ಶಿವಮೊಗ್ಗ

ಖಾತ್ರಿ ಯೋಜನೆಯಲ್ಲಿ ಲಂಚದ ವಾಸನೆ

Published On :

ಕ.ಪ್ರ.ವಾರ್ತೆ  ಸಾಗರ  ಡಿ.24
ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಕೂಲಿಯಾಳುಗಳಿಗೆ ವೇತನ ಪಾವತಿಸುವ ಕಡತಗಳಿಗೆ ಸಹಿ ಹಾಕಲು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಲಂಚ ಕೇಳುತ್ತಿದ್ದು, ಇದರಿಂದ ತಾಲೂಕಿನಲ್ಲಿ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಕುಂಠಿತವಾಗಿದೆ ಎಂದು ತಾಪಂ ಸದಸ್ಯ ಪ್ರಕಾಶ್ ಲ್ಯಾವಿಗೆರೆ ಆರೋಪಿಸಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕ್ಷೇತ್ರದ ಶಾಸಕರು ಹಾಗೂ ರಾಜ್ಯ ವಿಧಾನಸಭಾಧ್ಯಕ್ಷರು ಉದ್ಯೋಗಖಾತ್ರಿ ಯೋಜನೆ ನಿಗದಿತ ಗುರಿ ಮುಟ್ಟುವಂತೆ ಕಾಲಕಾಲಕ್ಕೆ ಸೂಚಿಸಿದ್ದಾರೆ. ಜೊತೆಗೆ ಪಾರದರ್ಶಕ ಆಡಳಿತ ನೀಡುವಂತೆಯೂ ಆದೇಶ ನೀಡಿದ್ದಾರೆ. ಆದರೆ ಕಾರ್ಯನಿರ್ವಹಣಾಧಿಕಾರಿಗಳೇ ಪಿಡಿಒ ಹಾಗೂ ಕಾರ್ಯದರ್ಶಿಗಳಿಂದ ಕಡತಗಳಿಗೆ ಸಹಿ ಮಾಡಲು ಲಂಚ ಕೇಳುತ್ತಿರುವುದು ಕೆಟ್ಟ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಹಣ ಕಡ್ಡಾಯ: ಸದಸ್ಯರಾದ ಜ್ಯೋತಿ ಮುರಳೀಧರ್ ಮಾತನಾಡಿ, ಕಡತಗಳಿಗೆ ಸಹಿ ಹಾಕಲು ಹಣ ಕೊಡುವುದು  ಕಡ್ಡಾಯಗೊಳಿಸಲಾಗಿದೆ. ಹಣ ಕೊಡದೆ ಇದ್ದರೆ ಕಡತಗಳಿಗೆ ಸಹಿ ಹಾಕುವುದಿಲ್ಲ ಎಂದು ಕಾರ್ಯನಿರ್ವಹಣಾಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ. ಈ ಕುರಿತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಸದಸ್ಯರ ಬಳಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ. ಸಿದ್ದಪ್ಪ, ಕಡತಗಳಿಗೆ ಸಹಿ ಹಾಕಲು ಯಾರಿಂದಲೂ ಹಣ ಕೇಳಿಲ್ಲ. ನನ್ನ ಮೇಲೆ ಅನಗತ್ಯ ಆರೋಪ ಮಾಡಲಾಗುತ್ತಿದೆ. ಕೆಲವು ಕಡತಗಳು ಕಾನೂನಿನ ಚೌಕಟ್ಟಿನಲ್ಲಿ ಇರುವುದಿಲ್ಲ. ಕೆಲವು ಅರ್ಜಿಗಳಿಗೆ ಭಾವಚಿತ್ರ ಇರುವುದಿಲ್ಲ. ಅಂತಹ ಕಡತಗಳನ್ನು ಸಹಿ ಮಾಡದೇ ಇರುವುದೇ ಇಂತಹ ಆರೋಪ ಬರಲು ಕಾರಣವಾಗಿದೆ ಎಂದು ಸ್ಪಷ್ಟನೆ ನೀಡಿದರು.
ಕಟ್ಟು ನಿಟ್ಟಿನಕ್ರಮ: ಅಧ್ಯಕ್ಷ ಹರೀಶ್ ಗಂಟೆ ಮಾತನಾಡಿ, ಯಾವುದೇ ಅಧಿಕಾರಿಗಳು ಲಂಚ ಪಡೆಯುತ್ತಿದ್ದರೂ, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಾಹಣಾಧಿಕಾರಿ ಸಿದ್ದಪ್ಪ ಅವರಿಗೆ ಕೆಲವು ಸೂಚನೆಗಳನ್ನು ಹಿಂದೆಯೇ ನೀಡಲಾಗಿದೆ ಎಂದರು.
ತಾಲೂಕಿನಲ್ಲಿ ಭೂಸೇನಾ ನಿಗಮ ಹಾಗೂ ನಿರ್ಮಿತಿ ಕೇಂದ್ರದ ವತಿಯಿಂದ ಕಟ್ಟಿಸಿರುವ ಶಾಲಾ ಕಟ್ಟಡ, ಹಾಸ್ಟೆಲ್ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಅನುಮಾನ ಇರುವುದರಿಂದ ತಕ್ಷಣ ಇವುಗಳನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು. ಯಾರೋ ಮಾಡಿದ ತಪ್ಪಿಗೆ ಸ್ಥಳೀಯ ಸದಸ್ಯರು ಜನರಿಂದ ಬೈಗುಳ ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯರಾದ ಶ್ವೇತಾ ಕಾಗೋಡು ಆರೋಪಿಸಿದರು.
ಉಪಾಧ್ಯಕ್ಷೆ ಗೌರಮ್ಮ, ಕಾರ್ಯನಿರ್ವಹಣಾಧಿಕಾರಿ ಟಿ.ಸಿದ್ದಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.