ಶಿವಮೊಗ್ಗ

ಹಕ್ಕುಪತ್ರ ಸಮಸ್ಯೆ ನಿವಾರಣೆಗೆ ಒತ್ತು: ಕಾಗೋಡು

Published On :

ಶಿವಮೊಗ್ಗ: ಗ್ರಾಮೀಣ ರೈತರ ಸಮಸ್ಯೆಯಲ್ಲಿ ಒಂದಾದ ನಿವೇಶನ ಹಕ್ಕುಪತ್ರದ ಸಮಸ್ಯೆ ನಿವಾರಣೆಗೆ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವ ರೈತರು 94 ಸಿ ಅಡಿಯಲ್ಲಿ ಹಕ್ಕು ಪತ್ರಕ್ಕೆ ಬೇಡಿಕೆ ಸಲ್ಲಿಸಿದರೆ ಕೆಲವೇ ದಿನಗಳಲ್ಲಿ ನಿವೇಶನ ಹಕ್ಕು ಪತ್ರ ನೀಡಲಾಗುವುದು ಎಂದು ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
 ಸಾಗರ ತಾಲೂಕು ತ್ಯಾಗರ್ತಿ ಗ್ರಾಮ ಪಂಚಾಯಿತಿ ಕಚೇರಿಗೆ ಬೇಟಿ ನೀಡಿ ಅವರು, 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ 2,400 ಅಡಿಗಳ ವಿಸ್ತೀರ್ಣದ ನಿವೇಶನದ ಹಕ್ಕು ಪತ್ರವನ್ನು ಕೊಡಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಇದನ್ನು ಎಲ್ಲಾ ಅರಣ್ಯ ವಾಸಿ ರೈತರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಳೆದ ವರ್ಷ ಸ್ಥಳೀಯ ಗ್ರಾಮ ಪಂಚಾಯಿತಿಯು ಉದ್ಯೋಗ ಖಾತ್ರಿ ಯೋಜನೆಯಡಿ 23 ಲಕ್ಷ ಉಪಯೋಗಿಸಿಕೊಂಡಿದ್ದು, ಈ ಬಾರಿ ಕನಿಷ್ಟ 50 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸ್ವಚ್ಛ ಹಾಗೂ ಸುಂದರ ಗ್ರಾಮ ನಿರ್ಮಾಣ ಕಾರ್ಯಕ್ಕೆ ಬಳಕೆಮಾಡಿಕೊಳ್ಳಬೇಕು ಎಂದರು.
 ರೈತರಿಗೆ ನೀಡಿದ ಇಂದಿರಾ ಆವಾಜಜ್ಮನೆಗಳನ್ನು ಜನವರಿ ತಿಂಗಳೊಳಗೆ ಪೂರ್ಣಗೊಳಿಸಿ ಇನ್ನೂ ಅವಶ್ಯವಿದ್ದರೆ ವಸತಿ ರಹಿತರ ಪಟ್ಟಿಯನ್ನು ನೀಡಿದರೆ ಹೆಚ್ಚಿನ ಮನೆಗಳನ್ನು ನೀಡುವ ಆಶ್ವಾಸನೆ ನೀಡಿದರು.
ಸಮಾರಂಭದಲ್ಲಿ ಗ್ರಾಮಪಂಚಾಯಿತಿ ಆಧ್ಯಕ್ಷ ಸಾಜಿ ಮ್ಯಾಥ್ಯು, ಉಪಾಧ್ಯಕ್ಷ ಕುಸುಮಾ ನಾಗರಾಜ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯ ಮುಖ್ಯಸ್ಥರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಖಾತ್ರಿ ಯಶಸ್ವಿಗೆ ಶ್ರಮಿಸಿ
ಸಾಗರ: ಉದ್ಯೋಗಖಾತ್ರಿ ಯೋಜನೆಯಡಿ ತಾಲೂಕಿನಲ್ಲಿ 20 ಕೋಟಿ ರು. ವಿನಿಯೋಗಿಸುವ ಉದ್ದೇಶ ಹೊಂದಿದ್ದು, ಪ್ರತಿ ಗ್ರಾಪಂ ಕನಿಷ್ಠ 50 ಲಕ್ಷ ರು. ಖರ್ಚು ಮಾಡಿ ಯೋಜನೆ ಶೇ. 100 ರಷ್ಟು ಯಶಸ್ವಿಯಾಗುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
