ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ
ಕಪ್ರ ವಾರ್ತೆ, ಭದ್ರಾವತಿ, ಏ.29
ವಿಧಾನಸಭೆಗೆ ಸಿ.ಎಂ. ಇಬ್ರಾಹಿಂರಂತಹ ನಾಯಕರ ಅವಶ್ಯಕತೆಯಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಎನ್. ಸಿದ್ದರಾಮಯ್ಯ ಹೇಳಿದರು.
ಸೋಮವಾರ ಪಟ್ಟಣದ ಕನಕ ಮಂಟಪ ಮೈದಾನದಲ್ಲಿ ಕಾಂಗ್ರೆಸ್ ಪ್ರಚಾರದಲ್ಲಿ ಮಾತನಾಡಿ, ಇಬ್ರಾಹಿಂ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹಾಗೂ ತಾವೇ ಒಂದು ಕೋಟಿ ಕೊಡುವುದಾಗಿ ಹಿಂದಿನ ಶಾಸಕ ಬಿ.ಕೆ. ಸಂಗಮೇಶ್ವರ್ ತಾಕೀತು ಮಾಡಿದ್ದರು. ಆದರೆ ನಂತರ ಅವರು ಭಾವೋದ್ವೇಗಕ್ಕೊಳಗಾಗಿ ಹಾಗೆ ಮಾತನಾಡಿದ್ದಾಗಿ ಹಾರಿಕೆ ಮಾತನ್ನಾಡಿದ್ದರೆಂದು ಸಿದ್ದರಾಮಯ್ಯ ತಿಳಿಸಿದರು.
ಹೆಬ್ಬಯಕೆ: ಇಬ್ರಾಹಿಂ ಅಧಿಕಾರದ ಬೆನ್ನತ್ತಿ ಎಂದೂ ಹೋದವರಲ್ಲ. ಆದರೆ ತಮ್ಮ ತವರೂರಿಗೆ ಏನನ್ನಾದರೂ ಮಾಡಬೇಕೆಂಬ ಹೆಬ್ಬಯಕೆಯನ್ನು ವರಿಷ್ಟರಲ್ಲಿ ತೋಡಿಕೊಂಡಾಗ ಪಕ್ಷದ ಹೈಕಮಾಂಡ್ ಅವರನ್ನು ಭದ್ರಾವತಿಯಿಂದ ಸ್ಪರ್ಧಿಸಲು ಟಿಕೆಟ್ ನೀಡಿತೆಂದು ಸ್ಪಷ್ಟಪಡಿಸಿದರು. ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷದ ದೇಶದ ಆಗ್ರ ನಾಯಕರಲ್ಲೊಬ್ಬರು. ಜೆಡಿಎಸ್ ಇವರಿಗೆ 2004ರಲ್ಲಿ ಮೋಸ ಮಾಡಿದಾಗ ರಾಜಕೀಯವೆ ಬೇಡವೆಂಬ ನಿರ್ಧಾರ ತಳೆದಿದ್ದ ಅವರನ್ನು ತಾವು ಮಹದೇವಪ್ಪ ಮತ್ತು ಸತೀಶ್ ಜಾರಕಿಹೊಳಿ ಸೇರಿ ಕಾಂಗ್ರೆಸ್ಗೆ ಬರುವಂತೆ ಮನವೊಲಿಸುವಲ್ಲಿ ಸಫಲರಾಗಿದ್ದೆವು ಎಂದು ಹೇಳಿದರು.
ಯೋಗ್ಯತೆಯೇ ಇಲ್ಲ: ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ವಿಧಾನಸಭೆಯ ಮರ್ಯಾದೆ ಹರಾಜಾಗಿಬಿಟ್ಟಿದೆ. ಬರಗಾಲದ ಬಗ್ಗೆ ಗಂಭೀರ ಚರ್ಚೆಯಾಗುತ್ತಿದ್ದರೆ ಬಿಜೆಪಿ ಶಾಸಕರು ಸದನದಲ್ಲಿ ಬ್ಲೂಫಿಲಂ ನೋಡಿಕೊಂಡು ಮಜಾ ಮಾಡುತ್ತಿದ್ದರು. ಇವರಿಗೆ ಪುನಃ ಸರ್ಕಾರ ರಚಿಸಲು ಯೋಗ್ಯತೆಯೇ ಇಲ್ಲ. ಕಳೆದ ಐದು ವರ್ಷಗಳಲ್ಲಿ ರಾಜ್ಯಸರ್ಕಾರವನ್ನು ಬಿಜೆಪಿ ಲೂಟಿ ಮಾಡಿದೆ. ಡಿನೋಟಿಫಿಕೇಶನ್, ಕೆಐಡಿಬಿ ಜಮೀನು ಹಗರಣ, ಗುತ್ತಿಗೆ ಹಗರಣ, ಗಣಿ ಹಗರಣ ಹೀಗೆ ಹಲವಾರು ಹಗರಣಗಳ ಸರಮಾಲೆಯಲ್ಲಿ ಸಿಕ್ಕಿಕೊಂಡು ರಾಜ್ಯದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ. ಯಡಿಯೂರಪ್ಪನವರು 24 ದಿನ ಜೈಲಿಗೆ ಹೋದದ್ದು ಈ ದೇಶದ ಪರವಾಗಿ ಹೋರಾಟ ಮಾಡಿಯಲ್ಲ, ಬದಲಾಗಿ ಕೋಟ್ಯಂತರ ರು.