ಇಷ್ಟು ಬೇಗ ನೀರು ಬಿಟ್ಟಿದ್ದು ಇದೇ ಮೊದಲು
ಜೋಗ್ಫಾಲ್: ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಗುರುವಾರ ಜಲಾಶಯದ 11 ಕ್ರಸ್ಟ್ಗೇಟ್ಗಳ ಮೂಲಕ 27,500 ಕ್ಯೂಸೆಕ್ನಷ್ಟು ನೀರನ್ನು ಹೊರಬಿಡಲಾಗುತ್ತಿದೆ.
ರಾಜ್ಯದ ಬಹುಪಾಲು ವಿದ್ಯುತ್ ಪೂರೈಸುವ ಶರಾವತಿ ಯೋಜನಾ ಪ್ರದೇಶದ ಪ್ರಮುಖ ಜಲಾಶಯವಾಗಿರುವ ಲಿಂಗನಮಕ್ಕಿ ಜಲಾಶಯ 1964 ರಲ್ಲಿ ಕಟ್ಟಲಾಗಿದ್ದು, ಇದುವರೆವಿಗೂ 13 ಬಾರಿ ಭರ್ತಿಯಾಗಿತ್ತು. ಇದು 14 ನೇ ಬಾರಿಯಾಗಿದೆ. ಆದರೆ ಆಗಸ್ಟ್ 1ರಂದು ಜಲಾಶಯದಿಂದ ನೀರನ್ನು ಹೊರಬಿಡುತ್ತಿರುವುದು ಇದೇ ಮೊದಲು.
ದಾಖಲೆ: ಈ ಹಿಂದೆ 2007 ರಲ್ಲಿ ಆಗಸ್ಟ್ 7ರಂದು ನೀರನ್ನು ಬಿಟ್ಟಿರುವುದು ಈವರೆಗಿನ ದಾಖಲೆಯಾಗಿತ್ತು. 2007ರಲ್ಲಿ ಜಲಾಶಯದಿಂದ 5 ಬಾರಿ ಗೇಟು ತೆರೆದು ನೀರನ್ನು ಹೊರಬಿಡಲಾಗಿದ್ದು, ಈ ಬಾರಿಯೂ ಇನ್ನೂ ಸುಮಾರು 2 ತಿಂಗಳುಗಳ ಕಾಲ ಮಳೆಗಾಲವಿರುವುದರಿಂದ ಮತ್ತಷ್ಟು ನೀರನ್ನು ಹೊರಬಿಡುವ ಸಾಧ್ಯತೆಗಳಿವೆ.
1,819 ಅಡಿ ಗರಿಷ್ಟ ಮಟ್ಟದ ಜಲಾಶಯದಲ್ಲಿ ಗುರುವಾರ ನೀರಿನ ಮಟ್ಟವು 1815.40 ಅಡಿಗೆ ತಲುಪಿತ್ತು. ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಮಧ್ಯಾಹ್ನ 12.15 ರ ವೇಳೆಗೆ ಜಲಾಶಯದ ಎಲ್ಲಾ 11 ಗೇಟ್ಗಳನ್ನು 2 ಅಡಿ ಮೇಲೆತ್ತಿ ನೀರನ್ನು ಹೊರಬಿಡುವ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ನಿಗಮದ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರ ರಾಜಮುಡಿ ಪತ್ರಿಕೆಯೊಂದಿಗೆ ಮಾತನಾಡಿ, ಹೆಚ್ಚಿನ ನೀರಿನ ಒಳಹರಿವು ಇದ್ದುದರಿಂದ ವ್ಯವಸ್ಥಾಪಕರ ಜೊತೆ ಮಾತುಕತೆ ನಡೆಸಿ ನೀರನ್ನು ಹೊರ ಬಿಡಲು ನಿರ್ಧರಿಸಲಾಯಿತು ಎಂದು ತಿಳಿಸಿದರು.
ನಿರಂತರ ವಿದ್ಯುತ್: ನಿಗಮದ ವಿದ್ಯುತ್ ವಿಭಾಗದ ಮುಖ್ಯ ಅಭಿಯಂತರ ಜಿ. ಹನುಮಂತಪ್ಪ, ನದಿ ಪಾತ್ರದಲ್ಲಿ ವಾಸಿಸುತ್ತಿರುವವರಿಗೆ ತೊಂದರೆಯಾಗದಂತೆ ಮತ್ತು ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಪರಿಸ್ಥಿತಿ ಇರುವುದರಿಂದ ಜಲಾಶಯದ ನೀರಿನ ಮಟ್ಟ 1,815 ತಲುಪಿದಾಗಲೇ ನೀರನ್ನು ಹೊರಬಿಡಲಾಗುತ್ತಿದೆ. ಈ ಬಾರಿ ವರುಣನ ಕೃಪೆಯಿಂದ ಜಲಾಶಯ ಭಾಗಶಃ ಭರ್ತಿಯಾಗಿರುವುದರಿಂದ ಬೇಸಿಗೆ ದಿನಗಳಲ್ಲಿ ನಿರಂತರವಾಗಿ ವಿದ್ಯುತ್ ಉತ್ಪಾದಿಸುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು.
