ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಅಸ್ತ್ರ: ಜೆಡಿಎಸ್
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.29
ಬಿಜೆಪಿ ಭ್ರಷ್ಟಾಚಾರವೇ ನಮ್ಮ ಅಸ್ತ್ರ. ಅವರ ಆಡಳಿತದಲ್ಲಿ ಅವರು ಅಭಿವೃದ್ಧಿಯಾಗಿದ್ದಾರೆಯೇ ಹೊರತು ರಾಜ್ಯ, ಜಿಲ್ಲೆ ಅಭಿವೃದ್ಧಿ ಆಗಿಲ್ಲ ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ. ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಮೆಗ್ಗಾನ್ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರಗಳ ಅಗತ್ಯವಿದೆ. ಆದರೆ, ಅದಕ್ಕೆ ನೆರವು ನೀಡದೇ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಶ್ರೀಗಂಧ ಸಂಸ್ಥೆಗೆ ಡಯಾಲಿಸಿಸ್ ಯಂತ್ರ ಸ್ಥಾಪನೆಗಾಗಿ ಸರ್ಕಾರದಿಂದ 1 ಕೋಟಿ ಅನುದಾನ ಪಡೆಯುತ್ತಾರೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅವರು ಡಯಾಲಿಸಿಸ್ ಕೇಂದ್ರ ಸ್ಥಾಪನೆ ಮಾಡುವುದಾದರೆ ಮಾಡಲಿ. ಆದರೆ ಅದಕ್ಕೆ ಸರ್ಕಾರಿ ಅನುದಾನ ಏಕೆ ಬೇಕು, ಸ್ವಂತ ಅನುದಾನದಿಂದ ಬೇಕಾದರೆ ಸ್ಥಾಪನೆ ಮಾಡಲಿ ಎಂದರು.
ತಮಿಳು ಸಮುದಾಯದವರು ಒಂದೇ ಪಕ್ಷಕ್ಕೆ ಸೇರಿದವರೇನಲ್ಲ. ಆದರೆ, ಕೆಲವರು ತಮಿಳು ಸಮುದಾಯ ಒಂದೇ ಪಕ್ಷಕ್ಕೆ ಸೇರಿದ್ದೆಂದು ಬಿಂಬಿಸುತ್ತಿದ್ದಾರೆ. ಆದರೆ ಈ ಸಮುದಾಯದ ಬಹುಸಂಖ್ಯಾತರು ಜೆಡಿಎಸ್ ಜತೆಗೂ ಇದ್ದಾರೆ ಎಂದ ಅವರು ಪತ್ರಿಕಾಗೋಷ್ಠಿ ಸಂದರ್ಭದಲ್ಲೇ ಜೆಡಿಎಸ್ ಸೇರ್ಪಡೆಯಾದ ತಮಿಳು ಸಮುದಾಯದ ಪ್ರಮುಖರನ್ನು ಪರಿಚಯಿಸಿದರು.
ಅಧಿಕಾರ ದುರುಪಯೋಗ: ಸರ್ಕಾರಿ ಅಧಿಕಾರಿಗಳು ನೇರವಾಗಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿಯವರಿಗೆ ದೂರು ನೀಡಲಾಗಿದೆ ಎಂದು ಹೇಳಿದ ಶ್ರೀಕಾಂತ್, ಅವರು ಬಿಜೆಪಿ ಪರ ಪ್ರಚಾರ ಮಾಡುವುದಿದ್ದರೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸದಸ್ಯತ್ವ ಪಡೆದು ಪ್ರಚಾರ ಮಾಡಲಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಮಲಾಕರ್ ಹ್ಹಾಗೂ ನಗರಸಭೆಯ ಅಧಿಕಾರಿ ಸುಬ್ರಹ್ಮಣ್ಯ ಅವರು ನೇರವಾಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಇವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಬೇಕಾಗುತ್ತದೆ.
