ಆಮಿಷಗಳಿಗೆ ಬಲಿಯಾಗದೇ ಮತ ನೀಡಿ
ಕ.ಪ್ರ.ವಾರ್ತೆ, ಸೊರಬ, ಏ.23
ಚುನಾವಣೆಗೋಸ್ಕರ ಹಣಚೆಲ್ಲಿ ಅಧಿಕಾರ ಪಡೆದ ನಂತರ ಹಣದೋಚುವ ರಾಜಕಾರಣಕ್ಕೆ ಕಡಿವಾಣ ಹಾಕಬೇಕು ಎಂದು ಸೊರಬ ವಿಧಾನ ಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಸತ್ಯನಾರಾಯಣ ತಿಳಿಸಿದರು.
ಮಂಗಳವಾರ ತಮ್ಮ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಜನತೆ ಹಣ, ಹೆಂಡದ ಮೂಲಕ ನಡೆಸುವ ಚುನಾವಣೆಯನ್ನು ತಿರಸ್ಕರಿಸಬೇಕು. ಆಮಿಷಗಳಿಗೆ ಬಲಿಯಾಗಿ ನೀಡಿದ ಮತಕ್ಕೆ ಯಾವುದೇ ಕಿಮ್ಮತ್ತು ಇರುವುದಿಲ್ಲ, ಹಾಗಾಗಿ ಪ್ರಾಮಾಣಿಕ ಮತದಾನ ನೀಡಿ ಆಯ್ಕೆಗೊಂಡ ಜನಪ್ರತಿನಿಧಿಯಿಂದ ಸಮರ್ಪಕ ಕೆಲಸ ಮಾಡಿಸಿಕೊಳ್ಳುವತ್ತ ಯೋಚಿಸಿ ಮುನ್ನಡೆಯಬೇಕಿದೆ ಎಂದರು.
ಸಾಮಾಜಿಕ ನ್ಯಾಯ: ಕಳೆದ ಹತ್ತಾರು ವರ್ಷಗಳಿಂದ ರಾಜ್ಯದ ರಾಜಕೀಯ ವಿದ್ಯಾಮಾನಗಳನ್ನು ಗಮನಿಸಿದಾಗ ಮತದಾರನ ಮನಸ್ಸು ಗೊಂದಲ ಮತ್ತು ಆಕ್ರೋಶಕ್ಕೆ ಒಳಗಾಗುವಂತಿದೆ. ಈ ಅವಧಿಗಳಲ್ಲಿನ ದುರಾಡಳಿತ, ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಜಾತಿ ರಾಜಕಾರಣದಿಂದ ಜನತೆ ರೋಸಿಹೋಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ನಿಷ್ಟಾವಂತ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರಿಂದ ನಿರ್ಮಿತವಾದ ಜನತಾದಳ ಸಂಯುಕ್ತ ಪಕ್ಷ ಅಧಿಕಾರ ವಿಕೇಂದ್ರೀಕರಣ, ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಮೌಲ್ಯಾಧರಿತ ರಾಜಕೀಯವನ್ನು ಸಕ್ರಿಯವಾಗಿ ಬಳಸಿಕೊಂಡು ಬೆಳೆಸಿಕೊಂಡು ಬಂದಿದೆ. ಹೆಗಡೆಯವರ ರಾಜಕೀಯ ಚಿಂತನೆಗೆ ಸಾಕ್ಷಿಯಾಗಿ ಇಂದಿನ ಬಿಹಾರದ ನಿತೀಶ್ ಕುಮಾರ್ ಅವರ ಸರ್ಕಾರ ಮಾದರಿಯಾಗಿ ನಮ್ಮೆದುರಿದೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಒಂದು ಹೊಸ ಸರ್ಕಾರವೇ ಬೇಕಿದೆ, ಜನರು ಗೊಂದಲಗಳಿಂದ ದೂರವಾಗಿ ಸ್ಥಿರ ಸರ್ಕಾರ ಬರಲು ಪಾರದರ್ಶಕ ವ್ಯವಸ್ಥೆ ಬೇಕು. ಪ್ರಜಾಪ್ರಭುತ್ವವೆಂದರೆ ತಂದೆಯ ನಂತರ ಮತದಾರರು ಆತನ ಮಕ್ಕಳಿಗೆ ಅಧಿಕಾರ ಕೊಡುವುದು ಎಂದಲ್ಲ. ಹಣ, ಹೆಂಡ ಇತರ ಪ್ರಲೋಭನೆಗಳಿಗೆ ಒಳಗಾಗಿ ಮತದಾನ ಮಾಡುವುದು ಖಂಡಿತ ಒಳ್ಳೆಯದಲ್ಲ ಎಂದ ಅವರು, ಜನತಾದಳ ಸಂಯುಕ್ತ ಪಕ್ಷದ ಬಾಣದ ಗುರುತಿಗೆ ಮತ ನೀಡಬೇಕೆಂದು ಮತ ಯಾಚಿಸಿದರು.
ಪಕ್ಷದ ಮನೆಘಟ್ಟದ ಕೃಷ್ಣಮೂರ್ತಿ, ನಾಗರಾಜ್, ಹನುಮಂತಪ್ಪ, ಶ್ರೀಧರ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

