ಶಿವಮೊಗ್ಗ

ಅಭ್ಯರ್ಥಿಗಳಿಂದ ಭರ್ಜರಿ ಪ್ರಚಾರ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಏ,25
ವಿಧಾನಸಭೆ ಚುನಾವಣಾ ದಿನ ಹತ್ತಿರ ಬರುತ್ತಿದ್ದು, ಇತ್ತ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಭರ್ಜರಿ ಸಾಗುತ್ತಿದೆ. ನಗರ ಹಾಗೂ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಗಳು ಗುರುವಾರ ಕ್ಷೇತ್ರ ವ್ಯಾಪ್ತಿಯ ಬಡಾವಣೆ, ಗ್ರಾಮಗಳು, ಬೀದಿಗಳನ್ನು ಸುತ್ತಿ ಮತಯಾಚಿಸಿದರು.
ಬಿಜೆಪಿ: ದೆಹಲಿಯಿಂದ ವಾಪಸಾಗಿರುವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಗುರುವಾರ ಬೆಳಿಗ್ಗೆ ವಿನೋಬ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು. ಪ್ರಮುಖ ರಸ್ತೆಯಲ್ಲಿ ತಮ್ಮ ನೂರಾರು ಕಾರ್ಯಕರ್ತರರೊಂದಿಗೆ ಸಾಗಿ ಮತಯಾಚನೆ ಮಾಡಿದರು.
ಕಾಂಗ್ರೆಸ್: ಕಾಂಗ್ರೆಸ್ ಕೂಡ ಪ್ರಚಾರದಲ್ಲಿ ಹಿಂದೆ ಬಿದಿಲ್ಲ. ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್ ಅವರು ತಮ್ಮ ಬೆಂಬಲಿಗರೊಂದಿಗೆ ನಗರದ ವಿವಿಧೆಡೆ ಪ್ರಚಾರ ಸಭೆ ನಡೆಸಿ ಮತ ಯಾಚಿಸಿದರು. ಅದೇ ರೀತಿ ಪಕ್ಷದ ವಿವಿಧ ಘಟಕಗಳ ಮುಖಂಡರೂ ಸಹ ಮತ ಯಾಚನೆ ಮಾಡಿದರು.
ಕೆಜೆಪಿ: ಇನ್ನೂ ಕೆಜೆಪಿ ಅಭ್ಯರ್ಥಿ ಎಸ್. ರುದ್ರೇಗೌಡ ನಗರದ ಪೊಲೀಸ್ ವಸತಿ ಗೃಹಗಳಿಗೆ ಮತ್ತು 3ನೇ ವಾರ್ಡ್‌ನ ತ್ಯಾವರೇಚಟ್ನಳ್ಳಿಯ ಮನೆಗಳಿಗೆ ನೂರಾರು ಕಾರ್ಯಕರ್ತರೊಡನೆ ಪಾದಯಾತ್ರೆಯ ಮೂಲಕ ಮತ ಯಾಚಿಸಿದರು.
ನಂತರ  ಬಿ.ಎಸ್. ಯಡಿಯೂರಪ್ಪನವರಿಗೆ ಅಲ್ಪಸಂಖ್ಯಾತರ ಬಗ್ಗೆ ಇರುವ ಕಾಳಜಿ ಹಾಗೂ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಮುಂದಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳಿಸಿದರು. ಆದ್ದರಿಂದ ಮತಬಾಣಧವರು ಕೆಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು. ಈ ವೇಳೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಜೆಡಿಎಸ್: ಜೆಡಿಎಸ್ ಅಭ್ಯರ್ಥಿ ಎಂ. ಶ್ರೀಕಾಂತ್ ಅವರು ನಗರದ ಹೊಸಮನೆ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಪ್ರತಿ ಮನೆಗೆ ಭೇಟಿ ನೀಡಿ ಮತದಾರರ ಸಮಸ್ಯೆಗಳನ್ನು ಆಲಿಸಿದರು. ತಮ್ಮ ಬಡಾವಣೆಯಲ್ಲಿನ ಸಮಸ್ಯೆಗಳನ್ನು ಮತದಾರರು ಹೇಳಿಕೊಂಡರು. ಅಲ್ಲದೇ, ತಾವು ಚುನಾವಣೆಯಲ್ಲಿ ಆಯ್ಕೆ ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತೇಜಪ್ಪ, ಪಕ್ಷದ ಮುಖಂಡ ಗೋಪಿ, ಶ್ರೀಧರ್, ಗೋವಿಂದಣ್ಣ, ಗೋಪಾಲಕೃಷ್ಣ, ಅಶೋಕ್, ವೆಂಕಟೇಶ್ ಮತ್ತಿತರರು ಇದ್ದರು.
ಮತ್ತೊಂದೆಡೆ ಜೆಡಿಎಸ್‌ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ. ಸಮೀವುಲ್ಲಾ ಟಿಪ್ಪುನಗರ, ತುಂಗನಗರ ಹಾಗೂ ಮಂಜುನಾಥ ಬಡಾವಣೆಯಲ್ಲಿ ಪ್ರಚಾರ ಭಾಷಣ ಮಾಡುವ ಮೂಲಕ ಪಕ್ಷದ ಅಭ್ಯರ್ಥಿ ಎಂ. ಶ್ರೀಕಾಂತ್ ಪರ ಮತಯಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.