ಅರೆಬೆಂದ ವೈದ್ಯರ ಸೃಷ್ಟಿಗೆ ಮುಂದಾದ ಸರ್ಕಾರ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.22
ರಾಜ್ಯದಲ್ಲಿ ಪ್ರತಿಯೊಬ್ಬ ಅಲೋಪತಿ ವೈದ್ಯನಿಗೆ ಐವರು ನಕಲಿ ವೈದ್ಯರಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಸರ್ಕಾರ ಮತ್ತಷ್ಟು ಅರೆಬೆಂದ ವೈದ್ಯರನ್ನು ಸೃಷ್ಟಿಸಲು ಹೊರಟಿದೆ ಎಂದು ಐಎಂಎ ರಾಜ್ಯಾಧ್ಯಕ್ಷ ಡಾ.ಯೋಗಾನಂದ ರೆಡ್ಡಿ ಚಾಟಿ ಬೀಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈದ್ಯರು ಹಳ್ಳಿಗೆ ಹೋಗುತ್ತಿಲ್ಲ ಎಂಬ ಕಾರಣಕ್ಕೆ ಅರೆಬೆಂದ ವೈದ್ಯರನ್ನು ಸೃಷ್ಟಿಸಲು ಹೊರಟಿರುವುದು ದುರಂತ. ಈ ಮೂಲಕ ಮತ್ತೊಂದಿಷ್ಟು ನಕಲಿ ವೈದ್ಯರ ಗುಂಪನ್ನು ಸೃಷ್ಟಿಸಿದಂತಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.
ಬಿಎಸ್ಸಿ ಕಮ್ಯುನಿಟಿ ಮೆಡಿಸನ್, ಬ್ರಿಡ್ಜ್ ಕೋರ್ಸ್ ನೆಪದಲ್ಲಿ ಹಾಗೂ ಬೇರೆ ಬೇರೆ ವೈದ್ಯಕೀಯ ಪದ್ಧತಿಯಲ್ಲಿ ಅಭ್ಯಸಿಸಿದವರಿಗೆ ತುರ್ತು ಸಂದರ್ಭದಲ್ಲಿ ಅಲೋಪತಿ ಪದ್ಧತಿಯಲ್ಲಿ ವೈದ್ಯಕೀಯ ಸೇವೆ ನೀಡಲು ಅವಕಾಶ ನೀಡುವ ಸರ್ಕಾರ ಆಲೋಚನೆ ಸರಿಯಲ್ಲ. ಇದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ ಎಂದರು.
2ನೇ ದರ್ಜೆ ನಾಗರಿಕರೇನಲ್ಲ: ಈ ವಿಚಾರದಲ್ಲಿ ಪ್ರತಿಭಟನಾ ಪತ್ರ ಬರೆಯುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದ್ದೇವೆ.
ಕಾನೂನು ಮಾಡಿ ಎಂದು ಹೇಳಿದ್ದೇವೆ ಎಂದ ಅವರು, ಅರೆಬೆಂದ ವೈದ್ಯರಿಂದ ಚಿಕಿತ್ಸೆ ಪಡೆಯಲು ಹಳ್ಳಿಯ ಜನರು 2ನೇ ದರ್ಜೆ ನಾಗರಿಕರೇನಲ್ಲ. ಅವರಿಗೂ ಉತ್ತಮ ಚಿಕಿತ್ಸೆ ಪಡೆದುಕೊಳ್ಳುವ ಹಕ್ಕಿದೆ. ಹೀಗಾಗಿ ಸರ್ಕಾರ ಪರ್ಯಾಯ ಆಲೋಚನೆ ಮಾಡಬೇಕೇ ಹೊರತು ಅರೆಬೆಂದ ವೈದ್ಯರನ್ನು ಅಲ್ಲಿಗೆ ಕಳುಹಿಸುವುದಲ್ಲ ಎಂದವರು ಹೇಳಿದ್ದಾರೆ.