 ತಾಲೂಕಿನ ಹಿರೇಬಿಲಗುಂಜಿ ಗ್ರಾಪಂನಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ, ಉದ್ಯೋಗಖಾತ್ರಿ ನಿಯಮಾವಳಿಯಡಿ ಒಬ್ಬರಿಗೆ ವರ್ಷಕ್ಕೆ 100 ದಿನ ಕನಿಷ್ಠ ಕೂಲಿ ಕೊಡಬೇಕು. 100 ದಿನ ಪೂರೈಸಿಯೂ ಕೆಲಸ ಮಾಡುವ ಆಸಕ್ತಿ ಇದ್ದವರಿಗೆ ಮತ್ತೊಂದು ಜಾಬ್ ಕಾರ್ಡ್ ನೀಡಿ ಉದ್ಯೋಗ ಕೊಡಿ. ಯಾವುದೆ ಕಾರಣಕ್ಕೂ ನಿಗಧಿತ ಗುರಿ ತಲುಪುವಲ್ಲಿ ವಿಫಲವಾದರೆ ಅಂತಹ ಪಂಚಾಯ್ತಿ ವಿರುದ್ಧ ಕ್ರಮಕೈಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪರಿಹಾರ: ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಹಾನಿಯಿಂದ ಆಗಿರುವ ನಷ್ಟದ ಕುರಿತು ವರದಿ ಕೇಳಲಾಗಿದ್ದು, ವರದಿ ಬಂದ ತಕ್ಷಣ ಹಾನಿಗೊಳಗಾದವರಿಗೆ ಪರಿಹಾರ ಕಲ್ಪಿಸುವುದು, ರಸ್ತೆ ದುರಸ್ತಿ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಜನರ ಮೇಲೂ ಇರುತ್ತದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ವಹಿಸುವ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯರು ಆಗಾಗ ಗಮನಿಸುತ್ತಾ ಇರಬೇಕು ಎಂದು ಹೇಳಿದರು.
ಗಂಭೀರ ಕ್ರಮ ಕೈಗೊಳ್ಳಿ: ರೆವಿನ್ಯೂ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡಲು ಕಾನೂನು ತಿದ್ದುಪಡಿಯಾಗಿದ್ದು, ಅಂಥವರ ಪಟ್ಟಿಯನ್ನು ಪ್ರತ್ಯೇಕವಾಗಿ ತಯಾರಿಸಲು ಸೂಚಿಸಿದ ಅವರು ನಿವೇಶನ ನೀಡುವ ವಿಚಾರದಲ್ಲಿ ಸಮಯಬದ್ದತೆ ಇರಬೇಕು. ಗ್ರಾಮಸ್ಥರನ್ನು ಅನಗತ್ಯವಾಗಿ ಪಂಚಾಯ್ತಿ ಕಚೇರಿಗೆ ತಿರುಗಾಡಿಸಬಾರದು. ಅವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕಾಲಮಿತಿಯೊಳಗೆ ತಲುಪಿಸುವ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಳ್ಳಿ ಎಂದರು.  ಲಕ್ಷ್ಮೀ ರಾಧಾಕೃಷ್ಣ, ರತ್ನಮ್ಮ, ಕುಮಾರಸ್ವಾಮಿ, ಕೃಷ್ಣಮೂರ್ತಿ, ಗೌರಮ್ಮ, ಡಾ.ಸದಾಶಿವ, ಪಿಡಿಓ ಅಸ್ಪಾಕ್ ಅಹ್ಮದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.