ಶಿವಮೊಗ್ಗ

ಮಲೆ'ನಾಡಿ'ನ ಮಿಡಿತ ಅರಿತ ಸಾಹಿತಿ

Published On :

ಕ.ಪ್ರ. ವಾರ್ತೆ, ಶಿವಮೊಗ್ಗ, ಡಿ.4
ಸಾಗರದ ನೆಹರೂ ನಗರದ ವಾಸಿ ನಾ. ಡಿಸೋಜರದ್ದು ಸಾಹಿತ್ಯ ಕ್ಷೇತ್ರದಲ್ಲಿ ಬಹುಮುಖ ಪ್ರತಿಭೆ. ಕಥೆ, ಕಾದಂಬರಿ, ಸಣ್ಣಕತೆ, ಮಕ್ಕಳ ಸಾಹಿತ್ಯ, ನಾಟಕ, ಜೀವನ ಚರಿತ್ರೆ ಹೀಗೆ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಹುಟ್ಟಿದ್ದು ಸಾಗರದಲ್ಲಿ. 1937ರ ಜೂನ್ 6ರಂದು. ತಂದೆ ಫಿಲಿಪ್ ಡಿಸೋಜ, ತಾಯಿ ರೊಪೀನಾಬಾಯಿ.
ಪತ್ನಿ ಫಿಲೋಮಿನಾ ಅವರು ನಾ. ಡಿಸೋಜರ ಸಾಹಿತ್ಯ ಯಾತ್ರೆಯ ಅತಿ ಸಮೀಪದ ಸಂಗಾತಿ. ಬಹುತೇಕ ಎಲ್ಲಾ ಕೃತಿಯನ್ನು ಓದಿದ್ದಾರೆ. ದ್ವೀಪ ಅವರಿಗೆ ಬಲು ಇಷ್ಟವಾದ ಕೃತಿಯಂತೆ. ಶೋಭಾ, ನವೀನ್ ಹಾಗೂ ಸಂತೋಷ ಡಿಸೋಜರವರ ಮಕ್ಕಳು.
ಶಿವಮೊಗ್ಗದಲ್ಲಿ ಇಂಟರ್ಮೀಡಿಯೆಟ್ ಕಾಲೇಜಿನಲ್ಲಿ (ಇಂದಿನ ಸಹ್ಯಾದ್ರಿ ಕಾಲೇಜು) ಇಂಟರ್ವರೆಗೆ ಓದಿದರು. 1959ರಿಂದ ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ವೃತ್ತಿ ಆರಂಭಿಸಿದ ಅವರು, ದ್ವಿತೀಯ ದರ್ಜೆ ಗುಮಾಸ್ತ, ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ(ಕಾರ್ಗಲ್), ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಂಜೆ ಬೆಂಕಿ, ಮಂಜಿನ ಕಾನು, ಈ ನೆಲೆ ಈ ಜಲ, ಅಜ್ಞಾತ, ನೆಲೆ, ಮಾನವ, ತಿರುಗೋಡಿನ ರೈತ ಮಕ್ಕಳು, ಇಕ್ಕೇರಿಯಲ್ಲಿ ಕ್ರಾಂತಿ, ಶಿವನ ಡಂಗುರ, ದ್ವೀಪ, ಜೀವಕಳೆ, ವರಾಹಿ, ಪ್ರಜ್ಞಾಬಲಿ, ವಿಷ ವರ್ತುಲ, ಮುಳುಗಡೆ, ಕಾಡಿನ ಬೆಂಕಿ, ಪ್ರೀತಿಯೊಂದೇ ಸಾಲದೆ, ದುರ್ಗವೆಂಬ ವ್ಯೂಹ, ರಾಗ ವಿರಾಗ, ವಿಷಾನಿಲ, ಗಾಂಧಿ ಬಂದರು, ಶೃಂಗೇರಿಯಲ್ಲಿ ಶಾಂತಿ, ಒಡ್ಡು, ಕಡಲು ಕಾಯುವುದಿಲ್ಲ, ನೀರು, ತಿರುವು, ಚಿನ್ನದ ಮೊಟ್ಟೆ ಹೀಗೆ 32 ಕಾದಂಬರಿ ರಚಿಸಿದ್ದಾರೆ.
ಸುಮಾರು 20 ಮಕ್ಕಳ ಪುಸ್ತಕಗಳು, 7 ರೇಡಿಯೋ ನಾಟಕಗಳು, 11 ಕಿರು ಕಾದಂಬರಿಗಳು, 5 ನಾಟಕಗಳು, 2 ಜಾನಪದ ಕೃತಿ, 6 ಕಥಾ ಸಂಕಲನ, 4 ಐತಿಹಾಸಿಕ ಕಾದಂಬರಿಗಳು ಇವರು ನಾಡಿಗೆ ಕೊಟ್ಟ ಅಗಾಧವಾದ ಬಳುವಳಿ.
ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ, ಗುಲ್ವಾಡಿ ವೆಂಕಟಾವ್ ಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ, ನಿರಂಜನ ಸಾಹಿತ್ಯ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಶಿಮುಶ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ, ಮಾಸ್ತಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಅರಸಿ ಬಂದಿದ್ದರೆ, ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗರಿ ಅವರ ಮುಡಿಗೇರಿದೆ.
ನಾ. ಡಿಸೋಜ ಅವರಿಗೆ ಅಭಿಮಾನಿಗಳು ನಾ. ಡಿಸೋಜ ಅಭಿನಂದನಾ ಗ್ರಂಥ ಸಮರ್ಪಿಸಿದ್ದಾರೆ. ಡಿಸೋಜ ಹಲವಾರು ಸಣ್ಣ ಕಥೆಗಳು ಕೊಂಕಣಿ, ಮಲಯಾಳಂ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿವೆ. ಇಗರ್ಜಿ ಕಾದಂಬರಿ ಮತ್ತು ಬಾಲಗಂಧರ್ವ, ಏಸುಕ್ರಿಸ್ತ ಕೃತಿ ಇಂಗ್ಲಿಷ್ಗೂ, ನೇತ್ರಾಣಿ ಗುಡ್ಡಕ್ಕೆ ಯಾತ್ರೆ ಕೃತಿ ಹಿಂದಿ ಭಾಷೆಗೂ ಅನುವಾದಗೊಂಡಿದೆ.
ಮುಳುಗಡೆ, ಕೊಳಗ, ಒಳಿತನ್ನು ಮಾಡಲು ಬಂದವರು, ಬಣ್ಣ, ಪಾದರಿಯಾಗುವ ಹುಡುಗ, ಇಬ್ಬರು ಮಾಜಿಗಳು ಮುಂತಾದ ಕಾದಂಬರಿಗಳು ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಪುಸ್ತಕಗಳಾಗಿಯೂ ಆಯ್ಕೆಯಾಗಿದೆ.
ಸುರೇಶ್ ಹೆಬ್ಳೀಕರ್ ಅವರ ನಿರ್ದೇಶನದಲ್ಲಿ ಕಾಡಿನ ಬೆಂಕಿ, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ದ್ವೀಪ, ಸಿರಿಗಂಧ ಶ್ರೀನಿವಾಸಮೂರ್ತಿ ಅವರ ನಿರ್ದೇಶನದಲ್ಲಿ ಬಳುವಳಿ, ಕೋಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ಬೆಟ್ಟದಪುರದ ದಿಟ್ಟ ಮಕ್ಕಳು ಮತ್ತು ಮನು ಅವರ ನಿರ್ದೇಶನದಲ್ಲಿ ಆಂತರ್ಯ ಕಾದಂಬರಿಗಳು ಚಲನಚಿತ್ರಗಳಾದವು. ಇವುಗಳಲ್ಲಿ ಕಾಡಿನ ಬೆಂಕಿ ಚಿತ್ರ ರಜತ ಕಮಲ ಪ್ರಶಸ್ತಿಯನ್ನೂ, ದ್ವೀಪ ಚಿತ್ರ ಸ್ವರ್ಣಕಮಲ ಪ್ರಶಸ್ತಿಯನ್ನೂ ಗಳಿಸಿತು. ದೂರದರ್ಶನ ಮಾಧ್ಯಮದಲ್ಲಿ ಮಕ್ಕಳ ಕಥೆಗಳು, ಹಲವಾರು ಕಾದಂಬರಿಗಳು ನಾಟಕಕ್ಕೆ ರೂಪಾಂತರವಾಗಿ ಪ್ರದರ್ಶಿತವಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.