ಶಿವಮೊಗ್ಗ

ಗ್ರಾಮದೇವತೆ ಬ್ರಹ್ಮ ರಥೋತ್ಸವ

Published On :

ಶಿವಮೊಗ್ಗ: ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಡಿ. 16ರಿಂದ 18ರವರೆಗೆ ಬ್ರಹ್ಮರಥೋತ್ಸವ ಹಮ್ಮಿಕೊಂಡಿದೆ. ಡಿ. 16ರಂದು ಬೆಳಗ್ಗೆ 9 ಗಂಟೆಯಿಂದ 12ರವರೆಗೆ ಮಹಾಗಣಪತಿ ಪೂಜೆ, ಪುಣ್ಯಾಹ, ದೇವಾನಾಂದಿ, ಬೇರಿ ತಾಡನ, ರಕ್ಷಾಬಂಧ, ಅಂಕುರಾರ್ಪಣ, ನವಗ್ರಹ ಪೂಜೆ, ಸಂಜೆ 6.30ರಿಂದ 8ಗಂಟೆವರೆಗೆ ಅಗ್ನಿಸ್ಥಾಪನೆ, ರಾಕ್ಷೋಘ್ನ ಹಾಗೂ ಸಂಜೆ 4ರಿಂದ 9ರವರೆಗೆ ರಾಜಬೀದಿ ಉತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದು. ಡಿ. 17ರಂದು ಬೆಳಗ್ಗೆ 7ರಿಂದ 9 ಗಂಟೆವರೆಗೆ ಮೂಲಮಂತ್ರ ಹೋಮ, ದುರ್ಗಾ ಹೋಮ, ರಥಾಂಗ ಹೋಮ, ರಥ ಪೂಜೆ, ಪ್ರಾಕಾರೋತ್ಸವ, ರಥಬಲಿ, ಪ್ರಾಕರ ಬಲಿ, ದಂಡವಾಸ್ತು ಬಲಿ, ರಾಜ ಬೀದಿ ಉತ್ಸವ, ಬೆಳಗ್ಗೆ 9.30ರಿಂದ 10ಗಂಟೆವರೆಗೆ ರಥಾರೋಹಣ ಮತ್ತು ರಥೋತ್ಸವ ಮೂಲ ಅಮ್ಮನವರಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ. ಮಧ್ಯಾಹ್ನ 1ರಿಂದ ಮಹಾಮಂಗಳರಾತಿ, ಸಂಜೆ 6ರಿಂದ 7.30ರವರೆಗೆ ಭಕ್ತಿಗೀತೆ ಮತ್ತು ಭಜನೆ ಹಾಗೂ 7ರಿಂದ 9ರವರೆಗೆ ಜಿ. ಅರುಣಕುಮಾರ್ ಮತ್ತು ತಂಡದಿಂದ ಹಾಡುಗಾರಿಕೆ, ರಾತ್ರಿ 9ಕ್ಕೆ ರಥಾವರೋಹಣ. ಡಿ. 18ರಂದು ಬೆಳಗ್ಗೆ 10ಕ್ಕೆ ಅಮ್ಮನವರ ಉತ್ಸವ, ತುಂಗಾ ನದಿಯಲ್ಲಿ ತೀರ್ಥಸ್ನಾನ ಉತ್ಸವ ನಂತರ ದುರ್ಗಾಹೋಮ, ಪೂರ್ಣಾಹುತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಸ್ಥಾನ ಆರ್ಚಕ ಮಂಡಳಿ ತಿಳಿಸಿದೆ. ಧಾರ್ಮಿಕ ಕಾರ್ಯದಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ತಹಸೀಲ್ದಾರ್ ಕೊಟ್ರೇಶ್ ಇದ್ದರು.
ಕುಬ್ಜ ತಳಿ ಅಡಕೆ ಅಧ್ಯಯನಕ್ಕೆ ಚಾಲನೆ
ಶಿವಮೊಗ್ಗ:   ನವಿಲೆಯ ಅಡಕೆ ಸಂಶೋಧನಾ ಕೇಂದ್ರದಲ್ಲಿ ಕುಬ್ಜ ತಳಿ ಅಡಕೆ ಗಿಡದ ಪ್ರಾಯೋಗಿಕ ಅಧ್ಯಯನಕ್ಕೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಡಾ. ಪಿ.ಎಂ. ಸಾಲಿಮಠ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕುಬ್ಜ ತಳಿ ಅಡಕೆ ವಿಟ್ಲದ ಕೇಂದ್ರಿಯ ತೋಟಗಾರಿಕಾ ಸಂಶೋಧನಾ ಕೇಂದ್ರವು ಕರಾವಳಿ ಪ್ರಾಂತ್ಯಕ್ಕಾಗಿ ಹಲವು ವರ್ಷಗಳ ಹಿಂದೆ ಬಿಡುಗಡೆ ಮಾಡಿದೆ. ಮಲೆನಾಡು ಹಾಗೂ ಮೈದಾನ ಪ್ರಾಂತ್ಯಕ್ಕೆ ಈ ತಳಿಗಳ ಸೂಕ್ತತೆ ಅಧ್ಯಯನ ಮಾಡಲು ನವಿಲೆಯ ಅಡಕೆ ಸಂಶೋಧನಾ ಕೇಂದ್ರದಲ್ಲಿ ವಿಟಲ್-ಎ-ಎಚ್-2 ತಳಿಯನ್ನು ನಾಟಿ ಮಾಡಲಾಗಿದೆ ಎಂದರು. ಅಡಕೆಯಲ್ಲಿ ಕುಬ್ಜ ತಳಿಗಳು ಇತ್ತೀಚೆಗೆ ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಉಪಯುಕ್ತ ಎನಿಸಿಕೊಳ್ಳುತ್ತದೆ. ಪ್ರಮುಖವಾಗಿ ಔಷಧಿ ಸಿಂಪರಣೆ, ಕೊಯ್ಲು ಮತ್ತು ಇತರೆ ಬೇಸಾಯದ ಖರ್ಚು ಗಣನೀಯವಾಗಿ ಕಡಿಮೆಯಾಗಿ ಒಟ್ಟಾರೆ ನಿರ್ವಹಣಾ ವೆಚ್ಚವೂ ಸುಧಾರಿಸುತ್ತದೆ. ಈ ತಳಿಯ ಕಾರ್ಯಕ್ಷಮತೆಯನ್ನು ಮಲೆನಾಡು ಮತ್ತು ಮೈದಾನ ಪ್ರಾಂತ್ಯದಲ್ಲಿ ಅಧ್ಯಯನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಅಡಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಎಂ.ಎಸ್. ವಿಘ್ನೇಶ್, ಡಾ. ಕೆ.ಎಸ್. ಶೇಷಗಿರಿ ಮತ್ತಿತರರು ಇದ್ದರು.

