ಶಿವಮೊಗ್ಗ

ವರ ಪರೀಕ್ಷೆಗೆ ಬರ್ತಿದ್ದಾರೆ ಉ.ಭಾ.ದ ವಧು ಪೋಷಕರು

Published On :

ಶಿವಮೊಗ್ಗ: ಬ್ರಾಹ್ಮಣ ಸಮುದಾಯದ ಯುವಕರಿಗೆ ವಧು ಸಿಗುತ್ತಿಲ್ಲ ಎಂಬುದು ಸಮಾಜದೊಳಗಿನ ಆತಂಕ. ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಶಿವಮೊಗ್ಗದ ವಿಪ್ರ ಸಂಘಟನೆಗಳು ಕೂಡಿಕೊಂಡು ಒಂದಷ್ಟು ಪ್ರಯತ್ನಗಳನ್ನು ನಡೆಸಿದ್ದು, ಇದರ ಭಾಗವಾಗಿ ಇದೇ ಮಾಸಾಂತ್ಯಕ್ಕೆ ಉತ್ತರ ಪ್ರದೇಶ ಮೂಲದ ಹತ್ತಾರು ವಧುವಿನ ಪೋಷಕರು ಮಲೆನಾಡಿನ ಹಳ್ಳಿಗಳಲ್ಲಿರುವ ವಿಪ್ರ ವರ ಪರೀಕ್ಷೆಗೆ ಆಗಮಿಸುತ್ತಿದ್ದಾರೆ.
ಡಿ. 26ರಂದು ಉತ್ತರ ಪ್ರದೇಶದ ವಧು ಪೋಷಕರ ತಂಡ 27ರಂದು ಶಿವಮೊಗ್ಗ ಸಮೀಪದ ಗ್ರಾಮಗಳು, ಹೊಸನಗರ, ಸಾಗರ ತಾಲೂಕಿನ ಹಳ್ಳಿಗಳಿಗೆ ತೆರಳಿ ವರ ಪರೀಕ್ಷೆ ನಡೆಸಲಿದ್ದಾರೆ.
ಹಿನ್ನೆಲೆ: 2001ರಲ್ಲಿ ವಿಪ್ರ ಚಿಂತನಾ ಸಮಾವೇಶ ಶಿವಮೊಗ್ಗದಲ್ಲಿ ನಡೆದಿತ್ತು. ಅದರಲ್ಲಿ ವಿಪ್ರ ವೈವಾಹಿಕ ಸಮಸ್ಯೆ ಬಗ್ಗೆ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಉತ್ತರ ಭಾರತದೊಂದಿಗೆ ವೈವಾಹಿಕ ಸಂಬಂಧ ಕುರಿತು ವಿಶೇಷ ಗೋಷ್‌ಠಿ ಸಹ ನಡೆದಿತ್ತು. ನಂತರದ ಪ್ರಕ್ರಿಯೆಗಾಗಿ ಜಿಲ್ಲಾ ವಿಪ್ರ ನೌಕರರ ಸಂಘಕ್ಕೆ ಜವಾಬ್ದಾರಿ ನೀಡಲಾಗಿತ್ತು.
 ಮೊದಲು 22 ಜನರ ತಂಡ ದೆಹಲಿಗೆ ಹೋಗಿ ಅಲ್ಲಿ ಬ್ರಾಹ್ಮಣ ಮಹಾಸಭಾದೊಂದಿಗೆ ಚರ್ಚೆ ನಡೆಸಿತು. ಆ ಸಭೆಯಲ್ಲಿ ಉತ್ತರ ಪ್ರದೇಶ, ಜಮ್ಮು, ಬಿಹಾರದ ಮಹಾಸಭಾ ಪ್ರಮುಖರು ಪಾಲ್ಗೊಂಡಿದ್ದರು.
ಬ್ರಾಹ್ಮಣ ಸಂಘಟನೆ ಪ್ರಮುಖರಾದ ಮಾಲಿನಿ, ಅಬಸೆ ದಿನೇಶ್ ಕುಮಾರ್, ಭಾನುಪ್ರಕಾಶ್ ಶರ್ಮ, ಮ.ಸ.ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಮುಂದಿನ ಪ್ರಯತ್ನಗಳು ಆರಂಭವಾದವು.
 ಕಳೆದ ಜೂನ್‌ನಲ್ಲಿ ಉತ್ತರ ಪ್ರದೇಶ ವಿಪ್ರ ಸಮಾಜದ ಪ್ರಮುಖರಾದ ಸದಾನಂದ ತಿವಾರಿ, ಗಣೇಶ್ ತ್ರಿಪಾಠಿ, ಸತಾನಂದ ಶಿವಮೊಗ್ಗಕ್ಕೆ ಆಗಮಿಸಿ ಇಲ್ಲಿನ ಆಚಾರ ವಿಚಾರ, ಊಟದ ಪದ್ಧತಿ, ಬದುಕವ ಶೈಲಿಯ ಬಗ್ಗೆ ಮಾಹಿತಿ ಕಲೆ ಹಾಕಿ ತೆರಳಿದ್ದರು.
