ಶಿವಮೊಗ್ಗ

ಹುಚ್ಚೂರಾಯಸ್ವಾಮಿ ದೇವಸ್ಥಾನದಲ್ಲಿ ಸಂಭ್ರಮದ ಶ್ರಾವಣ ಪೂಜೆ

Published On :

ಕ.ಪ್ರ.ವಾರ್ತೆ  ಶಿಕಾರಿಪುರ  ಆ.31 ಪಟ್ಟಣದ ಹುಚ್ಚೂರಾಯಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಶನಿವಾರದ ಅಂಗವಾಗಿ ನಾಡಿನ ವಿವಿಧ ಮೂಲೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಹುಚ್ಚೂರಾಯಸ್ವಾಮಿ ದೇವಾಲಯ ಐತಿಹಾಸಿಕ ಮಹತ್ವವನ್ನು ಹೊಂದಿದ್ದು, ಶ್ರಾವಣ ಮಾಸದಲ್ಲಿ ಸಾತೇನಹಳ್ಳಿಯ ಶಾಂತೇಶ, ಕದರಮಂಡಲಗಿಯ ಕಾಂತೇಶ ಶಿಕಾರಿಪುರದ ಬ್ರಾಂತೇಶ (ಹುಚ್ಚೂರಾಯಸ್ವಾಮಿ)ಯನ್ನು ಏಕಕಾಲಕ್ಕೆ ದರ್ಶನ ಮಾಡಿದಲ್ಲಿ ಕಾಶಿ ಯಾತ್ರೆಯ ಪುಣ್ಯ ಲಭಿಸುವ ಪ್ರತೀತಿ ಇದೆ.
ಪ್ರಸಾದ ಸೇವೆ: ಶ್ರಾವಣದ ಕೊನೆ ಶನಿವಾರ ಶಿಕಾರಿಪುರ ನಿರಂತರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಸ್ಥಳೀಯ ಯುವಕರು ಕ್ಯಾಂಟೀನ್ ಸತ್ಯನಾರಾಯಣ ಅವರ ಮುಂದಾಳುತನದಲ್ಲಿ ಆಗಮಿಸದ್ದ ಸಾವಿರಾರು ಭಕ್ತರಿಗೆ ಪ್ರಸಾದದ ಸೇವೆಯನ್ನು ಕೈಗೊಂಡಿದ್ದು, ಸ್ಥಳೀಯ ಹಾಗೂ ದೂರದಿಂದ ದ ಆಗಮಿಸಿದ್ದ ಭಕ್ತರ ಪ್ರಶಂಸೆಗೆ ಪಾತ್ರವಾಯಿತು.
ಮುಜರಾಯಿ ದೇವಸ್ಥಾನ ಸುಪರ್ದಿಗೆ ಒಳಪಟ್ಟು ವಾರ್ಷಿಕ ಲಕ್ಷಾಂತರ ಆದಾಯ ಹೊಂದಿ ನಿತ್ಯ ಸಾವಿರಾರು  ಭಕ್ತರಿಗೆ ದರ್ಶನದ ಮೂಲಕ ಇಷ್ಟಾರ್ಥ ಪೂರೈಸುತ್ತಿರುವ ಹುಚ್ಚೂರಾಯಸ್ವಾಮಿ ದೇವಾಲಯಕ್ಕೆ ಧಮದರ್ಶಿ ಸಮಿತಿ ರದ್ದಾಗಿದ್ದು, ಇದರಿಂದಾಗಿ ಸ್ಥಳೀಯ ಆಸಕ್ತ ಭಕ್ತರು ನಿರಂತರ ಟ್ರಸ್ಟ್ ನೇತೃತ್ವದಲ್ಲಿ ಅನ್ನಸಂತರ್ಪಣೆಯ ಪ್ರಸಾದದ ಜತೆಗೆ ಅಲಂಕಾರ ವ್ಯವಸ್ಥೆ ಕೈಗೊಂಡಿದ್ದರು.
ಸಿಬ್ಬಂದಿ ನಿರ್ಲಕ್ಷ್ಯ: ಮುಜರಾಯಿ ಇಲಾಖೆ ಅಧೀನದಲ್ಲಿನ ದೇವಾಲಯದಲ್ಲಿ ಶ್ರಾವಣ ಕಡೆ ಶನಿವಾರ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದ್ದರೂ ಅಧಿಕಾರಿಗಳ ಹಾಗೂ ದೇವಸ್ಥಾನದ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಎಲ್ಲಾ ಭಕ್ತರೆಲ್ಲರಿಗೂ ತೀರ್ಥ ದೊರೆಯದೆ ಹಾಗೆಯೇ ವಾಪಸಾಗುತ್ತಿದ್ದರು.