ರಾಜ್ಯದಲ್ಲಿ ನೀಡುವ ವೈದ್ಯಕೀಯ ಶಿಕ್ಷಣ ಅತ್ಯುತ್ಕೃಷ್ಟವಾದದ್ದು. ಇಲ್ಲಿ ಹೇಳಿಕೊಡುವ ವೈದ್ಯಕೀಯ ವಿಜ್ಞಾನ ಕಲಿಯಲು ಬೇರೆಡೆಯಿಂದಲು ಬರುತ್ತಾರೆ. ಪ್ರತಿವರ್ಷ 4-5 ಸಾವಿರ ವೈದ್ಯರು ವೃತ್ತಿಗೆ ಬರುತ್ತಿದ್ದಾರೆ. ಎಂಬಿಬಿಎಸ್ ಮುಗಿಸಿದ ಬಹುತೇಕರು ಮುಂದಿನ ಶಿಕ್ಷಣಕ್ಕಾಗಿ ಹೋಗುತ್ತಾರೆ. ಹೀಗಾಗಿ ಹಳ್ಳಿಗೆ ನಾಲ್ಕು ವೈದ್ಯರು ಹೋಗುತ್ತಿಲ್ಲ. ಇದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು.
ವೈದ್ಯರ ಕೊರತೆ ವಿಚಾರದಲ್ಲಿ ಪರಿಹಾರಕ್ಕಾಗಿ ಸಾಮಾಜಿಕ ಕಳಕಳಿ ಹೊಂದಿದ ಐಎಂಎ ಸೇರಿದಂತೆ ವಿವಿಧ ಸಂಘಟನೆಗಳು, ಹಿರಿಯ ವೈದ್ಯರು, ವಿಜ್ಞಾನಿಗಳು ಒಟ್ಟಾಗಿ ಚರ್ಚೆ ನಡೆಸಬೇಕು. ಈ ಸಮಸ್ಯೆಗೆ ರಾತ್ರೋರಾತ್ರಿ ಪರಿಹಾರ ಸಿಗುವುದೂ ಇಲ್ಲ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ನಿರ್ಧಾರ ತಪ್ಪು: ಎಂಬಿಬಿಎಸ್ ಮುಗಿಸಿದ ನಂತರ ಒಂದು ವರ್ಷ ಹಳ್ಳಿಯಲ್ಲಿ ಸೇವೆ ಮಾಡಬೇಕೆಂಬ ಕಡ್ಡಾಯ ನಿಯಮ ತಪ್ಪಲ್ಲ. ಆದರೆ, ಅಲ್ಲೇ ಕಾಯಂ ಆಗಬಾರದು.
ಇನ್ನೂ ಹೆಚ್ಚಿನ ಶಿಕ್ಷಣ ಪಡೆದವರ ಸೇವೆ ಅಲ್ಲಿ ದೊರೆಯಬೇಕು. ಸೇವೆ ಮಾಡದೇ ಹೋದರೆ 1- 2 ಲಕ್ಷ ದಂಡ ಕಟ್ಟುವ ನಿರ್ಧಾರ ತಪ್ಪು. ಗಣ್ಯರ ಮಕ್ಕಳು ಗ್ರಾಮೀಣ ಸೇವೆಯಿಂದ ದೂರ ಇರುವಂತೆ ಮಾಡಲು ಇಷ್ಟೆಲ್ಲಾ ಮಾಡುತ್ತಾರೆ ಎಂದು ಟೀಕಿಸಿದರು.
ಹಳ್ಳಿಗೆ ವೈದ್ಯರು ಹೋಗದ ಕಾರಣ ನಕಲಿ ವೈದ್ಯರ ಸೇವೆ ಮುಂದುವರಿಯಲಿ ಎಂಬ ಮಾತು ಆಗಿಂದಾಗೆ ಕೇಳಿಬರುತ್ತದೆ. ಆದರೆ, ಅವರು ಮಾಡುತ್ತಿರುವ ಕೆಲಸ ಸಮಾಜಘಾತಕವಾದದ್ದು ಎಂದರು.
