ಮತ್ತೊಂದು ಕಾಮಗಾರಿ ಕಿರಿಕಿರಿ ಶುರು ಸಾರ್ವಜನಿಕರ ತೀವ್ರ ಆಕ್ರೋಶ
ಕ.ಪ್ರ.ವಾರ್ತೆ , ಭದ್ರಾವತಿ , ಆ.10
ಬಿ.ಎಚ್.ರಸ್ತೆಯ ವಿವಿಧ ತಿರುವುಗಳಲ್ಲಿ ಒಳಚರಂಡಿ ಕಾಮಗಾರಿ, ಕಾಂಕ್ರಿಟ್ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ ಹೀಗೆ ಕಳೆದ ಒಂದು ವರ್ಷದಿಂದ ಅಲ್ಲಿನ ನಿವಾಸಿಗಳ ತಾಳ್ಮೆ ಪರೀಕ್ಷಿಸಿದ ನಗರಸಭೆ ಈಗ ಮತ್ತೊಮ್ಮೆ ಅಂಥದ್ದೆ ಕೆಲಸಕ್ಕೆ ಕೈಹಾಕಿದೆ.
ಎಲ್ಲಾ ಕೆಲಸ ಮುಗಿಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನ ತಮ್ಮ ತಮ್ಮ ಮನೆಯ ಮುಂದೆ ಸ್ವಂತ ಖರ್ಚಿನಲ್ಲಿ ಚಪ್ಪಡಿ ಕಲ್ಲು ಮತ್ತು ಕಾಂಕ್ರಿಟ್ ಹಾಕಿಸಿಕೊಂಡು ಒಪ್ಪ ಓರಣ ಮಾಡಿಕೊಂಡ ನಂತರ ಈಗ ನಗರಸಭೆ ಮತ್ತೆ ಕುಡಿಯುವ ನೀರಿನ ಕೊಳವೆ ಹಾಕುವ ಕಾಮಗಾರಿಗೆ ಕಾಂಕ್ರಿಟ್ ರಸ್ತೆಯ ಉದ್ದಕ್ಕೂ ಗುಂಡಿ ಅಗೆಯಲು ಹೊರಟು ಅಲ್ಲಿನ ನಿವಾಸಿಗಳ ತಾಳ್ಮೆ ಪರೀಕ್ಷಿಸುವ ಕೆಲಸಕ್ಕೆ ಕೈಹಾಕಿದೆ.
ಈ ಕಾಮಗಾರಿ ಬಗ್ಗೆ ಮೊದಲೇ ಗೊತ್ತಿದ್ದ ನಗರಸಭೆ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಮೊದಲೇ ಕುಡಿಯುವ ನೀರಿನ ಕೊಳವೆ ಅಳವಡಿಸುವ ಕಾಮಗಾರಿ ಕೈಗೊಳ್ಳಬಹುದಿತ್ತಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಗುಂಡಿಗೆ ನೀರು ನುಗ್ಗುವುದು ಖಚಿತ: ಮೊದಲೇ ಮಳೆಯಿಂದಾಗಿ ಬಿ.ಎಚ್.ರಸ್ತೆಯ ಅಕ್ಕ ಪಕ್ಕ ಕೊಚ್ಚೆಮಯವಾಗಿದೆ. ಮತ್ತೆ ವರ್ಷಧಾರೆಯಾದರೆ, ಈಗ ತೆಗೆಯುತ್ತಿರುವ ಗುಂಡಿಗೆ ನೀರು ನುಗ್ಗಿ ಅಧ್ವಾನವಾಗುತ್ತದೆ ಎಂದು ಬಿ.ಎಚ್.ರಸ್ತೆಯ ವಿವಿಧ ತಿರುವಿನಲ್ಲಿ ವಾಸಿಸುವ ನಿವಾಸಿಗರು ಆಕ್ಷೇಪವೆತ್ತಿದ್ದಾರೆ.
ವಾಸ್ತವವಾಗಿ ಇಲ್ಲಿ ಕುಡಿಯುವ ನೀರಿನ ಯಾವುದೇ ರೀತಿಯ ತೊಂದರೆ ಇಲ್ಲದಿದ್ದರೂ ನಗರಸಭೆ ಕುಡಿಯುವ ನೀರಿನ ಕೊಳವೆ ಅಳವಡಿಸುವ ಕೆಲಸಕ್ಕೆ ಕೈಹಾಕಿರುವುದು ಸಾರ್ವಜನಿಕರಲ್ಲಿ ಸೋಜಿಗ ಉಂಟುಮಾಡಿದೆ.
ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುಂಚೆ ನಗರಸಭೆ ಅಧಿಕಾರಿಗಳು ಸಾಧಕ-ಬಾಧಕಗಳ ಬಗ್ಗ ಯೋಚನೆ ಮಾಡುತ್ತಾರೋ ಇಲ್ಲವೋ ಎಂಬ ಶಂಕೆ ಜನರನ್ನು ಕಾಡುತ್ತಿದೆ. ಇದು ಗುತ್ತಿಗೆದಾರರನ್ನು ಓಲೈಸಲು ಮಾಡುತ್ತಿರುವ ಕಾಮಗಾರಿ ಎಂದು ಕೆಲವರು ಮಾತನಾಡಿಕೊಳ್ಳುತ್ತಿರುವುದೂ ಕೇಳಿಬಂದಿದೆ.
ಸರಿಪಡಿಸುವ ಗೋಜಿಗೆ ಹೋಗಿಲ್ಲ: ಬಿ.ಎಚ್.ರಸ್ತೆಯ ಅಕ್ಕಪಕ್ಕದಲ್ಲಿ ಕೊಚ್ಚೆಮಯವಾಗಿ ಜನರು ಓಡಾಡಲು ತೊಂದರೆಯಾಗುತ್ತಿದ್ದರೂ, ಅದನ್ನು ಸರಿಪಡಿಸುವ ಗೋಜಿಗೆ ಹೋಗದೆ ಮತ್ತು ಅಲ್ಲಿ ಪಾದಚಾರಿಗಳಿಗೆ ಫುಟ್‌ಪಾತ್ ನಿರ್ಮಾಣ ಮಾಡದೆ ಸಾರ್ವಜನಿಕರಿಗೆ ತೊಂದರೆ ಕೊಡುವ ಕುಡಿಯುವ ನೀರಿನ ಕಾಮಗಾರಿಗೆ ಕೈಹಾಕಿರುವುದು ಸರಿಯಲ್ಲವೆಂಬುದು ಸಾರ್ವಜನಿಕರು ಅಭಿಪ್ರಾಯ.
ಎಲ್.ಆನಂದರಾಮನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

