ನೀತಿ ಸಂಹಿತೆ; ಕಳೆಗುಂದಿದ ಹುಚ್ಚೂರಾಯಸ್ವಾಮಿ ರಥೋತ್ಸವ
ಕ.ಪ್ರ.ವಾರ್ತೆ, ಶಿಕಾರಿಪುರ, ಏ.23
ಚುನಾವಣಾ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಶಿಕಾರಿಪುರದ ಶ್ರೀ ಹುಚ್ಚೂರಾಯಸ್ವಾಮಿ ರಥೋತ್ಸವ ಈ ಬಾರಿ ತನ್ನ ವಿಜೃಂಭಣೆ ಕಳೆದುಕೊಂಡು ಕಳಾಹೀನತೆಯ ರಥೋತ್ಸವವಾಗಿ ಮಾರ್ಪಾಡಾಗುವ ಲಕ್ಷಣ ಗೋಚರವಾಗತೊಡಗಿದೆ.
ಧವನ ಹುಣ್ಣಿಮೆಯಂದು ನಡೆಯುವ ಶ್ರೀ ಹುಚ್ಚೂರಾಯಸ್ವಾಮಿ ರಥೋತ್ಸವಕ್ಕೆ ಹಲವು ಶತಮಾನದ ಭವ್ಯ ಇತಿಹಾಸವಿದ್ದು, ಇದೇ ಗುರುವಾರ ನಡೆಯುವ ರಥೋತ್ಸವಕ್ಕೆ ಈ ಬಾರಿ ಚುನಾವಣಾ ನೀತಿ ಸಂಹಿತೆಯ ಕಾವು ತಟ್ಟಿದೆ.
ಆಚರಣೆಗೆ ಮಾತ್ರ ಸೀಮಿತ: ಈ ದಿಸೆಯಲ್ಲಿ ಮುಜರಾಯಿ ಇಲಾಖೆಯ ಸುಪರ್ದಿಗೆ ಒಳಪಟ್ಟು ಮಾಸಿಕ ಲಕ್ಷಾಂತರ ಆದಾಯ ಹೊಂದಿ ನಿತ್ಯ ಸಹಸ್ರಾರು ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿ ಅವರ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಹುಚ್ಚೂರಾಯನಿಗೆ ಈ ಬಾರಿಯ ರಥೋತ್ಸವ ಕೇವಲ ಆಚರಣೆಗೆ ಮಾತ್ರ ಸೀಮಿತವಾಗತೊಡಗಿರುವುದು ವಿಪರ್ಯಾಸವಾಗಿದೆ.
ನಿರಾಸೆಯ ವಾತಾವರಣ: ನಾಡಿನಲ್ಲಿಯೆ ಶ್ರೇಷ್ಠ ರಥೋತ್ಸವವಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯುವ ಬಹು ದೊಡ್ಡ ಧಾರ್ಮಿಕ ಕಾರ್ಯ ಈ ಬಾರಿ ಕಳೆದ ಶನಿವಾರದಿಂದ ಆರಂಭವಾಗಿದ್ದು, ಇಂದಿಗೂ ದೇವಸ್ಥಾನ ಮಾತ್ರ ಸಮರ್ಪಕ ಅಲಂಕಾರ, ತಳಿರು ತೋರಣಗಳಿಂದ ವಂಚಿತವಾಗಿ ಭಕ್ತಾಧಿಗಳಲ್ಲಿ ನಿರಾಸೆಯ ವಾತಾವರಣ ಸೃಷ್ಟಿಸುತ್ತಿದೆ. ಅದ್ದೂರಿ ರಥೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಬೇಕಾದ ತಾಲೂಕು ಆಡಳಿತ ನೀತಿ ಸಂಹಿತೆಯ ನೆಪದಲ್ಲಿ ಕೈಚಲ್ಲಿ ಕುಳಿತು ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ನಿತ್ಯ ಬೆಳಿಗ್ಗೆ ಸಂಜೆ ಪಲ್ಲಕ್ಕಿ ಉತ್ಸವ ಮಾತ್ರ ನಡೆಯುತ್ತಿದ್ದು ದೇವಸ್ಥಾನಕ್ಕೆ ಶೂನ್ಯ ಆವರಿಸಿದಂತಾಗಿದೆ.
