ಶಿವಮೊಗ್ಗ

ಮಹಿಳೆಯ ಮೇಲೆ ಧಾರ್ಮಿಕ ಹೊರೆ

Published On :

ಶಿವಮೊಗ್ಗ:  ಎಲ್ಲಾ ಸಮುದಾಯಗಳು ಸಹ ಮಹಿಳೆಯರ ಮೇಲೇ ಮಾತ್ರ ಧಾರ್ಮಿಕ ಹೊರೆ ಹೊರಿಸುತ್ತಿವೆ. ಪುರಷರ ಮೇಲೆ ಏಕೆ ಹೊರಿಸಲು ಮುಂದಾಗುತ್ತಿಲ್ಲ ಎಂದು ಹಿರಿಯ ಸಾಹಿತಿ ಡಾ ಸಾ.ರಾ. ಅಬೂಬಕ್ಕರ್ ಪ್ರಶ್ನಿಸಿದರು.
 ಕರ್ನಾಟಕ ಸಂಘ ಸೋಮವಾರ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಧರ್ಮ ಮತ್ತು ಮಹಿಳೆ ವಿಷಯ ಕುರಿತ ಸಂವಾದದಲ್ಲಿ ಅವರು, ದೇಶದಲ್ಲಿರುವ ಧರ್ಮಗಳು ಮಹಿಳೆ ಮೇಲೆ ತನ್ನ ಧಾರ್ಮಿಕ ಕಟ್ಟುಪಾಡುಗಳ ಒತ್ತಡ ಹೆಚ್ಚಿಸಿವೆಯೇ ಹೊರತು ಪುರುಷರ ಮೇಲಲ್ಲ. ಏಕೆ ಈ ರೀತಿಯ ತಾರತಮ್ಯ ಮಾಡಬೇಕು ಎಂದು ವಿಷಾದಿಸಿದರು.
ಮಹಿಳೆಯರ ಶೋಷಣೆ: ಮಹಿಳೆ ಧರ್ಮದ ಪಾಲನೆಯನ್ನು ಎಷ್ಟರ ಮಟ್ಟಿಗೆ ಮಾಡುತ್ತಿದ್ದಳು ಎಂಬುದಕ್ಕೆ ಸತಿ ಸಹಗಮನ ಪದ್ಧತಿಯೇ ಒಂದು ಪಕ್ವ ಉದಾಹರಣೆ ಎಂದ ಅವರು, ಎಲ್ಲಾ ಧರ್ಮಗಳು ತಮ್ಮ ಧಾರ್ಮಿಕ ಕಟ್ಟುಪಾಡುಗಳ ಮೂಲಕ ಮಹಿಳೆಯರನ್ನು ನಿರಂತರ ಶೋಷಣೆಗೊಳಪಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
 ಅದರಲ್ಲಿಯೂ ಪ್ರಮುಖವಾಗಿ ಮುಸ್ಲಿಂ ಸಮುದಾಯದಲ್ಲಿ ಇಲ್ಲದ ಕಟ್ಟುಪಾಡುಗಳನ್ನು ಹೇರಿ ಮಹಿಳೆಯನ್ನು ಶೋಷಣೆ ಮಾಡುತ್ತಿದ್ದಾರೆ. ಪ್ರವಾದಿಗಳ ಕಾಲದಲ್ಲಿ ಮಹಿಳೆಯರಿಗೆ ಕೆಲ ವ್ಯಕ್ತಿಗಳಿಂದ ರಕ್ಷಣೆ ಇರಲಿಲ್ಲ. ಈ ವೇಳೆ ಪ್ರವಾದಿಗಳು ಮಹಿಳೆಯರು ತಮ್ಮ ರಕ್ಷಣೆಗಾಗಿ ತಲೆ ಮೇಲೆ ಧರಿಸುವ ಬಟ್ಟೆಯನ್ನು ಎದೆ ಮೇಲೆ ಎಳೆದುಕೊಳ್ಳುವಂತೆ ತಿಳಿಸಿದ್ದರು. ಕಪ್ಪು ಬಟ್ಟೆ ಧರಿಸುವಂತೆಯೂ ಹೇಳಿರಲಿಲ್ಲ. ಅಲ್ಲದೆ ಮುಸ್ಲೀಂ ಮಹಿಳೆಯರು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎಂದು ಪ್ರತಿಪಾದಿಸಿದ್ದರು ಎಂದರು.
 ಆದರೆ, ಇಂದು ಇಸ್ಲಾಂ ಧರ್ಮದ ಗುರುಗಳು ಮಹಿಳೆಯರು ಕಡ್ಡಾಯವಾಗಿ ಬುರ್ಖಾ ಧರಿಸಬೇಕು ಎಂದು ಆದೇಶ ನೀಡಿದ್ದಾರೆ. ಈ ಮೂಲಕ ಇಸ್ಲಾಂ ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬುರ್ಖಾ ಕಡ್ಡಾಯ: ಇಂದು ವಿದ್ಯಾವಂತ ಡಾಕ್ಟರ್, ಎಂಜಿನಿಯರ್ ಮಹಿಳೆಯರು, ಯವತಿಯರು ಕೂಡ ಬುರ್ಖಾ ಧರಿಸಿಕೊಂಡು ಶಾಲಾ, ಕಾಲೇಜುಗಳಿಗೆ ಹಾಗೂ ಕೆಲಸಕ್ಕೆ ತೆರಳುತ್ತಿರುವುದು ದುರಂತ. ಇಸ್ಲಾಂ ಮಹಿಳೆಯರು ಮಸೀದಿಯಲ್ಲಿ ನಮಾಜ್ ಮಾಡಲು ಅವಕಾಶ ಕೊಡಿ ಎಂದು ಕೇಳಿದರೆ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರು ಮಹಿಳೆಯರು ನಮಾಜ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ನಿರಾಕರಿಸಿದ್ದಾರೆ.  ಇದನ್ನು ಹೇಳಲು ಅವರು ಯಾರು ಎಂದು ಯಾವೊಬ್ಬ ವಿದ್ಯಾವಂತ ಮಹಿಳೆಯೂ ಪ್ರಶ್ನಿಸದಿರುವುದು ವಿಷಾದನೀಯ ಎಂದರು. ಕೋಮುವಾದ ಎಂಬುದು ಹಿಂದು ಮತ್ತು ಮುಸ್ಲಿಂ ಧರ್ಮದ ಮೇಲೆ ದೊಡ್ಡ ಕಂದಕ ಸೃಷ್ಟಿಸಿದೆ. ಕುರಾನ್ ಕನ್ನಡಕ್ಕೆ ಅನುವಾದವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಅದು ಕೂಡ ಅವರವರ ಮುಗಿನ ನೇರಕ್ಕೆ ಅನುವಾದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
 ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಡಾ. ನಾಗಭೂಷಣ್, ಪ್ರೊ ಆಶಾಲತಾ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.