ಗಾಂಧಿಪಾರ್ಕ್ನಲ್ಲಿ ಮತದಾರರ ಜಾಗೃತಿ ಗೀತೆ (ಸುದ್ದಿ ಸಂಕ್ಷೇಪ)
ಶಿವಮೊಗ್ಗ: ಗಾಂಧಿ ಪಾರ್ಕ್ನಲ್ಲಿರುವ ಸಂಗೀತ ಕಾರಂಜಿಯಲ್ಲಿ ಮತದಾರರ ಜಾಗೃತಿಯ ಗೀತೆಯನ್ನು ಅಳವಡಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಹೇಳಿದ್ದಾರೆ.
ಜ.27ರಂದು ಬೆಳಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದ ಎದುರು ಸಾರ್ವಜನಿಕರಿಂದ ಸಹಿ ಸಂಗ್ರಹಿಸುವ ಅಭಿಯಾನ ಕೈಗೊಳ್ಳಲಾಗಿದೆ. 100 ಅಡಿ ಉದ್ದದ ಬ್ಯಾನರ್ನಲ್ಲಿ ಈ ಸಹಿಗಳನ್ನು ಸಂಗ್ರಹಿಸಲಾಗುವುದು ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮತದಾರರ ಜಾಗೃತಿಗೆ ಪಂಜಿನ ಮೆರವಣಿಗೆಯನ್ನೂ ಸಹ ಆಯೋಜಿಸಲಾಗಿದೆ ಎಂದ ಅವರು, ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.70ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.80ರಷ್ಟು ಮತದಾನ ಆಗುವಂತೆ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.
ವ್ಯಾಪಕ ಪ್ರಚಾರ: ಮತದಾರರ ಜಾಗೃತಿಗೆ ಜಿಲ್ಲೆಯಾದ್ಯಂತ ವ್ಯಾಪಕ ಕಾರ್ಯಕ್ರಮಗಳು ನಡೆಯುತ್ತಿದ್ದು, 322 ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಇವುಗಳನ್ನು ಅಳವಡಿಸಿದ್ದು, ನೂರಾರು ಆಟೋಗಳ ಹಿಂಬದಿಯಲ್ಲಿ ಮೇ 5ರಂದು ಮತದಾನಕ್ಕೆ ಆಗಮಿಸುವಂತೆ ಕೋರುವ ಬಿತ್ತಿಪತ್ರಗಳು ಕಾಣಸಿಗುತ್ತಿವೆ.
ಜತೆಗೆ ಮತದಾನಕ್ಕೆ ಬರುವಂತೆ ಕೋರುವ ಘೋಷಣೆ ಹೊಂದಿದ ಒಂದು ಸಾವಿರ ರಬ್ಬರ್ ಸ್ಟಾಂಪ್ಗಳನ್ನು ಅಂಚೆ ಕಚೇರಿ, ಬ್ಯಾಂಕ್, ಗ್ರಾಮ ಪಂಚಾಯ್ತಿ, ಕಂದಾಯ ಇಲಾಖೆಗೆ ನೀಡಿದ್ದು, ಅವರು ಸಾರ್ವಜನಿಕರಿಗೆ ನೀಡುವ ದಾಖಲೆಗಳ ಮೇಲೆ ಇದನ್ನು ಪ್ರಕಟಿಸುತ್ತಾರೆ. ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸುವ 1,35,000 ಪತ್ರಗಳನ್ನು ನೀಡಿದ್ದು, ಪೋಷಕರು ಸಹಿ ಮಾಡಿರುವ 25 ಸಾವಿರ ಪತ್ರಗಳನ್ನು ವಾಪಸ್ ಸಂಗ್ರಹಿಸಲಾಗಿದೆ ಎಂದರು.
ಸಂತೆ, ಜಾತ್ರೆ ನಿಷೇಧ: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2013ರ ಅಂಗವಾಗಿ ಮೇ 5ರಂದು ಆಯನೂರು, ಭದ್ರಾವತಿ ನಗರ, ಕಾರ್ಗಲ್, ಶಿರಾಳಕೊಪ್ಪ, ನಗರ ಹೋಬಳಿ ಹಾಗೂ ಮೂಡುಗೊಪ್ಪಗಳಲ್ಲಿ ಸಂತೆಯನ್ನು ನಡೆಸದಂತೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಯುವರು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಇಂದು ಬಿಎಸ್ ವೈ ಪ್ರಚಾರ ಸಭೆ
ಶಿವಮೊಗ್ಗ: ಕೆಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಚಾರ ಹಾಗೂ ಬಹಿರಂಗಸಭೆ ನಡೆಸಲಿದ್ದಾರೆ.
ಬೆಳಗ್ಗೆ 8.15ಕ್ಕೆ ಕೃಷಿ ನಗರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಅವರು ನಂತರ ಸೋಮಿನಕೊಪ್ಪ, ಬಾಪೂಜಿ ನಗರ ಹಾಗೂ ಸಾವರ್ಕರ್ ನಗರದಲ್ಲಿ ಪ್ರಚಾರ ಸಭೆ ನಡೆಸುವರು. 11 ಗಂಟೆಗೆ ಹೊಳಲೂರಿಗೆ ತೆರಳಿ ಬಹಿರಂಗ ಸಭೆಯನ್ನುದ್ದೇಶಿ ಮಾತನಾಡುವರು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