 ಇದರ ಮುಂದುವರಿದ ಭಾಗವಾಗಿ ಅಲ್ಲಿನ ವಧುವಿನ ಪೋಷಕರ ಮನಮೊಲಿಸಿ ಇಲ್ಲಿಗೆ ಕರೆ ತರುವ ಕೆಲಸಗಳಾಗಿವೆ. ಇದೇ ಡಿ. 27ರಂದು ವಿಪ್ರ ವಧು ಪೋಷಕರ ತಂಡ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು ನೋಂದಾಯಿತ ವರನ ಮನೆಗಳಿಗೆ ತೆರಳುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಪತ್ರ ಬರೆದಿದ್ದಾರೆ.
ಗ್ರಾಮೀಣ ಭಾಗದ ಕೃಷಿಕರು, ಪುರೋಹಿತರು, ಅಡುಗೆ ಕಾರ್ಮಿಕರನ್ನು ಕೇಂದ್ರೀಕರಿಸಿ ಈ ಪ್ರಯತ್ನ ನಡೆದಿದೆ. ಉತ್ತರ ಪ್ರದೇಶದಿಂದ ಆಗಮಿಸುವ ವಧುಪೋಷಕರ ನಿಯೋಗ ಮೂರು ತಾಲೂಕಿನ 20ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ವರ ವೀಕ್ಷಣೆ ನಡೆಸಲಿದ್ದಾರೆ.
ನಿಯಮಗಳು: ಇಲ್ಲಿ ವಧು-ವರ ಇಬ್ಬರು ಹಾಗೂ ಅವರ ಪೋಷಕರು ಕೆಲವು ನಿಯಮ ಪಾಲಿಸುವುದು ಕಡ್ಡಾಯ. ವಧು-ವರ ಮುಖಾಮುಖಿ ವೀಕ್ಷಣೆಯ ನಂತರ ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುತ್ತದೆ. ನಂತರವಷ್ಟೇ ಜಾತಕ ಇತ್ಯಾದಿಗಳಗಳ ಪರಿಶೀಲನೆ. ಹಾಗೆಯೇ ಮದುವೆ ನೋಂದಣಿ ಕಡ್‌ಡಾಯವಾಗಿರುತ್ತದೆ. ಜೊತೆಗೆ ಸಾಮೂಹಿಕ ನಿಶ್ಚಿತಾರ್ಥ ಮಾಡುವ ಉದ್ದೇಶ ಹೊಂದಲಾಗಿದೆ. ಅಷ್ಟೇ ಅಲ್ಲದೇ, ಆರ್ಥಿಕವಾಗಿ ಹಿಂದುಳಿದಿರುವಂತಹ ವಧುವಿಗೆ ಆರ್ಥಿಕ ನೆರವು ನೀಡಲು ವಿಪ್ರ ಸಂಘಟನೆಗಳು ಆಸಕ್ತಿ ತೋರಿಸಿವೆ.
 ಇದೊಂದು ಸಾಂಘಿಕ ಪ್ರಯತ್ನ ಎಂದರೆ ತಪ್ಪಲ್ಲ. ಸಮಾಜ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವತ್ತ ಹೆಜ್ಜೆ ಇಟ್ಟಿದ್ದು ವಿಪ್ರ ನೌಕರರ ಸಂಘ. ಸಂಘಟನೆ ಮ.ಸ.ನಂಜುಂಡಸ್ವಾಮಿ, ಛಾಯಾಪತಿ, ಎಸ್.ಎಸ್.ನಂಜುಂಡಸ್ವಾಮಿ, ಜಿ.ಎಸ್.ಅನಂತ, ಜಗದೀಶ್ ಗೋಖಲೆ, ರಮಣ, ಕೃಷ್ಣಮೂರ್ತಿ ಬಾಯರ್ ಮತ್ತಿತರ ಪರಿಶ್ರಮವಿದೆ.ಜೊತೆಗೆ ಪಕ್ಷಾತೀತ ಬೆಂಬಲವಿದೆ. ಮಾಜಿ ಡಿಸಿಎಂ ಬಿಜೆಪಿಯ ಕೆ.ಎಸ್.ಈಶ್ವರಪ್ಪ, ಹಾಲಿ ಶಾಸಕ ಕಾಂಗ್ರೆಸ್‌ನ ಪ್ರಸನ್ನಕುಮಾರ್, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಇವರ ಪ್ರಯತ್ನಕ್ಕೆ ಹೊರ ರಾಜ್ಯ ಭೇಟಿ ಸಂದರ್ಭದಲ್ಲಿ ಸಹಕಾರ ನೀಡಿದ್ದಾರೆ.
ಒಟ್ಟಾರೆ, ಸಮಾಜದಲ್ಲಿ ಅನೇಕ ಸಮಾವೇಶಗಳು ನಡೆಯುತ್ತವೇ, ಉದ್ದೇಶ ಈಡೇರಲ್ಲ. ಆದರಿಲ್ಲಿ ಸಂಘಟಿತ- ಪಕ್ಷಾತೀತ ಪ್ರಯತ್ನ ವಿಶೇಷ ಘಟ್ಟವೊಂದಕ್ಕೆ ತಂದು ನಿಲ್ಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.