ಅದರ ಪರಿಣಾಮ ಬೇರೆಯೇ ಇರುತ್ತದೆ ಎಂದು ಎಚ್ಚರಿಸಿದರು.
ಮೂರು ವರ್ಷ ಜಿಲ್ಲೆಯಲ್ಲಿ ಕೆಲಸ ಮಾಡಿದ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಇವರಿಬ್ಬರು ಹಲವು ವರ್ಷದಿಂದ ಜಿಲ್ಲೆಯಲ್ಲಿದ್ದಾರೆ. ಏಕೆ ವರ್ಗಾಯಿಸಿಲ್ಲ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಂಗವಿಕಲರ ಘಟಕದ ರಾಜ್ಯಾಧ್ಯಕ್ಷ ಬಸವಣ್ಣ, ವಿಧಾನಪರಿಷತ್ಮಾಜಿ ಸದಸ್ಯ ಜಿ. ಮಾದಪ್ಪ, ಪಕ್ಷದ ಪ್ರಮುಖರಾದ ರಾಮಕೃಷ್ಣ, ರೇಖಾ ಚಂದ್ರಶೇಖರ್, ತೇಜಪ್ಪ, ನಯಾಜ್ ಅಹಮದ್ ಸೇರಿದಂತೆ ಹಲವರು ಮಂದಿ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.
ನಟಿ ರಕ್ಷಿತಾ ಪ್ರೇಮ್ ಬಿರುಸಿನ ಪ್ರಚಾರ
ಶಿವಮೊಗ್ಗ: ಚಿತ್ರನಟಿ ರಕ್ಷಿತಾ ಸೋಮವಾರ ನಗರದ ವಿವಿಧ ಭಾಗಗಳಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಬಿರುಸಿನ ಮತಪ್ರಚಾರ ಮಾಡಿದರು.
ಇಲ್ಲಿನ ಗುರುಪುರ, ಚಿಕ್ಕಲ್ ಭಾಗದಲ್ಲಿ ಮನೆ-ಮನೆಗೆ ತೆರಳಿ ರಕ್ಷಿತಾ ಪ್ರಚಾರ ಆರಂಭಿಸುತ್ತಿದ್ದಂತೆ ಸಾರ್ವಜನಿಕರು ಕಿಕ್ಕಿರಿದು ಸೇರಿದ್ದರು. ಈ ಸಂದರ್ಭದಲ್ಲಿ ರಕ್ಷಿತಾ ಕೆಲಕಾಲ ತೆನೆಹೊತ್ತು ಫೋಟೋಗೆ ಫೋಸ್ ನೀಡಿದರು. ಅಭ್ಯರ್ಥಿ ಶ್ರೀಕಾಂತ್ ನಿರಂತರ ಸಮಾಜಸೇವೆಯಲ್ಲಿ ತೊಡಗಿದ್ದು, ಮತಚಲಾಯಿಸುವಂತೆ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಇದೇ ಸಂದರ್ಭದಲ್ಲಿ ಕರೆನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೆ ಆಗುತ್ತಾರೆ. ಜೆಡಿಎಸ್ಗೆ ಬಹುಮತ ಖಚಿತ ಎಂದು ಭವಿಷ್ಯ ನುಡಿದರು. ನಾನು ಯಾವುದೇ ಅಪೇಕ್ಷೆಯಿಂದ ಜೆಡಿಎಸ್ ಸೇರಿಲ್ಲ. ಆದರೂ ಪಕ್ಷ ನನಗೆ ಸೂಕ್ತ ಸ್ಥಾನ ನೀಡುವ ಭರವಸೆ ನೀಡಿದೆ. ಈಗಾಗಲೇ ನಾನು ಮಾಹಿತಿ ಸಂಗ್ರಹಿಸಿರುವಂತೆ ಎಂ. ಶ್ರೀಕಾಂತ್ ಗೆಲುವಿಗೆ ಉತ್ತಮ ವಾತಾವರಣವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಚಾರದ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ. ಶ್ರೀಕಾಂತ್ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