ಅನ್ನ ಸಂತರ್ಪಣೆ ರದ್ದು: ನೀತಿ ಸಂಹಿತೆಯ ಹಿನ್ನಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ರದ್ದಾಗಿದ್ದು ಉಸ್ತುವಾರಿಯನ್ನು ವಹಿಸಿಕೊಳ್ಳಬೇಕಾದ ಸಮಿತಿ ಅಸ್ಥಿತ್ವ ಇಲ್ಲದೇ ಕಂದಾಯ ಅಧಿಕಾರಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯೂ ಇಲ್ಲದೇ ತ್ರಿಶಂಕು ಸ್ಥಿತಿಯ ಸಮಸ್ಯೆಯಿಂದಾಗಿ ಭಾಗವಹಿಸುವ ಸಹಸ್ರಾರು ಭಕ್ತಾಧಿಗಳಿಗೆ ಈ ಬಾರಿ ಅನ್ನ ಸಂತರ್ಪಣೆಯೂ ರದ್ದುಗೊಳಿಸಲಾಗಿದೆ. ನಾಡಿನ ವಿವಿಧ ಭಾಗದಿಂದ ಸ್ವಾಮಿಯ ಪ್ರಸಾದಕ್ಕಾಗಿ ಆಗಮಿಸುವ ಭಕ್ತರ ಹಿಡಿಶಾಪಕ್ಕೆ ತಾಲೂಕು ಆಡಳಿತ ಸಿದ್ಧವಾಗಬೇಕಾಗಿದೆ.
ಸಿದ್ದ ಉತ್ತರ: ಅನ್ನಸಂತರ್ಪಣೆಗೆ ದಾನಿಗಳ ಬಳಿ ಹಣ ಸಂಗ್ರಹಿಸಲು ನೀತಿ ಸಂಹಿತೆ ಅಡ್ಡಗಾಲಾಗಿದ್ದು ಅನ್ನಸಂತರ್ಪಣೆ ಸ್ಥಗಿತಗೊಳಿಸಿರುವುದಾಗಿ ತಾಲೂಕು ಕಚೇರಿ ಅಧಿಕಾರಿಗಳ ಸಿದ್ದ ಉತ್ತರವಾಗಿದೆ. ಆದರೆ ನೀತಿ ಸಂಹಿತೆಯ ಹಿನ್ನಲೆಯಲ್ಲಿಯೂ ಸಮೀಪದ ಸಾಗರ ಗಣಪತಿ ರಥೋತ್ಸವ, ಹೊಸನಗರದ ರಾಮಚಂದ್ರಾಪುರ ಮಠದ ರಥೋತ್ಸವ ಮತ್ತಿತರ ಕಡೆ ಆನೂಚಾನವಾಗಿ ಎಲ್ಲಾ ಧಾರ್ಮಿಕ ಕಾರ್ಯಗಳು ಸಾಂಗೋಪಾಂಗವಾಗಿ ನೆರವೇರಿದ್ದು ಶಿಕಾರಿಪುರದ ರಥೋತ್ಸವಕ್ಕೆ ಮಾತ್ರ ನೀತಿ ಸಂಹಿತೆ ಅಡ್ಡಿಯಾಗಿರುವ ಬಗ್ಗೆ ಭಕ್ತಾಧಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಧಾರ್ಮಿಕ ಭಾವನೆಗೆ ದಕ್ಕೆ: ಭಕ್ತರ ಧಾರ್ಮಿಕ ಭಾವನೆಗೆ ದಕ್ಕೆಯಾಗದಂತೆ ಹಾಗೂ ನೀತಿ ಸಂಹಿತೆ ದಿಕ್ಕರಿಸಿ ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ತಾಲೂಕು ಆಡಳಿತ ಕೂಡಲೇ ಅನ್ನಸಂತರ್ಪಣೆ ಸಹಿತ ಅದ್ದೂರಿ ರಥೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲೇಬೇಕಾದ ಅನಿವಾರ್ಯ ಸ್ಥಿತಿಯಿದ್ದು ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕಾಗಿದೆ.
ತೀವ್ರ ವಿರೋಧ: ರಥೋತ್ಸವದ ಅನ್ನಸಂತರ್ಪಣೆಯನ್ನು ರದ್ದುಗೊಳಿಸಿರುವ ತಾಲೂಕು ಆಡಳಿತದ ಕ್ರಮ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಹಲವು ವರ್ಷಗಳಿಂದ ನಡೆಯುತ್ತಿರುವ ಸ್ವಾಮಿಯ ರಥೋತ್ಸವ ಪಕ್ಷಾತೀತವಾಗಿ ನಡೆಯುತ್ತಿದ್ದು ಇಂತಹ ಧಾರ್ಮಿಕ ಕಾರ್ಯವನ್ನು ಮಿತಿಗೊಳಿಸುವ ಮೂಲಕ ಭಕ್ತರ ಭಾವನೆಗೆ ಧಕ್ಕೆತರುವ ಕಾರ್ಯ ಖಂಡನೀಯ. ಕೂಡಲೇ ಜಿಲ್ಲಾಡಳಿತ ಮಧ್ಯೆಪ್ರವೇಶಿಸಿ ಅದ್ದೂರಿ ರಥೋತ್ಸವ, ಅನ್ನಸಂತರ್ಪಣೆ, ಅಲಂಕಾರ ಸಿದ್ಧತೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