ಮತ್ತಷ್ಟು ಅಪಾಯ: ಮನೆಯಲ್ಲಿ ಊಟವಿಲ್ಲ, ಶುದ್ಧ ನೀರಿಲ್ಲ ಎಂದರೆ ಕೈಗೆ ಸಿಕ್ಕಿದ್ದು ತಿನ್ನಲಾಗುತ್ತದೆಯೇ, ಬೇರೆ ಏನನ್ನಾದರೂ ಕುಡಿಯಲು ಆಗುತ್ತದೆಯೇ... ಹಾಗೆಯೇ... ಶುದ್ಧ ವೈದ್ಯ ಪದ್ಧತಿ ಅನುಸರಿಸಬೇಕು. ಅರ್ಧಂಬರ್ಧ ತಿಳಿದವರಿಂದ ವೈದ್ಯೋಪಚಾರ ನಡೆದರೆ, ಮತ್ತಷ್ಟು ಅಪಾಯ ಹೆಚ್ಚಾಗುತ್ತದೆ ಎಂದು ಹೇಳಿದರು.
ನಕಲಿ ವೈದ್ಯರನ್ನು ಪೋಷಿಸುವ ಕೆಲಸ ಮಾಡಬಾರದು. ಅವರು ಮುಂದುವರಿದರೆ, ಸಮಾಜಕ್ಕೆ ಕಂಟಕ ಎಂದ ಅವರು, ಪ್ರತಿ ಹಳ್ಳಿಯಲ್ಲಿ 5- 6 ನಕಲಿ ವೈದ್ಯರು ಕಾಣಸಿಗುತ್ತಾರೆ. ಇಲ್ಲದ ರೋಗ ಉಲ್ಬಣಿಸಲು ಕಾರಣರಾಗುತ್ತಿದ್ದಾರೆ. ಈ ಬೆಳವಣಿಗೆಯನ್ನು ಐಎಂಎ ಖಂಡಿಸುತ್ತದೆ ಎಂದು ತಿಳಿಸಿದರು.
ಸರಿಯಾದ ಬೆಳವಣಿಗೆಯಲ್ಲ: ಹಳ್ಳಿಗೆ ವೈದ್ಯರು ಹೋಗುತ್ತಿಲ್ಲ. ಹೀಗಾಗಿ ನಕಲಿ ವೈದ್ಯರು ಇರಲಿ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ. ಪಾರಂಪರಿಕ ವೈದ್ಯರನ್ನು ನಾವು ಎಂದು ಪ್ರಶ್ನೆ ಮಾಡಿದ್ದೇ ಇಲ್ಲ.
ಪಾರಂಪರಿಕ ವೈದ್ಯ ಪದ್ಧತಿ ಎಂದಿಗೂ ವ್ಯವಹಾರವಾಗಲೇ ಇಲ್ಲ. ಆದರೆ, ನಕಲಿ ವೈದ್ಯರ ಹಾವಳಿ 7- 8 ವರ್ಷದಿಂದೀಚೆಗೆ ಹೆಚ್ಚು ಪ್ರಚಾರ ಪಡೆದಿದೆ. ಅವರು ಗೆರೆ ದಾಟಿ ಮುಂದೆ ಹೋಗಿದ್ದಾರೆ. ರಾಜ್ಯದಲ್ಲಿ 2ರಿಂದ 3 ಲಕ್ಷ ನಕಲಿ ವೈದ್ಯರಿದ್ದಾರೆ. ಮೊನ್ನೆ- ಮೊನ್ನೆ ತಯಾರಾದ ನಕಲಿಗಳು ಇವರು. ಪ್ರತಿ ಅಸಲಿ ವೈದ್ಯನಿಗೆ 5 ನಕಲಿಗಳಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮನೋ ವೈದ್ಯ ಅಶೋಕ್ ಪೈ, ಐಎಂಎ ಶಿವಮೊಗ್ಗ ಘಕಟದ ಅಧ್ಯಕ್ಷೆ ಡಾ.ವೀಣಾ ಕೋರಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