ಗಳನ್ನು ಲೂಟಿ ಮಾಡಿದ್ದಕ್ಕಾಗಿ. ಡಿನೋಟಿಫಿಕೇಶನ್ ಹಗರಣದಲ್ಲಿ ಜಿಂದಾಲ್ನಿಂದ ಪ್ರೇರಣ ಟ್ರಸ್ಟಿಗೆ ಜಮಾ ಆಗಿದ್ದು 40 ಕೋಟಿ ರು.ಗಳು. ಅದೂ ಜೈಲಿಗೆ ಹೋಗುವಾಗ ರಾಜಾರೋಷವಾಗಿ ಪಟಾಕಿ ಹೊಡಿಸಿಕೊಂಡು ಹೋದದ್ದು ನಾಚಿಕೆಗೇಡಿನ ಸಂಗತಿ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ರಾಜಕೀಯ ಪಕ್ಷಗಳೇ ಅಲ್ಲ: ಬಿಜೆಪಿ, ಕೆಜೆಪಿ ಮತ್ತು ಜೆಡಿಎಸ್ ರಾಜಕೀಯ ಪಕ್ಷಗಳೇ ಅಲ್ಲ. ಏಕೆಂದರೆ ಅಲ್ಲಿ ಪ್ರಜಾಪ್ರಭುತ್ವ ನೆಲೆಯೇ ಇಲ್ಲ. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ ಮತ್ತು ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.
ಜೆಡಿಎಸ್ ಅಪ್ಪಮಕ್ಕಳ ಪಕ್ಷ. ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಬಿಟ್ಟರೆ ಅಲ್ಲಿ ಯಾರು ಬೆಳೆಯುವಂತಿಲ್ಲ. ಮನೆಮಗನಂತಿದ್ದ ಬಿ.ಎಲ್. ಶಂಕರ್ ಮತ್ತು ಕೆ.ಆರ್. ಪೇಟೆ ಕೃಷ್ಣ ಅವರನ್ನೇ ಹೊರಹಾಕಿದ್ದಾರೆಂದಮೇಲೆ ಇನ್ನು ಯಾರಿಗೆ ತಾನೇ ಅಲ್ಲಿ ಬೆಲೆ ಸಿಗುತ್ತದೆಂದು ಅವರು ಕುಹಕವಾಡಿದರು.
ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಇಬ್ರಾಹಿಂ, ಎಐಸಿಸಿ ಸದಸ್ಯೆ ಬಲ್ಕಿಶ್ ಬಾನು, ಕೆ.ವಿ. ಸತೀಶ್ಗೌಡ, ಎಚ್.ಸಿ. ಯೋಗೇಶ್, ಮಹಮದ್ ಸನಾವುಲ್ಲಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್, ಎಐಸಿಸಿ ಸದಸ್ಯ ಸಂಜಯ್ ಬಾಫ್ನಾ, ಚುನಾವಣಾ ವೀಕ್ಷಕ ಜಿತೇಂದ್ರ ದೇಶ್ಪ್ರಭು, ಮೈಲಾರಪ್ಪ, ಹನುಮಮ್ಮ ಎಚ್. ನರಸಿಂಹಯ್ಯ ಮಾತನಾಡಿದರು.
ಚೂಡಾನಾಯ್ಕ, ಹ.ಬ. ವೀರಬಸಪ್ಪ, ಬಿ.ಎಂ. ಚಂದ್ರಪ್ಪ, ಕೆ.ಆರ್. ಬಸಪ್ಪ, ಭೋಜಾನಾಯ್ಕ, ಕೆ.ಎಂ. ಶಶಿಧರ್, ಸಿ.ಕೆ. ಅಸ್ಮತ್ ಪಾಶ, ಕೆ.ವಿ. ಸತೀಶ್ಗೌಡ, ಎಚ್.ಎಸ್. ಗುರುಶಾಂತಪ್ಪ, ಎಸ್.ಜಿ. ರಾಜು, ಜಾರ್ಜ್, ಮಹದೇವ, ನೂರ್ಜಹಾನ್ ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದರು. ಟಿ.ಆರ್. ಸತ್ಯನಾರಾಯಣ, ಎಸ್.ಎಲ್. ಲಕ್ಷ್ಮಣ್, ಮುರ್ತುಝಾಖಾನ್, ಪ್ರಭಾಕರ್, ಪೀರ್ ಶರೀಫ್, ಲಕ್ಷ್ಮಮ್ಮ, ಮಹಮದ್ ಗೌಸ್, ಟಿಪ್ಪು ಸುಲ್ತಾನ್, ಅತ್ತಿಗುಂದ ಶ್ರೀನಿವಾಸ್, ಲಕ್ಷ್ಮಿದೇವಿ, ಎಸ್.ವೈ. ವಡೆಯರ್, ಅಡ್ಡು, ಮಂಜುನಾಥ ಭಂಡಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