ಮಹಿಳಾ ದೌರ್ಜನ್ಯ ವಿರುದ್ಧದ ಪರಿಹಾರ ಪಡೆಯಲು ಮುಂದಾಗಿ: ಗಿರೀಶ್
ಶಿವಮೊಗ್ಗ:  ಅಪ್ನಾದೇಶ್ ಅಸೋಸಿಯೇಷನ್, ಭದ್ರಾವತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಆಶ್ರಯದಲ್ಲಿ ಬಿ.ಆರ್. ಪ್ರಾಜೆಕ್ಟ್‌ನ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಸಭಾಂಗಣದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮ 2005 ಕುರಿತು ಹೋಬಳಿ ಮಟ್ಟದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಪಂಚಾಯಿತಿ ಸದಸ್ಯ ಗಿರೀಶ್, ಮಹಿಳೆಯರಿಗೆ ಸಂಬಂಧಿಸಿದಂತೆ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು, ಮಹಿಳಾ ಸಂಘ -ಸಂಸ್ಥೆಗಳು ಉಪಯೋಗಿಸಿಕೊಳ್ಳಬೇಕು. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನೇಕ ಪರಿಹಾರೋಪಾಯ ದೊರೆಯಲಿವೆ. ಇದನ್ನು ಮಹಿಳೆಯರು ಅರಿತುಕೊಳ್ಳಬೇಕೆಂದರು.
ವಕೀಲ ವಿಜಯ, ವಕೀಲೆ ಪ್ರಭಾ ರಾಘವೇಂದ್ರ ವಿವಿಧ ವಿಷಯ ಕುರಿತು ಮಾಹಿತಿ ನೀಡಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಾಲಕ್ಷ್ಮೀ ಭಟ್, ಮಹಿಳಾ ಸಾಂತ್ವನ ಕೇಂದ್ರದ ಶಾಂತ, ಸಿಂಗನಮನೆ ಗ್ರಾಪಂ ಉಪಾಧ್ಯಕ್ಷೆ ರೇಣುಕಾಬಾಯಿ, ಸದಸ್ಯೆ ಅನಸೂಯ, ಅಪ್ನಾದೇಶ್ ಅಸೋಸಿಯೇಷನ್ ಜಿಲ್ಲಾ ಸಂಚಾಲಕ ಸಿ.ಎಂ. ರಮೇಶ್ ಇದ್ದರು. ಕಾರ್ಯಕ್ರಮದಲ್ಲಿ ಉಮಾದೇವಿ ಪ್ರಾರ್ಥಿಸಿದರು. ರಮಾದೇವಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.