ತ್ವರಿತ ನ್ಯಾಯ ನೀಡುವುದೇ ಕಾನೂನು ಪ್ರಾಧಿಕಾರ ಉದ್ದೇಶ
ಕ.ಪ್ರ.ವಾರ್ತೆ, ಭದ್ರಾವತಿ, ಆ.16
ಜನರಲ್ಲಿ ಕಾನೂನಿನ ಬಗ್ಗೆ ಅರಿವನ್ನುಂಟುಮಾಡುವುದು, ಉಚಿತ ಕಾನೂನು ನೆರವು ಮತ್ತು ಸಲಹೆ ಕೊಡುವುದು, ಜನತಾ ನ್ಯಾಯಾಲಯ (ಲೋಕ ಅದಾಲತ್) ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಿ ಜನರಿಗೆ ತ್ವರಿತವಾಗಿ ಮತ್ತು ಕಡಮೆ ವೆಚ್ಚದಲ್ಲಿ ನ್ಯಾಯ ದೊರಕಿಸಿಕೊಡುವುದು ಕಾನೂನು ಪ್ರಾಧಿಕಾರದ ಉದ್ದೇಶವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಕೆ.ಎಸ್. ಜ್ಯೋತಿಶ್ರೀ ತಿಳಿಸಿದರು.
ಅವರು ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಪಂ ಆವರಣದಲ್ಲಿ ಏರ್ಪಡಿಸಿದ್ದ ನಾಗರಿಕ ಪ್ರಜ್ಞಾ ಜಾಥಾ ಮತ್ತು ಪರಿಸರ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದ ಸೇವೆಯನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನಾಗರಿಕರ ಕರ್ತವ್ಯ: ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಸಹಾಯಕ ಅಭಿಯೋಜಕಿ ಕಲ್ಪನಾ, ಮಾನವ ಪರಿಸರದ ಶಿಶುವಾದ್ದರಿಂದ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದು ನಾಗರಿಕರ ಕರ್ತವ್ಯ. ಸಂವಿಧಾನ ಇದಕ್ಕಾಗಿ ಕೆಲವು ಹಕ್ಕುಗಳನ್ನು ನಾಗರಿಕರಿಗೆ ನೀಡಿದೆ. ಹುಟ್ಟಿದ ದಿನದಿಂದ ಮರಣದ ನಂತರವೂ ಮನುಷ್ಯ ಕಾನೂನಿನ ಚೌಕಟ್ಟಿಗೊಳಪಡುವುದು ಅನಿವಾರ್ಯವಾಗಿದೆ ಎಂದರು.
ಮಹಿಳೆಯರಲ್ಲಿ ಸಂಘಟನೆ ಹೆಚ್ಚಾಗಿದೆಯಾದರೂ, ಮಹಿಳೆಯರಿಂದಲೇ ಮಹಿಳೆಯ ಶೋಷಣೆ ಹೆಚ್ಚಾಗುತ್ತಿದೆ. ಶೋಷಿತ ಸ್ತ್ರೀಗೆ ಸ್ಪಂದನೆ ಕಡಮೆಯಾಗುತ್ತಿದೆ. ದೌರ್ಜನ್ಯ ಹೆಚ್ಚಾಗುತ್ತಿದೆ. ಇದನ್ನು ನಿವಾರಿಸಲು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಮಹಿಳೆಯರು ಮಳೆನೀರು ಮತ್ತು ತ್ಯಾಜ್ಯಜಲದ ಮರು ಉಪಯೋಗ ಮಾಡಿಕೊಳ್ಳುವತ್ತ ಹೆಚ್ಚು ಗಮನವೀಯಬೇಕು ಎಂದು ಅವರು ಹೇಳಿದರು.
ತಹಸೀಲ್ದಾರ್ ಸಿದ್ದಮಲ್ಲಪ್ಪ, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಆರ್. ಕರುಣಾಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಮಹೇಶ್ ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ. ಮಲ್ಲೇಶಪ್ಪ ಮೊದಲಾದವರು ಮಾತನಾಡಿದರು.
ಲಯನ್ಸ್ ಸಂಸ್ಥೆ ದ್ವಿತೀಯ ಉಪ ಗವರ್ನರ್ ಡಿ. ಶ್ರೀಧರ ಶೆಣ್ವ ವೇದಿಕೆಯಲ್ಲಿದ್ದರು. ನಗರಸಭಾ ಸದಸ್ಯ ಜಿ. ಆನಂದಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಗರಿಕಾ ಪ್ರಾರ್ಥಿಸಿದರು. ಯೋಜನಾಧಿಕಾರಿ ಎಂ. ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎನ್.ಶ್ರೀಹರ್ಷ ಸ್ವಾಗತಿಸಿದರು. ಗಣಪತಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ಶಾಂತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

