ಸುಮತಿ ಕೊಲೆ ಆರೋಪಿ ಪತ್ತೆ
ಕ.ಪ್ರ.ವಾರ್ತೆ, ಸಾಗರ, ಆ.5
ತೀವ್ರ ಕುತೂಹಲ ಕೆರಳಿಸಿದ್ದ ಜೋಗದ ಸುಮತಿ ಎಂಬ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಕಾರ್ಗಲ್- ಜೋಗ್ ಪಟ್ಟಣ ಪಂಚಾಯ್ತಿ ಸದಸ್ಯ ರವಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜೋಗ ಸಮೀಪದ ಕಣೆಕಾರ್ ಗ್ರಾಮದ ಸುಮತಿ ಎಂಬಾಕೆಯನ್ನು 2012ರ ಡಿಸೆಂಬರ್ 30ರಂದು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಜೋಗದಲ್ಲಿ ಮಹಿಳಾ ಸಂಘಟನೆಗಳು ಸರಣಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳ ರಚಿಸಲಾಗಿತ್ತು. ಇದರ ಪರಿಣಾಮ ಶಿಕಾರಿಪುರ ಡಿವೈಎಸ್ಪಿ ಜಿ.ಬಿ. ಮಂಜುನಾಥ್ ಮತ್ತವರ ತಂಡ ಆರೋಪಿಯನ್ನು ಪತ್ತೆಮಾಡಿದೆ. ಹಲವು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿ ಎಂಬಲ್ಲಿ ತಲೆ ಮರೆಸಿಕೊಂಡಿದ್ದ ಪಟ್ಟಣ ಪಂಚಾಯ್ತಿ ಸದಸ್ಯ ರವಿಯೇ ಈ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಮೊಬೈಲ್ ಜಾಡು ಹಿಡಿದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಪ್ರಕರಣದ ವಿವರ: ಕಳೆದ 2012ರ ಡಿಸೆಂಬರ್ 30ರಂದು ಜೋಗದ ಕಣೆಕಾರ್ ಗ್ರಾಮದ ಗಣಪ ಎಂಬುವವರ ಪುತ್ರಿ ಸುಮತಿ ಎಂಬಾಕೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಜೋಗದ ಕೆ.ಪಿ.ಸಿ. ಕಾಲೋನಿಯಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಸುಮತಿಗೆ ಜನವರಿ ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು. ಎಂದಿನಂತೆ ಬ್ಯೂಟಿಪಾರ್ಲರ್‌ನಲ್ಲಿ ಕೆಲಸ ಮುಗಿಸಿಕೊಂಡು ತನ್ನ ಮದುವೆ ಆಮಂತ್ರಣ ಪತ್ರಿಕೆಯನ್ನು ವಿತರಿಸಿ ಮನೆಗೆ ಹಿಂತಿರುಗುತ್ತಿದ್ದಳು.
ಸಂಜೆ 7ರ ಸಮಯದಲ್ಲಿ ಮನೆಗೆ ಕರೆಮಾಡಿ ತಾಯಿಗೆ ರಸ್ತೆಯ ಬಳಿ ಬರುವಂತೆಯೂ ತಿಳಿಸಿದ್ದ ಈಕೆ ಮನೆ ಹತ್ತಿರದ ಕಾಡು ದಾರಿಯಲ್ಲಿ ಕಿರುಚಿಕೊಂಡ ಸದ್ದು ಕೇಳಿ ತಾಯಿ ಗಾಬರಿಯಾಗಿ ನೋಡಿದಾಗ ಮಗಳನ್ನು ಯಾರೋ ಹತ್ಯೆಗೈದಿದ್ದರು.
ಡಿವೈಎಸ್‌ಪಿ ಜಿ.ಬಿ. ಮಂಜುನಾಥ್ ನೇತೃತ್ವದ ವಿಶೇಷ ತನಿಖಾ ತಂಡದಲ್ಲಿ ಜೋಗ ಪೊಲೀಸ್ ಠಾಣೆ ಎಎಸ್‌ಐ ಮಹಮದ್ ರಪಿ, ರತ್ನಾಕರ್ ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

