ಶಿವಮೊಗ್ಗ

ಬಿಎಸ್‌ವೈ ನಿಜವಾದ ಜನನಾಯಕ: ಶೃತಿ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.30
ಬಿ.ಎಸ್. ಯಡಿಯೂರಪ್ಪ ರಾಜ್ಯದ ನಿಜವಾದ ಜನನಾಯಕ ಎಂದು ಚಿತ್ರನಟಿ ಶೃತಿ ಬಣ್ಣಿಸಿದ್ದಾರೆ.
ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ ಅಭಿವೃದ್ಧಿ ಕಾಮಗಾರಿಗಳೇ ಈ ಮಾತಿಗೆ ಸಾಕ್ಷಿಯಾಗಿವೆ. ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು ಎಂಬ ತತ್ವದ ಮೂಲಕ ಆಡಳಿತ ನಡೆಸಿದ ಧೀಮಂತ ನಾಯಕ ಎಂದು ಗುಣಗಾನ ಮಾಡಿದ್ದಾರೆ.
ಮಂಗಳವಾರ ಕೆಜೆಪಿ ಮಹಿಳಾ ಕಾರ್ಯಕರ್ತೆಯರ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ವಿಶೇಷವಾಗಿ ಮಹಿಳೆಯರ ಸರ್ವಾಂಗೀಣ ಬೆಳವಣಿಗೆಗೆ ಹಲವು ಯೋಜನೆ ಜಾರಿಗೊಳಿಸಿದರು. ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾರಿಗೆ ತಂದ ಭಾಗ್ಯಲಕ್ಷ್ಮೀ ಯೋಜನೆ ಕ್ರಾಂತಿಕಾರಿಯಾದದ್ದು. ಇದರಿಂದ ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಕಡಿಮೆಯಾಗುವಂತಾಯಿತು ಎಂದು ಹೇಳಿದರು. ರಾಜ್ಯಾದ್ಯಂತ ಕೆಜೆಪಿ ಪರ ಅಲೆ ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಕೆಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಜಯ ಸಾಧಿಸಬೇಕು ಎಂದರು.
ಸಮಾರಂಭದಲ್ಲಿ ಕೆಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಿ. ಮಂಜುಳಾ, ರಾಜ್ಯ ಕಾರ್ಯದರ್ಶಿ ಅನಂತರಾಮ್, ಜಿಲ್ಲಾಧ್ಯಕ್ಷ ಎಸ್. ಜ್ಯೋತಿ ಪ್ರಕಾಶ್, ಗೀತಾ ಇದ್ದರು.

ಮೇರೆ ಮೀರಿದ ಶೃತಿಮೇಲಿನ ಅಭಿಮಾನ
ಗಾಡಿಕೊಪ್ಪದ ಲಗನ ಕಲ್ಯಾಣ ಮಂದಿರದಲ್ಲಿ ಮಂಗಳವಾರ ಕೆಜೆಪಿ ಮಹಿಳಾ ಘಟಕ ಆಯೋಜಿಸಿದ್ದ ಮಹಿಳಾ ಕಾರ್ಯಕರ್ತೆಯರ ಸಮಾವೇಶದಲ್ಲಿ ಚಿತ್ರನಟಿ ಶೃತಿಯವರು ಅಭಿಮಾನಿಗಳ ಕೈಯಲ್ಲಿ ಸಿಲುಕಿ ಫಜೀತಿಗೊಳಗಾದ ಪ್ರಸಂಗ ನಡೆಯಿತು.
ಶೃತಿಯವರ ಕೈ ಕುಲುಕಲು, ಆಟೋಗ್ರಾಫ್ ಪಡೆಯಲು, ಮಾತನಾಡಿಸಲು ಮಹಿಳೆಯರು ಏಕಕಾಲಕ್ಕೆ ಮುಗಿಬಿದ್ದಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ನೂಕಾಟ, ತಳ್ಳಾಟದಿಂದ ಕೆಲ ಕುರ್ಚಿಗಳೂ ಕೂಡ ಜಖಂಗೊಳ್ಳಬೇಕಾಯಿತು. ಮಹಿಳೆಯರ ಗುಂಪಿನಲ್ಲಿ ಬಂಧಿಯಾಗಿದ್ದ ಶೃತಿ ಹೊರಬರಲು ಹರಸಾಹಸ ಪಡುವಂತಾಯಿತು. ಅಭಿಮಾನಿಗಳ ಅಬ್ಬರಕ್ಕೆ ಶೃತಿಯವರೇ ಬೆಸ್ತುಬಿದ್ದರು. ಪರಿಸ್ಥಿತಿ ಗಮನಿಸಿದ ಪಕ್ಷದ ಮುಖಂಡರು, ಶೃತಿಯವರನ್ನು ಸುತ್ತುವರಿದಿದ್ದ ಮಹಿಳೆಯರನ್ನು ಚದುರಿಸಿ ಕಲ್ಯಾಣ ಮಂದಿರದಿಂದ ಹೊರ ಕರೆತರುವಷ್ಟರಲ್ಲಿ ಹೈರಾಣಾಗಿ ಹೋಗಿದ್ದರು. ಇಷ್ಟೆಲ್ಲಾ ಆದರೂ ಶೃತಿಯವರು ಮಾತ್ರ ಮುನಿಸಿಕೊಳ್ಳದೆ  ಕೈಕುಲುಕುತ್ತಾ ಸಾಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.