ಯಾಯ ಸಮ್ಮತ ಚುನಾವಣೆ ನಡೆಸಬೇಕೆಂಬುದು ನಮ್ಮ ಪಕ್ಷದ ಆಗ್ರಹ. ಹೀಗಾಗಿ ವಾಮಮಾರ್ಗ ಬಿಟ್ಟು ನ್ಯಾಯಸಮ್ಮತ ಚುನಾವಣೆಗೆ ಬನ್ನಿ ಎಂಬುದು ನಮ್ಮ ಒತ್ತಾಯ ಎಂದು ದಿವಾಕರ್ ವಿವರಿಸಿದರು. ಶಿವಮೊಗ್ಗ ನಗರದ ಒಳಚರಂಡಿ ಯೋಜನೆಯ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅವ್ಯವಹಾರ ನಡೆದಿದ್ದು, ಮುಂದಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈ ಅವ್ಯವಹಾರವನ್ನು ಬಯಲಿಗೆಳೆಯಲು ಲೋಕಾಯುಕ್ತ ತನಿಖೆಗೆ ಒಪ್ಪಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

