ಇಂದಿನಿಂದ ರಾಷ್ಟ್ರೀಯ ಸಮ್ಮೇಳನ
ಕ.ಪ್ರ. ವಾರ್ತೆ ಶಿವಮೊಗ್ಗ ಡಿ.26
ಗ್ರಂಥಾಲಯ ಕ್ಷೇತ್ರಗಳಲ್ಲಿ ಆಗಿರುವ ಎಲ್ಲಾ ಪ್ರಗತಿಪರ ಬದಲಾವಣೆ ಗಮನದಲ್ಲಿಟ್ಟುಕೊಂಡು ನಗರದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಡಿ.27, 28ರಂದು ಗ್ರಂಥಾಲಯ ಸೇವೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಪರಿಣಾಮಗಳು ವಿಷಯವಾಗಿ ಯುಜಿಸಿ ಪ್ರಾಯೋಜಿತ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ. ಬಿ.ಯು. ಕನ್ನಪ್ಪನವರ, ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯುವ ಸಮ್ಮೇಳನಕ್ಕೆ ಕುವೆಂಪು ವಿಶ್ವವಿದ್ಯಾಲಯ ಕಾಲೇಜು ಗ್ರಂಥಪಾಲಕರುಗಳ ಸಂಘ ಹಾಗೂ ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘದ ಸಹಯೋಗವಿದೆ ಎಂದರು.
ಈ ಸಮ್ಮೇಳನ ಮಾಹಿತಿ ತಂತ್ರಜ್ಞಾನದ ಪರಿಣಾಮದ ಅನೇಕ ಮಜಲುಗಳನ್ನು ಅತ್ಯಂತ ಆಳವಾಗಿ ಚರ್ಚಿಸುವ ಸಲುವಾಗಿ ನಾಡಿನ ಹೆಸರಾಂತ ಗ್ರಂಥಾಲಯ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ತಮ್ಮ ಸಂಶೋಧನಾ ಲೇಖನ ಮಂಡಿಸಲಿದ್ದಾರೆ.
ಜೊತೆಗೆ ಈ ಸಂಪನ್ಮೂಲ ವ್ಯಕ್ತಿಗಳ ಸಮ್ಮುಖದಲ್ಲಿ ಅನೇಕ ಉದಯೋನ್ಮುಖ ಲೇಖಕರು ತಮ್ಮ ವಿವಿಧ ಗೋಷ್ಠಿಗಳಲ್ಲಿ ಮಂಡಿಸಲಿದ್ದಾರೆ. ಲೇಖನ ಮಂಡನೆಯಾದ ನಂತರ ವಿಸ್ತೃತ ಚರ್ಚೆಗಳು ನಡೆಯಲಿವೆ ಎಂದರು.
ಗ್ರಂಥಾಲಯ ವೃತ್ತಿ ಬಾಂಧವರಿಗೆ ತಮ್ಮ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನೆಗೆ ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ಆಳವಾದ ಜ್ಞಾನ ಧಾರೆ ಎರೆಯುವ ಮೂಲಕ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಪ್ರಗತಿಗೆ ಕಾರಣೀಭೂತರಾಗುವುದರಲ್ಲಿ ಯಾವುದೇ ಸಂದೇಹ ಇರುವುದಿಲ್ಲ ಎಂದು ಕನ್ನಪ್ಪನವರ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಧಾರವಾಡದ ಪ್ರೊ. ಎಸ್.ಎಲ್. ಸಂಗಮ, ಮೈಸೂರಿನ ಡಾ. ಐ.ಆರ್. ನಾಗನಗೌಡರ್, ಗುಲ್ಬರ್ಗದ ಡಾ.ರವಿ ಗದ್ದಿಗಿಮಠ, ಬೆಂಗಳೂರಿನ ಡಾ.ಕೃಷ್ಣಮೂರ್ತಿ, ಮಂಗಳೂರಿನ ಡಾ.ಕೈಜರ್ಖಾನ್, ಬೆಳಗಾವಿ ಪ್ರೊ. ಪಿ.ವಿ. ಕೊಣ್ಣೂರ್, ಶಿವಮೊಗ್ಗದ ಪ್ರೊ. ಬಿ.ಎಸ್. ಬಿರಾದಾರ ಭಾಗವಹಿಸಿ ತಮ್ಮ ವಿಚಾರಧಾರೆ ಹಂಚಿಕೊಳ್ಳಲಿದ್ದಾರೆ ಎಂದರು.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಒಟ್ಟಾರೆ 52 ಸಂಶೋಧನಾ ಲೇಖನಗಳು ಈಗಾಗಲೇ ಸ್ವೀಕೃತವಾಗಿವೆ. ಇವುಗಳನ್ನು ಸಾಕಷ್ಟು ಮಂದಿ ಯುವ ಗ್ರಂಥಪಾಲಕರೇ ಸಲ್ಲಿಸಿದ್ದು, ಗೋಷ್ಠಿಗಳಲ್ಲಿ ಇವರು ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆಯಲಿದ್ದಾರೆ ಎಂದು ಹೇಳಿದರು.
