ಭಗವದ್ಗೀತೆ ಅಭಿಯಾನಕ್ಕೆ ಚಾಲನೆ
ಹೊಳೆಹೊನ್ನೂರು: ಮನುಷ್ಯನಲ್ಲಿ ಅಂತರ್ಗತವಾಗಿರುವ ನಕಾರಾತ್ಮಕ ಧೋರಣೆ ತೊಲಗಿಸಿ ಸ್ವಾಸ್ತ್ಯ ಸಮಾಜ ನಿರ್ಮಿಸಲು ಶ್ರೀ ಭಗವದ್ಗೀತೆ ಪಠಣ ಸಹಕಾರಿ ಎಂದು ರಾಷ್ಟ್ರೋತ್ಥಾನ ಬಳಗದ ಶಿವಮೊಗ್ಗ ಜಿಲ್ಲಾ ಸಂಚಾಲಕ ರಾಜಾರಾಮ ತಿಳಿಸಿದ್ದಾರೆ.
ಹೊಳೆಹೊನ್ನೂರು ರಾಷ್ಟ್ರೋತ್ಥಾನ ಬಳಗದ ವಿದ್ಯಾಲಯದಲ್ಲಿ ಸೋಂದಾ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಹಾಗೂ ಶ್ರೀ ಭಗವದ್ಗೀತಾ ಅಭಿಯಾನ ಪುನಶ್ಚೇತನ ಸಮಿತಿಯ ಆಶ್ರಯದಲ್ಲಿ ಏರ್ಪಡಿಸಿದ್ದ ಹೊಳೆಹೊನ್ನೂರು ಭಾಗದ ಈ ಸಾಲಿನ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸಮಾಜ ಹಿತ ಮುಖ್ಯ: ಯಾವುದೇ ಕೆಲಸವನ್ನು ಸ್ವತಃ ಇಚ್ಚಾಪೂರ್ವಕವಾಗಿ ಮಾಡಬೇಕು. ಸಮಾಜದ ಹಿತಕ್ಕೋಸ್ಕರ ಪ್ರತಿಯೊಬ್ಬನೂ ತನ್ನ ಕರ್ತವ್ಯ ನಿರ್ವಹಿಸಬೇಕು ಎನ್ನುವುದು ಗೀತೆಯ ತಾತ್ಪರ್ಯವಾಗಿದೆ ಎಂದ ಅವರು, ದೇಶ, ಜನ, ಸಮಾಜಕ್ಕೆ ಒಳಿತಾಗುವಂತಹ ಸಂಗತಿಗಳನ್ನು ಶ್ರೀಕೃಷ್ಣ ಅರ್ಜುನನಿಗೆ ಉಪದೇಶ ಮಾಡಿದ ಸಾರಾಂಶವೇ ಗೀತೆಯಲ್ಲಿದೆ ಎಂದು ಹೇಳಿದರು.
ರಾಷ್ಟ್ರದ ಹಿತಕ್ಕೋಸ್ಕರ, ಧರ್ಮದ ಒಳಿತಿಗೋಸ್ಕರ ಮಾನವ ಬದುಕಬೇಕೇ ಹೊರತು ತನ್ನ ಸ್ವಾರ್ಥಕ್ಕೆ ಅಲ್ಲ ಎಂಬುದನ್ನು ಗೀತೆ ಬೋಧಿಸುತ್ತದೆ. ಒಂದು ವೇಳೆ ಇಂದಿನ ಸ್ವಾರ್ಥಪರ ಚಿಂತನೆಯನ್ನು ನಮ್ಮ ಪೂರ್ವಜರು ಹೊಂದಿದ್ದರೆ ಬಹುಶಃ ಇಂದು ಮನುಷ್ಯ ಮನುಷ್ಯನಾಗಿ ಬಾಳಲು ನಮ್ಮ ದೇಶದಲ್ಲಿ ಸಾಧ್ಯವಾಗುತ್ತಿರಲಿಲ್ಲ ಎಂದರು.
ಅಭಿಯಾನದ ಜಿಲ್ಲಾ ಸಮಿತಿ ಕಾರ್ಯದರ್ಶಿ ಡಾ.ಬಾಲಕೃಷ್ಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಯಾವುದೇ ಜಾತಿ, ಮತ-ಪಂಥ, ಧರ್ಮಗಳ ಭೇದ ಭಾವಗಳಿಲ್ಲದೆ ಎಲ್ಲ ಸ್ತರದ ಜನರೂ ಇದರಲ್ಲಿ ಪಾಲ್ಗೊಂಡು ಭಗವದ್ಗೀತೆ ಕಲಿಯುವುದರಲ್ಲಿ ಆಸಕ್ತಿ ತೋರುತ್ತಿರುವುದು ಸಮಾಜದ ಸ್ವಾಸ್ತ್ಯದ ದ್ಯೋತಕವಾಗಿದೆ ಎಂದರು.
ವಿದ್ಯಾಲಯದ ಶಿಕ್ಷಕ ಆನಂದ ಗುರೂಜಿ ಕಾರ್ಯಕ್ರಮ ನಿರ್ವಹಿಸಿದರು. ಮಾತಾ ಶಾಂತಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

