ಅನಿಯಮಿತ ಲೋಡ್ ಶೆಡ್ಡಿಂಗ್ ಆರಂಭ
ಶಿವಮೊಗ್ಗ: ವಿದ್ಯುತ್ ಕೊರತೆಯಿಂದಾಗಿ ಅನಿಯಮಿತ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ರಾಜ್ಯ ಸರ್ಕಾರವು ಖಾಸಗಿ ವಿದ್ಯುತ್ ಕಂಪನಿಗಳಿಗೆ ದೊಡ್ಡ ಮೊತ್ತದ ಬಾಕಿ ಉಳಿಸಿಕೊಂಡಿರುವ ಕಾರಣ, ಅಂತಹ ಸಂಸ್ಥೆಗಳು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿವೆ ಎಂದು ಹೇಳಲಾಗುತ್ತಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿ.18ರ ಮಾಹಿತಿಯಂತೆ ಉಡುಪಿಯ ಯುಪಿಸಿಎಲ್, ಬಳ್ಳಾರಿಯ ಬಿಟಿಪಿಎಸ್, ರಾಯಚೂರಿನ ಆರ್ಟಿಪಿಎಸ್ನಲ್ಲಿ ನಿಗದಿಯಷ್ಟು ವಿದ್ಯುತ್ ಉತ್ಪಾದನೆಯಾಗದ ಕಾರಣ ಎಸ್ಕಾಂಗಳಿಗೆ ಅಗತ್ಯವಾದಷ್ಟು ವಿದ್ಯುತ್ ಪೂರೈಕೆಯಾಗಿಲ್ಲ. ಹೀಗಾಗಿ ಅಲ್ಲಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಮೆಸ್ಕಾಂ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಈಗಾಗಲೇ ಗ್ರಾಮಾಂತರ ಭಾಗದಲ್ಲಿ ದಿನದಲ್ಲಿ ಮೂರು ಗಂಟೆಗೂ ಅಧಿಕ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಎರಡನೇ ಹಂತವಾಗಿ ನಗರ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಕಡಿತ ಆರಂಭಿಸಲಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಇನ್ನು ಒಂದು ವಾರದೊಳಗೆ ಅಧಿಕೃತ ಲೋಡ್ ಶೆಡ್ಡಿಂಗ್ ಜಾರಿಯಾಗಬಹುದು ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಉಡುಪಿಯ ಸ್ಥಾವರದಲ್ಲಿನ 2 ಘಟಕ, ಟಾಟಾ ಕಂಪನಿಗೆ ಸೇರಿರುವ ಬಳ್ಳಾರಿಯ ಉಷ್ಣ ವಿದ್ಯುತ್ ಸ್ಥಾವರದಲ್ಲಿನ 1 ಘಟಕ, ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿನ ಕೆಲವು ಘಟಕಗಳು ಸದ್ಯಕ್ಕೆ ಕೆಲಸ ನಿಲ್ಲಿಸಿವೆ. ಇದರ ಜೊತೆಗೆ ಪವನ ವಿದ್ಯುತ್ ಪೂರ್ಣ ಸಿಗುತ್ತಿಲ್ಲ. ಒಟ್ಟಾರೆಯಾಗಿ 1400 ಮೆಗಾವ್ಯಾಟ್ ಕೊರತೆ ಎದುರಿಸುತ್ತಿದ್ದು, ಎಲ್ಲ ಎಸ್ಕಾಂಗಳಿಗೆ ವಿದ್ಯುತ್ ಕಡಿತಗೊಳಿಸುವಂತೆ ಸೂಚನೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

