ಶಿಕ್ಷಣ ಇಲಾಖೆ ಲೋಪ ಸರಿಪಡಿಸಲು ಕ್ರಮ: ಕಿಮ್ಮನೆ
ಕಪ್ರ ವಾರ್ತೆ, ಹೊಸನಗರ, ಆ. 6
ಸುಮಾರು 4 ಲಕ್ಷ ನೌಕರರು, ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಶಿಕ್ಷಣ ಕ್ಷೇತ್ರ ಲೋಪವನ್ನು ಸರಿಪಡಿಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ತಾಲೂಕಿನ ನಗರದ ಗುಜರಿಪೇಟೆ ಸಭಾಭವನದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ಮುಂದಿನ ವರ್ಷದಲ್ಲಿ ಪಠ್ಯಪುಸ್ತಕ ಮತ್ತು ಸೈಕಲ್ ವಿತರಣೆಯಲ್ಲಿ ವಿಳಂಬವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಕೆಟ್ಟ ಸಚಿವನಾಗಲಾರೆ: ಸಚಿವನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಹೊರತು ಕೆಟ್ಟ ಸಚಿವ ಮಾತ್ರ ಆಗಲಾರೆ. ನನ್ನಿಂದ ಏನಾದರೂ ದುರುಪಯೋಗವಾದ ಮರುಕ್ಷಣದಲ್ಲೇ ಈ ಸ್ಥಾನದಲ್ಲಿ ಮುಂದುವರೆಯುದಿಲ್ಲ. ಯಾವುದರ ಮೋಹ ಕೂಡ ನನಗಿಲ್ಲ. ಹಾಗೆಯೆ ನನ್ನ ತಾಳ್ಮೆ, ಸಹನೆ ವೈಫಲ್ಯ ಎಂದು ಪರಿಗಣಿಸಬೇಡಿ. ಅದೇ ನನ್ನ ಶಕ್ತಿಯಾಗಿದ್ದು ವ್ಯವಸ್ಥೆ ಹಾಳು ಮಾಡುವ ಪ್ರಯತ್ನ ನಡೆದರೆ ಕ್ರಮ ಕೈಗೊಳ್ಳಲು ಯಾವುದೇ ಮುಲಾಜು ತೋರುವುದಿಲ್ಲ ಎಂದು ಎಚ್ಚರಿಸಿದರು.
ಈ ಬಾರಿ ತೀರ್ಥಹಳ್ಳಿ ಕ್ಷೇತ್ರದ ಚುನಾವಣೆಯಲ್ಲಿ ಒಳ್ಳೆಯತನಕ್ಕೆ ಜನ ಬೆಂಬಲಿಸುತ್ತಾರೆ ಎಂಬುದು ನಿಜವಾಗಿದೆ. ಹಾಗೆಯೆ ಅಭಿವೃದ್ಧಿಯಿಂದ ಮಾತ್ರ ಮತ ಬರುವುದಿಲ್ಲ ಎಂಬ ಸತ್ಯ ಕೂಡ ಮನವರಿಕೆಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಮಳೆಹಾನಿಗೆ ಪರಿಹಾರಕ್ಕೆ ಕ್ರಮ: ವಿಪರೀತ ಮಳೆಯಿಂದ ಉಂಟಾದ ಹಾನಿ ಬಗ್ಗೆ ಅಧಿಕಾರಿಗಳಿಂದ ಸೂಕ್ತ ವರದಿ ನೀಡಿದ್ದೇನೆ. ನೋಡಲ್ ಅಧಿಕಾರಿ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಸ್ಪಷ್ಟ ವರದಿ ನೀಡಬೇಕು. ಅಸಡ್ಡೆ ತೋರಿ, ಸ್ಥಳಕ್ಕೆ ಭೇಟಿ ನೀಡದೆ ಸುಳ್ಳು ವರದಿ ನೀಡಿದ್ದು ಗಮನಕ್ಕೆ ಬಂದರೆ ಅಂತಹ ಅಧಿಕಾರಿಯನ್ನು ಅಮಾನತು ಗೊಳಿಸುವುದಾಗಿ ಎಚ್ಚರಿಸಿದರು.
ಅಹವಾಲು: ಯಡೂರು, ನಿಟ್ಟೂರು, ಸಂಪೇಕಟ್ಟೆ, ರ್ಯಾವೆ, ದೋದೂರು, ಹೆಂಡೆಗದ್ದೆ, ಕರಿಮನೆ ಮತ್ತು ನಗರ ಹೋಬಳಿಯ ಮೂಲೆಯಿಂದ ಗ್ರಾಮಸ್ಥರು ಸಮಸ್ಯೆಗಳ ಅಹವಾಲನ್ನು ಸಲ್ಲಿಸಿದ್ದು, ಸಚಿವ ಕಿಮ್ಮನೆ ಪರಿಹಾರದ ಭರವಸೆ ನೀಡಿದರು.
ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ದೇವಗಂಗೆ ಚಂದ್ರಶೇಖರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಮಕ್ಕಿ ಮಹಾಬಲೇಶ್, ಕೆಪಿಸಿಸಿ ಸದಸ್ಯ ಕೆ.ಎಸ್. ನಾರಾಯಣರಾವ್, ಜಿಪಂ ಸದಸ್ಯ ಸುಂದರೇಶ್, ಪದ್ಮನಾಭ್ ಪ.ಪಂ ಸದಸ್ಯ ಹಾಲಗದ್ದೆ ಉಮೇಶ್, ಪ್ರಮುಖರಾದ ಸಿ. ರಾಮಚಂದ್ರರಾವ್, ಅತ್ತಿಕೊಡಿಗೆ ನಾಗಪ್ಪಗೌಡ, ಯಡೂರು ರಾಜಾರಾಂ, ಕರುಣಾಕರಶೆಟ್ಟಿ, ರಾಘವೇಂದ್ರಶೆಟ್ಟಿ, ಘಟಕದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

