ಶಿವಮೊಗ್ಗ

ಯುಪಿಎನಿಂದ ಮಹಿಳೆಯರಿಗೆ ಹೆಚ್ಚು ನೋವು: ಬಿಜೆಪಿ ಟೀಕೆ

Published On :

ಮಹಿಳಾ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ


ಶಿವಮೊಗ್ಗ: ನಗರದ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಹಿಳಾ ಪ್ರಮುಖ ಕಾರ್ಯಕರ್ತರ ಸಭೆಯ ನಡೆಯಿತು.
 ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಮಾತನಾಡಿ, ಕೇಂದ್ರದ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಬದುಕು ಕಂಗಾಲಾಗಿದೆ. ವಿಶೇಷವಾಗಿ ಇದರ ನೋವು ಮಹಿಳೆಯರು ಹೆಚ್ಚು ಅನುಭವಿಸುವಂತಾಗಿದೆ. ಕಾರಣ, ದೈನಂದಿನ ಬದುಕಿನಲ್ಲಿ ಅಗತ್ಯ ವಸ್ತುಗಳನ್ನು ಬಳಸಿ ಸಂಸಾರ ಸಾಗಿಸುವಾಗ ಆಗಬಹುದಾದ ಅನುಭವದಿಂದ ಮಹಿಳೆಯರಿಗೆ ಬಹುಬೇಗ ಇದರ ಬಿಸಿತಟ್ಟುತ್ತದೆಂಬ ಭಾವನೆ ಎಂದರು.
ಹಗರಣಗಳ ಸರಮಾಲೆ: ಬೆಲೆ ಏರಿಕೆಯ ನಡುವೆ ಅಗತ್ಯ ವಸ್ತುಗಳ ಸರಬರಾಜುವಿನಲ್ಲೂ ಏರುಪೇರಾಗುವಂತದ್ದನ್ನು ಕಂಡಿದ್ದೇವೆ. ಅಲ್ಲದೇ ಗ್ಯಾಸ್ ಸಿಲಿಂಡರ್ಗಳ ವಿಚಾರದಲ್ಲೂ ಕೂಡ ಕೇಂದ್ರದ ಧೋರಣೆ ಸಹಿಸಲಾಗದ್ದು ಮತ್ತು ಯುಪಿಎ ಸರ್ಕಾರ ಹಗರಣಗಳ ಸರಮಾಲೆಯನ್ನೇ ಹೊತ್ತಿದೆ. ಇವೆಲ್ಲವನ್ನು ಗಮನವಿಟ್ಟು ಮಹಿಳಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿ, ಕೇಂದ್ರದ ಯುಪಿಎ ಸರ್ಕಾರದ ಈ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಹಗರಣಗಳ ಬಗ್ಗೆ ಮಾಹಿತಿ ನೀಡಿ ಎಂದು ಕರೆಕೊಟ್ಟರು.
ಸಾರ್ವಜನಿಕರಿಗೆ ಮಾಹಿತಿ: ಹಿಂದೆ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದ ಎನ್ಡಿಎ ಸರ್ಕಾರದ ಆಡಳಿತಾವಧಿಯಲ್ಲಿ ಅಗತ್ಯ ವಸ್ತುಗಳ ದರ ನಿಗ್ರಹ ಮತ್ತು ಸುಲಲಿತ ಗ್ಯಾಸ್ಸ್ರಬರಾಜು ಹಾಗೂ ಇನ್ನಿತರೆ ಉತ್ತಮ ಕಾರ್ಯಗಳನ್ನು ಸಾರ್ವಜನಿಕರಿಗೆ ಮಾಹಿತಿ ನೀಡಿ, ಬಿಜೆಪಿಯ ಅಭ್ಯರ್ಥಿಗಳಿಗೆ ಮತನೀಡಬೇಕೆಂದು ಕೇಳುವುದು ಒಳ್ಳೆಯದೆಂದು ತಿಳಿಸಿದರು.
ಸಂಘಟನೆಗಳ ಸಂಪರ್ಕ: ಬಿಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆಯಾದ ರೇಣುಕಾ ನಾಗರಾಜ್ ಮಾತನಾಡಿ, ನಗರ ಮಹಿಳಾ ಘಟಕ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಮಾಹಿತಿ ನೀಡಿ, ವಿಶೇಷವಾಗಿ 9 ತಂಡಗಳನ್ನು ರಚಿಸಿಕೊಂಡು ಸಮಾಜದ ಎಲ್ಲ ಸ್ತರದ ಸಂಘ-ಸಂಸ್ಥೆಗಳು, ವಿಶೇಷವಾಗಿ ಸ್ತ್ರೀಶಕ್ತಿ ಸಂಘಗಳು ಮತ್ತು ಇತರೆ ಮಹಿಳಾ ಸಂಘಟನೆಗಳ ಸಂಪರ್ಕ ಮಾಡುತ್ತಾ ಕಳೆದ 5 ವರ್ಷಗಳ ಬಿಜೆಪಿಯ ಅಭಿವೃದ್ಧಿ ಕಾರ್ಯಗಳ ವಿವರಣೆ ನೀಡಿ ಮತ್ತು ಸ್ಥಳೀಯ ಅಭ್ಯರ್ಥಿಗಳ ಬಗ್ಗೆ, ರಾಷ್ಟ್ರೀಯ ವಿಚಾರಗಳ ಬಗ್ಗೆ ಮನದಟ್ಟುಮಾಡಿ ಮತಯಾಚಿಸುತ್ತಿದ್ದೇವೆಂದು ವಿವರಿಸಿದರು.