ಜೋಗದ ರೌದ್ರನರ್ತನ: ಜೋಗ ಜಲಪಾತದಲ್ಲಿಯೂ ಶರಾವತಿಯ ದೃಶ್ಯ ವೈಭವ ಕಳೆಗಟ್ಟಿದ್ದು, ಜಲಪಾತದ ನಾಲ್ಕು ಧಾರೆಗಳೂ ಭೋರ್ಗರೆಯುತ್ತಿವೆ. ಇಲ್ಲಿಯೂ ಸಹ ಪ್ರವಾಸಿಗರಿಗಿಂತ ಸ್ಥಳೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಜಲಪಾತವು ಮಂಜು ಮುಸುಕಿನ ನಡುವೆ ಚೆಲ್ಲಾಟವಾಡುತ್ತಾ ತೋರುವ ರುದ್ರ ನರ್ತನವನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.
ಕಾರ್ಗಲ್ ಸಮೀಪವಿರುವ ಚೈನಾ ಗೇಟ್ ಅಣೆಕಟ್ಟೆಯಲ್ಲಿ ನೀರು ಭೋರ್ಗರೆಯುವ ದೃಶ್ಯ ಕಳೆಗಟ್ಟಿದ್ದು, ಸ್ಥಳೀಯರು ಮತ್ತು ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸಿ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಅಪಾಯದ ಮಟ್ಟ ಮೀರಿದ ಭದ್ರಾ
ಭದ್ರಾವತಿ: ಭದ್ರಾ ಜಲಾಶಯದಲ್ಲಿನ ಒಳಹರಿವು ಹೆಚ್ಚಾಗಿದ್ದು ಜಲಾಶಯದಿಂದ ಹೆಚ್ಚಿನ ನೀರನ್ನು ಹರಿದುಬಿಡಲಾಗಿರುವುದರಿಂದ ಕಡಮೆಯಾಗಿದ್ದ ಪ್ರವಾಹದ ಮಟ್ಟ ಭದ್ರಾ ನದಿಯಲ್ಲಿ ಗುರುವಾರ ಪುನಃ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದೆ. ಭದ್ರಾ ಜಲಾಶಯದಲ್ಲಿ ಗುರುವಾರ ಸಂಜೆ ಒಳಹರಿವು 61000 ಕ್ಯೂಸೆಕ್ಸ್ಗೂ ಹೆಚ್ಚಾಗಿದ್ದು ಹೊರಹರಿವು 50000 ಕ್ಯೂಸೆಕ್ಸ್ನಷ್ಟಿದ್ದು ಇದು ಗುರುವಾರ ರಾತ್ರಿ ಹೆಚ್ಚಾಗುವ ಸಂಭವವಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಪಟ್ಟಣದಲ್ಲಿ ಬಸ್ ನಿಲ್ದಾಣದ ಬಳಿ ಸಿದ್ದಾರೂಢನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸಸೇತುವೆ ಮಟ್ಟಕ್ಕೆ ನೀರು ಗುರುವಾರ ಸಂಜೆ ಹರಿಯುತ್ತಿದ್ದು ಯಾವುದೇ ವೇಳೆಯಲ್ಲೂ ನದಿ ನೀರು ಸೇತುವೆ ಮೇಲೆ ಹರಿಯುವ ಸಂಭವವಿರುವುದರಿಂದ ಸೇತುವೆ ಮೇಲೆ ಯಾರೂ ಓಡಾಡದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಗುರುವಾರ ರಾತ್ರಿ 8 ಗಂಟೆ ವೇಳೆಗೆ ಸೇತುವೆ ಬಳಿ ಯಾರೂ ಹೋಗದಂತೆ ಧ್ವನಿವರ್ಧಕದ ಮೂಲಕ ಪ್ರಕಟಿಸುತ್ತಿದ್ದರು. ರಾತ್ರಿ ಹತ್ತು ಗಂಟೆ ವೇಳೆಗೆ ಸೇತುವೆ ಮೇಲೆ ನೀರು ಹರಿಯುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಕವಲಗುಂದಿ, ಏಕೆಂಶಾ ಕಾಲೋನಿ, ಮೂಪಾ ಕಾಂಪೌಂಡ್ ಮುಂತಾದ ತಗ್ಗುಪ್ರದೇಶಗಳಲ್ಲಿ ಈಗಾಗಲೇ ನದಿನೀರು ಮನೆಗಳಿಗೆ ಹಾನಿಯನ್ನು ತಲಪಿಸಿದ್ದು ಸುಮಾರು 85 ಮನೆಗಳು ಜಲಾವೃತವಾಗಿವೆ. ತಾಲೂಕು ಆಡಳಿತ ರಚಿಸಿರುವ ನಾಲ್ಕು ತಂಡಗಳು ಹಾನಿಯ ಪ್ರಮಾಣವನ್ನು ಗಮನಿಸುತ್ತಿದ್ದು ಪೌರಾಯುಕ್ತರು ಮತ್ತು ನಗರಸಭೆ ಅಧಿಕಾರಿಗಳು ತಗ್ಗುಪ್ರದೇಶದಲ್ಲಿರುವ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚನೆ ನೀಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

