ಶೋಕಿಗಾಗಿ ಕಳ್ಳತನ: ಐವರ ಬಂಧನ
ಕ.ಪ್ರ.ವಾರ್ತೆ ಶಿವಮೊಗ್ಗ ಆ.22
ಈ ಹುಡುಗರದ್ದು ಕಾಲೇಜು ಮೆಟ್ಟಿಲು ಹತ್ತುವ ವಯಸ್ಸು, ಆದರೆ ಕೆಟ್ಟ ಚಟದ ದಾಸರಾಗಿ, ಶೋಕಿಯ ಉದ್ದೇಶದಿಂದ ಕಳ್ಳತನಕ್ಕೆ ಇಳಿದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಇವರದ್ದು ಕೊಂಚ ಬೇರೆಯದೇ ರೀತಿಯ ಕಳ್ಳತನ. ಗ್ರಾಮೀಣ ಭಾಗದ ಮೊಬೈಲ್ ಟವರ್ಗಳಿಗೆ ತೆರಳಿ ಯಾರಿಗೂ ಅನುಮಾನ ಬಾರದಂತೆ ರಿಪೇರಿ ಮಾಡುವಂತೆ ನಟಿಸಿ ಅಲ್ಲಿರುವ ಬೆಲೆ ಬಾಳುವ ಬ್ಯಾಟರಿಗಳನ್ನು ಎಗರಿಸುತ್ತಿದ್ದರು.
ಹಾರೋನ್ ರಶೀದ್ (21), ಅಹ್ಮದ್ ವಾಜೀದ್ (19), ಜಕ್ರುಲ್ಲಾ ಖಾನ್ (18), ಮಹಮ್ಮದ್ (19) ಖೈಸರ್ (19) ಬಂಧಿತ ಆರೋಪಿಗಳು.
ರಶೀದ್ ತಂಡದ ಈ ತಂಡದ ನೇತಾರ. ಈ ತಂಡದ ಸದಸ್ಯರಲ್ಲಿ ಒಬ್ಬೊಬ್ಬರದ್ದು ಬಗೆಬಗೆಯ ಕೆಲಸ. ಟಿಪ್ಪು ನಗರದ ಹಾರೋನ್ ರಶೀದ್ ಚಾಲಕ, ಅಹ್ಮದ್ ವಾಜೀದ್ ಕಾರ್ಪೆಂಟರ್, ಜಕ್ರುಲ್ಲಾ ಖಾನ್ ಕಾರ್ ಮೆಕಾನಿಕ್, ಜೆಪಿ ನಗರದ ಖೈಸರ್ ಎಲೆಕ್ಟ್ರೀಶಿಯನ್ ಆಗಿದ್ದರೆ, ಮಹ್ಮದ್ ಹಣ್ಣಿನ ವ್ಯಾಪಾರಿಯಾಗಿದ್ದ.
1.70 ಲಕ್ಷ ಮೌಲ್ಯ: ಆರೋಪಿಗಳಿಂದ ಕಳ್ಳತನವಾಗಿದ್ದ 1.70 ಲಕ್ಷ ಮೌಲ್ಯದ ಮೊಬೈಲ್ ಟವರ್ಗೆ ಅಳವಡಿಸುವ ಬ್ಯಾಟರಿಗಳನ್ನು ಹಾಗೂ ಕೃತ್ಯವೆಸಗಲು ಉಪಯೋಗಿಸುತ್ತಿದ್ದ ಮಾರುತಿ ಓಮಿನಿ ವ್ಯಾನ್ (ಕೆಎ 41-4558)ನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಮೊಬೈಲ್ ಟವರ್ ಕಳುವು ಪ್ರಕರಣಗಳು ಏರುಮುಖದಲ್ಲಿ ಸಾಗಿದ್ದನ್ನು ಮನಗಂಡ ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ. ದಯಾಳು ಅವರು ಕಳ್ಳರ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.
ಶಿವಮೊಗ್ಗ ತುಂಗಾ ನಗರ ಹಾಗೂ ಕುಂಸಿ ಠಾಣೆಯಲ್ಲಿ ಮೊಬೈಲ್ ಟವರ್ ಬ್ಯಾಟರಿ ಕಳ್ಳತನದ ಪ್ರಕರಣಗಳು ದಾಖಲಾಗಿದ್ದವು.
ಶಿವಮೊಗ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಜಿ. ರಾಮಾನಾಯ್ಕ್ ನೇತೃತ್ವದಲ್ಲಿ ಶಿವಮೊಗ್ಗ ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕ ಟಿ.ಎಂ. ಬಸವರಾಜ್ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಪತ್ತೆ ವಿಭಾಗದ ಪಿಎಸ್ಐ ಕೆ.ಟಿ. ಅಣ್ಣಯ್ಯ ಹಾಗೂ ಸಿಬ್ಬಂದಿ ವೈ. ಬಸವರಾಜ್, ಎಂ.ವೈ. ಶಂಕರಮೂರ್ತಿ, ಚಂದ್ರಶೇಖರ, ಶೇಖರ, ನಂಜುಂಡಪ್ಪ, ಅಶೋಕ ಅವರನ್ನೊಳಗೊಂಡ ವಿಶೇಷ ಅಪರಾಧ ಪತ್ತೆ ದಳ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿದೆ.
ರಾಮಿನಕೊಪ್ಪದಲ್ಲಿ ಆಗಸ್ಟ್ 20ರಂದು 4 ಗಂಟೆ ವೇಳೆಗೆ ಬಂದ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬೇಟೆಯಾಡುವಲ್ಲಿ ಯಶಸ್ವಿಯಾದರು.
ದಾಳಿ ವೇಳೆ ಕಳ್ಳರು ಬಳಸಿದ್ದ ವ್ಯಾನ್ನಲ್ಲಿ 15 ಬ್ಯಾಟರಿಗಳಿದ್ದವು. ತೀವ್ರ ವಿಚಾರಣೆಗೊಳಪಡಿಸಿದಾಗ ಮಾಚೇನಹಳ್ಳಿಯ ಘಟನೆಯನ್ನೂ ಪಾಲ್ಗೊಂಡಿದ್ದಾಗಿ ಒಪ್ಪಿಕೊಂಡರು ಎಂದು ಅಪರಾಧ ಪತ್ತೆ ವಿಭಾಗದ ಪಿಎಸ್ಐ ಕೆ.ಟಿ. ಅಣ್ಣಯ್ಯ ಕನ್ನಡಪ್ರಭಕ್ಕೆ ವಿವರಿಸಿದರು.
ಬ್ಯಾಟರಿ ಕಳ್ಳರನ್ನು ಪತ್ತೆ ಮಾಡಿದ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶ್ಲಾಘಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