ಈ ಬಗ್ಗೆ ಸ್ಥಳೀಯ ತಹಸೀಲ್ದಾರ್ ಪ್ರಕಾಶ್ ಗಣಾಚಾರಿರವರನ್ನು ಪ್ರಶ್ನಿಸಿದಾಗ ಸಿಬ್ಬಂದಿ ಜವಾಬ್ದಾರಿ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹುಚ್ಚೂರಾಯನ ಸಮರ್ಪಕ ದರ್ಶನಕ್ಕೆ ಅನುಕೂಲಕ್ಕಾಗಿ ಭಕ್ತರಿಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಖುದ್ದು ಕ್ಷೇತ್ರದ ಶಾಸಕ ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಕಲ್ಪಿಸಿದ್ದರೂ, ಇದುವರೆಗೂ ಧರ್ಮದರ್ಶಿ ಸಮಿತಿ ರಚನೆ ಮಾತ್ರ ನೆನೆಗುದಿಗೆ ಬಿದ್ದಿದೆ.
ಸೂಕ್ತ ಕ್ರಮ ಅಗತ್ಯ: ದೂರದ ಸ್ಥಳದಿಂದ ಆಗಮಿಸಿದರೂ ಕನಿಷ್ಠ ತೀರ್ಥ ದೊರೆಯದೇ ಗೊಣಗುವ ಭಕ್ತರು ಹಲವರು ಕಾಣಿಸುತ್ತಾರೆ. ಈ ಬಗ್ಗೆ ಮುಜರಾಯಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ವಿ.ಹಿಂ.ಪ ಉಪಾಧ್ಯಕ್ಷ ಪ್ರಕಾಶ್ ಚಿನ್ನು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 ನಿರಂತರ ಸೇವಾ ಟ್ರಸ್ ಮೂಲಕ ಶಿಕಾರಿಪುರದ ಕೆಲ ಉತ್ಸಾಹಿ ಯುವಕರು ಹಮ್ಮಿಕೊಂಡಿದ್ದ ಪ್ರಸಾದ ಸೇವೆಯನ್ನು ಖುದ್ದು ವೀಕ್ಷಿಸಲು ಸಂಸದ ರಾಘವೇಂದ್ರ ಆಗಮಿಸಿದ್ದರು.
ದೇವಸ್ಥಾನಕ್ಕೆ ಅಗತ್ಯವಾಗಿ ಬಡ ಜನತೆಯ ಕಲ್ಯಾಣ ಕಾರ್ಯಕ್ಕಾಗಿ ಕಡಿಮೆ ವೆಚ್ಚದಲ್ಲಿ ಸಮೀಪದಲ್ಲಿಯೇ ನಿರ್ಮಾಣವಾಗುತ್ತಿರುವ ಕೋಟ್ಯಂತರ ವೆಚ್ಚದ ಸಮುದಾಯ ಭವನ 2 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಕ್ಷೇತ್ರದ ಶಾಸಕ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಟ್ರಸ್ಟ್ನ ಸತ್ಯನಾರಾಯಣ, ರಘು ಎಂ.ಆರ್, ಜಗದೀಶ್ ಕಮ್ಮನಹಳ್ಳಿ, ಮಾರವಳ್ಳಿ ಉಮೇಶ್, ಮಲ್ಲಿಕಾರ್ಜುನ, ಗುರುಪ್ರಸಾದ್ ದೀಕ್ಷಿತ್, ಸಿದ್ದಲಿಂಗ ನ್ಯಾಮತಿ, ನಾಗರಾಜಪ್ಪ, ಗುಡ್ಡಳ್ಳಿ ಕೃಷ್ಣ ಮೊದಲಾದವರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.