ಶಿವಮೊಗ್ಗ

ಮಹಿಳೆಯರಿಂದಲೂ ಯಜ್ಞೋಪವೀತ ಧಾರಣೆ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ ಆ.20: ಮಂಗಳವಾರ ದೇಶದ ವಿವಿಧೆಡೆ ಉಪಾಕರ್ಮ (ಶಾಸ್ತ್ರೋಕ್ತವಾಗಿ ಜನಿವಾರ ಬದಲಿಸುವ ಪ್ರಕ್ರಿಯೆ) ಆಚರಣೆಗೊಂಡಿತು. ಈ ಮಧ್ಯೆಯೇ ಅಪರೂಪ ಎಂಬಂತೆ ಶಿವಮೊಗ್ಗದಲ್ಲಿ ಮಹಿಳೆಯರೂ ಉಪಾಕರ್ಮ ಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಜನಿವಾರ ಬದಲಿಸಿಕೊಂಡರು.
 ಸಾಮಾನ್ಯವಾಗಿ ಒಂದು ಪಂಗಡಕ್ಕೆ, ಅದರಲ್ಲೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪುರುಷರಷ್ಟೇ ಜನಿವಾರ ಧರಿಸುವ ಸಂಪ್ರದಾಯವಿದೆ. ಆದರೆ, ಶಿವಮೊಗ್ಗದ ರಾಜೇಂದ್ರ ನಗರದಲ್ಲಿ ಆಯೋಜನೆಗೊಂಡಿದ್ದ ಉಪಾಕರ್ಮ ಕಾರ್ಯಕ್ರಮದಲ್ಲಿ ಓರ್ವ ವಿದ್ಯಾರ್ಥಿನಿ ಸೇರಿದಂತೆ ಒಟ್ಟು ಮೂವರು ಮಹಿಳೆಯರು ಹಾಗೂ ಮೂಲ ಹಿಂದುಳಿದ ಪಂಗಡಕ್ಕೆ ಸೇರಿದ ದಂಪತಿ ಉಪಾಕರ್ಮದಲ್ಲಿ ಪಾಲ್ಗೊಂಡಿದ್ದು ವಿಶೇಷ.
 ಕಾರ್ಯಕ್ರಮದ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಆರ್ಯ ಸಮಾಜದ ಸದಸ್ಯ ಜಗನ್ನಾಥ ಶರ್ಮ, ಯಜ್ಞ ಮಾಡಲು ಸ್ತ್ರೀ-ಪುರುಷರು ಅರ್ಹರು. ಯಜ್ಞವೆಂದರೆ ಎಲ್ಲಾ ಜೀವಿ ಜಂತುಗಳು ಉಳಿದು ಬೆಳೆಯಲು ಬೇಕಾದ ಆಚರಣೆ. ಅದನ್ನೂ ಸ್ತ್ರೀಪುರುಷರಾದಿಯಾಗಿ ಎಲ್ಲರೂ ಮಾಡಬೇಕು ಎಂದರು.
ಯಜ್ಞೋಪವೀತ ಧಾರಣೆ:
ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸವಿತಾ, ನಾಗಮಣಿ, ಕರಕುಚ್ಚಿ ಗ್ರಾಮದ ವೆಂಕಟಮ್ಮ ಯಜ್ಞೋಪವೀತ ಧಾರಣೆ ಮಾಡಿದ ಮಹಿಳೆಯರಾಗಿದ್ದಾರೆ.
 ನಾವು ಮೂಲ ಎಸ್ಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಒಂದು ಸಂದರ್ಭದಲ್ಲಿ ಆರ್ಯಸಮಾಜದ ತೆಕ್ಕೆಗೆಬಿದ್ದು ವೇದವನ್ನು ಅನುಸರಿಸಲು ಮುಂದಾದೆವು. ನನ್ನ ಜೊತೆಗೆ ನನ್ನ ಪತ್ನಿಯೂ(ವೆಂಕಟಮ್ಮ) ಯಜ್ಞೋಪವೀತ ಧಾರಣೆ ಮಾಡಿದ್ದಾರೆ ಎಂದು ಕರಕುಚ್ಚಿಯ ಗಂಗನರಸಯ್ಯ ತಿಳಿಸಿದರು.
 ನಾಗಮಣಿ ಪ್ರತಿಕ್ರಿಯೆ ನೀಡಿ, ಯಜ್ಞೋಪವೀತ ಧಾರಣೆಗೆ ಮಹಿಳೆಯರಿಗೂ ಹಕ್ಕಿದೆ ಎಂದು ದಯಾನಂದ ಸರಸ್ವತಿಯವರು ಅಂದೇ ಪ್ರತಿಪಾದಿಸಿದ್ದರು. ನಾನು ಕೂಡ ಇಂದು ಯಜ್ಞೋಪವೀತ ಧಾರಣೆ ಮಾಡಿರುವೆ ಎಂದು ತಿಳಿಸಿದರು.
 ಎಲ್ಲರೂ ಆಧ್ಯಾತ್ಮಿಕ- ಭೌತಿಕ ಯಶಸ್ಸು ಸಾಧಿಸಬೇಕು. ವೇದಜ್ಞಾನದಿಂದ ನಾವು ಈ ಎರಡರಲ್ಲೂ ಯಶಸ್ಸು ಸಾಧಿಸಬಹುದು. ಇಲ್ಲಿಗೆ ಯಾರೇ ಬಂದರೂ ನಾವು ವೇದ ಜ್ಞಾನ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ. ಅರ್ಥ ಸಹಿತ ಮಂತ್ರಗಳನ್ನು ಹೇಳಿಕೊಡುತ್ತೇವೆ, ಸಂಧ್ಯಾವಂದನೆ, ಅಗ್ನಿಹೋತ್ರ ಕಲಿಯಲು ಅವಕಾಶ ಕಲ್ಪಿಸುತ್ತೇವೆ ಎಂದು ಜಗನ್ನಾಥ ಶರ್ಮ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.