ವೇದಿಕೆಯಲ್ಲಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಸುವರ್ಣಾ ಶಂಕರ್, ಜಿಲ್ಲಾ ಕಾರ್ಯದರ್ಶಿ ವಿದ್ಯಾಲಕ್ಷ್ಮಿಪತಿ, ನಗರಸಭಾ ಸದಸ್ಯೆ ಸುರೇಖಾ ಮುರಳೀಧರ್, ರೂಪಾ ಲಕ್ಷ್ಮಣ್ ಮುಂತಾದವರು ಉಪಸ್ಥಿತರಿದ್ದರು. ಪ್ರೀತಾ ವಂದಿಸಿದರು. ಸಭೆಯಲ್ಲಿ ಸುಮಾರು 250ಕ್ಕೂ ಮಹಿಳಾ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು.
ವಿವಿಧ ಪಕ್ಷಗಳ ಪ್ರಚಾರ
ಶಿವಮೊಗ್ಗ: ಸಿಗೆಹಟ್ಟಿ, ಬಿಬಿ ರಸ್ತೆ, ಎಸ್ಪಿಎಂ ರಸ್ತೆ, ಕೋಟೆ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್ ರೋಡ್ ಶೋ ನಡೆಸಿ ಮತಯಾಚಿಸಿದರು.
 ಇವರೊಂದಿಗೆ ಮಾಜಿ ಕೌನ್ಸಿಲರ್ ರುಕ್ಮಿಣಿ ವೇದವ್ಯಾಸ್, ತಾಲೂಕು ಬ್ರಾಹ್ಮಣ ಮಹಾಸಭಾದ ಪ್ರಮುಖ ಎಚ್.ಎಂ.ಸತ್ಯನಾರಾಯಣ, ದಾಸ ಸಾಹಿತ್ಯ ಪ್ರಾಜೆಕ್ಟ್ ಸಂಚಾಲಕ ಕಾವೇರಮ್ಮ, ಗಾಯತ್ರಿ ಬ್ರಾಹ್ಮಣ ಮಹಿಳಾ ಸಂಘದ ಮಧುಮತಿ ಮಂಜುನಾಥ್ ಹಾಗೂ ಹಲವಾರು ವಿಪ್ರ ಸಮುದಾಯದ ಮುಖಂಡರು, ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಈ ಸಂದರ್ಭದಲ್ಲಿ ಜೊತೆಗಿದ್ದು ಮತಯಾಚಿಸಿದರು.
ಬಿಜೆಪಿ ಪ್ರಚಾರ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಮಂಗಳವಾರ ಪುರಲೆ, ಗುರುಪುರ, ಗುಡ್ಡೇಕಲ್ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು.
 ಪ್ರಮುಖ ಬೀದಿಗಳಲ್ಲಿ ಸಾಗಿದ ಅವರು ಬಿಜೆಪಿ ಮತ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ನಟರಾಜ್, ನಗರಸಭಾ ಸದಸ್ಯ ಮೋಹನ್ ರೆಡ್ಡಿ ಮತ್ತು ಕಾರ್ಯಕರ್ತರು ಜೊತೆಗಿದ್ದರು. ಜೆಡಿಎಸ್ ಅಭ್ಯರ್ಥಿ ಶ್ರೀಕಾಂತ್ ಬಿಬಿ ರಸ್ತೆ, ಸಿಗೆಹಟ್ಟಿ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಪಕ್ಷದ ನಗರಸಭಾ ಸದಸ್ಯರು, ಮುಖಂಡರು ಇದ್ದರು.
ಕೆಜೆಪಿ ಅಭ್ಯರ್ಥಿ ರುದ್ರೇಗೌಡರು ಹೊಸಮನೆ ಬಡಾವಣೆಯ ವಿವಿಧೆಡೆಗಳಲ್ಲಿ ಪ್ರಚಾರ ನೀಡಿ ಯಡಿಯೂರಪ್ಪನವರ ಕೈ ಬಲಪಡಿಸುವಂತೆ ಕೋರಿದರು. ಶಿವಮೊಗ್ಗದ ಚಿತ್ರಣ  ಬದಲು ಮಾಡಿದ್ದು ಯಡಿಯೂರಪ್ಪ, ಮತ್ತಷ್ಟು ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಕೆಜೆಪಿಯನ್ನು ಗೆಲ್ಲಿಸುವಂತೆ ಕೋರಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.