ಅಮೂಲ್ಯ ಕೊಡುಗೆ: ಪ್ರಸ್ತುತ ದಿನಮಾನಗಳಲ್ಲಿ ಮಾಹಿತಿ ತಂತ್ರಜ್ಞಾನವು ಸಮಾಜದ ಪ್ರಗತಿಗೆ ಅಗಾಧ ಪರಿಣಾಮ ಬೀರುವ ಮೂಲಕ ಸಮಾಜದ ಒಟ್ಟಾರೆ ಪ್ರಗತಿಗೆ ಕಾರಣೀಭೂತವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳು ಮತ್ತು ದಿನ ನಿತ್ಯದ ಚಟುವಟಿಕೆಗಳನ್ನೊಳಗೊಂಡಂತೆ ಸಮಾಜದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ.
ಈ ಬೆಳವಣಿಗೆಗಳಿಗೆ ಗ್ರಂಥಾಲಯಗಳು ಮತ್ತು ಮಾಹಿತಿ ಕೇಂದ್ರಗಳು ಹೊರತಾಗಿಲ್ಲ. ಗ್ರಂಥಾಲಯಗಳು ಮತ್ತು ಮಾಹಿತಿ ಕೇಂದ್ರಗಳು ಸಾಮಾಜಿಕ ಸಂಸ್ಥೆಗಳಾಗಿ ಮಾಹಿತಿ ತಂತ್ರಜ್ಞಾನದ ಅನ್ವಯಿಕತೆ ಹಾಗೂ ಅದರ ಉಪಯೋಗದಲ್ಲಿ ಮುಂಚೂಣಿಯಲ್ಲಿರುವುದನ್ನು ಕಾಣಬಹುದು.
ಮುಖ್ಯವಾಗಿ ಮಾಹಿತಿ ಹುಡುಕುವಿಕೆ, ಆಯ್ಕೆ, ಸಂಸ್ಕರಣೆ, ಸಂಗ್ರಹಣೆ ಹಾಗೂ ಪ್ರಸರಣೆಯಲ್ಲಿ ತಂತ್ರಜ್ಞಾನವು ಕ್ರಾಂತಿಕಾರಕ ಬದಲಾವಣೆ ತಂದಿವೆ. ಗ್ರಂಥಾಲಯಗಳು ಸಹ ತಂತ್ರಜ್ಞಾನದ ಬದಲಾವಣೆಗಳಿಗೆ ಪೂರಕವಾಗಿ ಮಾರ್ಪಾಡುಗಳನ್ನು ಕಾಲಕಾಲಕ್ಕೆ ಅಳವಡಿಸಿಕೊಂಡು ಬರುವ ಮೂಲಕ ಶಿಕ್ಷಣ ಕೇಂದ್ರಗಳ ಅವಿಭಾಜ್ಯ ಅಂಗಗಳಾಗಿ ಶೈಕ್ಷಣಿಕ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಸಮ್ಮೇಳನವು ಪ್ರಸ್ತುತ ಸನ್ನಿವೇಶದಲ್ಲಿ ಮಹತ್ವ ಪಡೆದುಕೊಂಡಿದೆ ಎಂದರು.
ಉದ್ಘಾಟನೆ: ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಮ್ಮೇಳನ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾದ ಪ್ರೊ. ಬಿ.ಎನ್. ಭಾಗ್ಯಲಕ್ಷ್ಮಿ, ಜಂಟಿ ನಿರ್ದೇಶಕ ಪ್ರೊ. ಸಿ.ಎಂ. ವಿವೇಕಾನಂದ, ಪ್ರೊ ಎಸ್.ಎಲ್. ಸಂಗಮ್ ಉಪಸ್ಥಿತರಿರುವರು. ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ.ರವಿ ಗಡ್ಡಿಮಠ ದಿಕ್ಸೂಚಿ ಭಾಷಣ ಮಾಡುವರು. ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್.ಜಯದೇವಪ್ಪ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಿ. ಶಕುಂತಲಾ ಹಾಜರಿರುವರು. ಕುವೆಂಪು ವಿವಿ ಕುಲಸಚಿವೆ ಮಲ್ಲಿಕಾ ಘಂಟಿ ಅಧ್ಯಕ್ಷತೆ ವಹಿಸುವರು.
ಸುದ್ದಿಗೋಷ್ಠಿಯಲ್ಲಿ ಜಯದೇವಪ್ಪ, ಎಚ್.ಬಿ. ಮಡಿವಾಳರ್, ಶ್ಯಾಮಸುಂದರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

