ಶಿವಮೊಗ್ಗ

ಅಡಕೆ ಬೆಳೆಗಾರರ ನಿರ್ಲಕ್ಷ್ಯ ಸಲ್ಲ

Published On :

ಕ.ಪ್ರ. ವಾರ್ತೆ  ಶಿವಮೊಗ್ಗ  ಡಿ.14
ಅಡಕೆ ಬೆಳೆಗಾರರ ಹಿತಾಸಕ್ತಿಗೆ ದಕ್ಕೆ ಬರದಂತೆ ನೋಡಿಕೊಳ್ಳುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿ ಯಾಗಿದ್ದು, ಸರ್ಕಾರಗಳು ನಿರ್ಲಕ್ಷ್ಯ ವಹಿಸಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆಗೆ ಹೊಸ ಅಡಕೆ ಬಂದಾಗಲೆಲ್ಲಾ ಗುಟ್ಕಾ ನಿಷೇಧದ ಬಗ್ಗೆ ಸುದ್ದಿ ಎದ್ದು ದರ ಕಡಿಮೆಯಾಗುತ್ತಿತ್ತು. ಈ ಬಾರಿ ಅಡಕೆ ನಿಷೇಧದ ಸುದ್ದಿ ಮೇಲೆದ್ದಿದೆ. ಸುಪ್ರೀಂಕೋರ್ಟ್ ಅಡಕೆ ನಿಷೇಧಿಸಿ ತೀರ್ಪು ನೀಡಿದರೆ ಅದು ಬೆಳೆಗಾರನನ್ನು ಸಂಹಾರ ಮಾಡಿದಂತೆ ಎಂದರು.
ಸಿಗರೇಟ್ ಲಾಬಿ: ಕೇಂದ್ರ ಸರ್ಕಾರ ಸಲ್ಲಿಸಿರುವ ವರದಿ ಹಿಂದೆ ಸಿಗರೇಟ್ ಲಾಬಿ ಇರುವ ಶಂಕೆ ವ್ಯಕ್ತಪಡಿಸಿದ ಅವರು, ಅಡಕೆ ನಿಷೇಧದ ತೀರ್ಪನ್ನು ಸುಪ್ರೀಂಕೋರ್ಟ್‌ನಿಂದ ಪಡೆಯಲು ಅಡಕೆ ವಿರೋಧಿ ಶಕ್ತಿಗಳು ಕಾತರರಾಗಿದ್ದಾರೆ. ಕೇಂದ್ರ ಸರ್ಕಾರದ ಪರ ವಕೀಲರು ಗುಟ್ಕಾ ಜತೆಗೆ ಅಡಕೆಯೂ ಹಾನಿಕಾರಕ ಎಂದು ವರದಿ ಸಲ್ಲಿಸಿದ್ದಾರೆ.
ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು. ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದಿಂದ ಅಡಕೆ ಬಗ್ಗೆ ವರದಿಯನ್ನೇನೂ ಕೇಳಿರಲಿಲ್ಲ. ಆದರೂ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ಇಡೀ ದೇಶದ ಶೇ.65 ಅಡಕೆ ಕರ್ನಾಟಕದಿಂದ ಬರುತ್ತದೆ. ಆದರೆ ಅಡಕೆ ಬೆಳೆಯುವ ಪ್ರದೇಶದ ರಾಜ್ಯ ಸಂಪುಟ ಸಚಿವರಾದ ಕಿಮ್ಮನೆ ರತ್ನಾಕರ್, ರಮಾನಾಥ ರೈ, ಜಾರ್ಜ್ ಮುಂತಾದವರು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಿದ್ದಾರೆ. ಅಡಕೆ ರೈತರ ಮತದಿಂದ ಆರಿಸಿ ಬಂದ ಇವರಿಗೆ ಕನಿಷ್ಠ ಕೃತಜ್ಞತೆಯಾದರೂ ಇರಬೇಕಿತ್ತು ಎಂದರು.
ಮುಖ್ಯಮಂತ್ರಿಯವರು ಕೂಡಲೇ ಕೇಂದ್ರ ಸರ್ಕಾರದ ಬಳಿ ನಿಯೋಗ ಕೊಂಡೊಯ್ಯಬೇಕು. ಅಡಕೆ ನಿಷೇಧವಾದರೆ ಆಗುವ ಪರಿಣಾಮವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಮಾಜಿ ಶಾಸಕ ಕುಮಾರಸ್ವಾಮಿ, ಮುಖಂಡರಾದ ದತ್ತಾತ್ರಿ, ಚನ್ನಬಸಪ್ಪ, ರಾಮಚಂದ್ರ, ಬಾ.ರ. ಮಧುಸೂದನ್, ಅರುಣ್, ಅರವಿಂದ್, ಶಿವರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.