'ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ಸಹಕಾರಿ'
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.26
ಪರೀಕ್ಷೆ ಎಂಬ ಗಾಬರಿಯನ್ನು ಮಕ್ಕಳಿಂದ ದೂರ ಮಾಡಲು ಪರೀಕ್ಷಾ ಪೂರ್ವ ತರಬೇತಿ- ಕಾರ್ಯಾಗಾರಗಳು ಸಹಕಾರಿ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು.
ಕುವೆಂಪು ರಂಗಮಂದಿರದಲ್ಲಿ ಅರಿವು ಸಾಮಾಜಿಕ ಸಂಸ್ಥೆ ಹಾಗೂ ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಎಂಬುದು ಬಂಗಾರದ ಸಮಯ. ಈ ಹಂತದಲ್ಲಿ ಶಿಕ್ಷಣದಿಂದ ದೊರೆಯುವ ಬದುಕು ಒಳ್ಳೆಯ ದಿಕ್ಕಿನೆಡೆಗ ಸಾಗಿ ಉಜ್ವಲ ಭವಿಷ್ಯ ನಿರ್ಮಾಣವಾಗುತ್ತದೆ ಎಂದ ಅವರು, ಪರೀಕ್ಷೆ ಎಂದ ಮಾತ್ರಕ್ಕೆ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದರು.
ಎಸ್ಎಸ್ಎಲ್ಸಿ ಎಂಬುದು ಜೀವನ ಬಹಳ ಮುಖ್ಯ ಘಟ್ಟ. ಇದನ್ನು ಎದುರಿಸಲು ಮಕ್ಕಳು ಸಾಕಷ್ಟು ತಯಾರಿ ನಡೆಸಬೇಕು. ಆದರೆ, ಪರೀಕ್ಷೆ ಎಂದ ಕೂಡಲೇ ಕೆಲವು ಮಕ್ಕಳು ಆತಂಕಕ್ಕೆ ಒಳಗಾಗಿ ಮಾನಸಿಕ ತೊಂದರೆಗೆ ಒಳಗಾಗುತ್ತಿದ್ದಾರೆ. ಅಲ್ಲದೇ ಅವರು ಓದಿದ್ದನ್ನೂ ಮರೆತು ಹೋಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಹೀಗಾಗಿ ಇಂತಹ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಮನಸ್ಸು ಹಿಡಿತದಲ್ಲಿಟ್ಟುಕೊಳ್ಳಿ ಎಂದ ಮಕ್ಕಳಿಗೆ ಕರೆ ನೀಡಿದ ಅವರು, ಪೋಷಕರು ನಿಮ್ಮ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡು ಸಮಾಜದಲ್ಲಿ ನೀವು ಉತ್ತಮ ಪ್ರಜೆಯಾಗಲು ಆಸೆ ಪಡುತ್ತಾರೆ. ಅವರ ಆಸೆಗೆ ತಣ್ಣೀರೆರಚದೆ ಓದಿನ ಕಡೆಗೆ ಹೆಚ್ಚು ಗಮನ ಹರಿಸಿ ಎಂದು ಕರೆ ನೀಡಿದರು.
ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ಮಾಜಿ ಜಿಲ್ಲಾ ಗೌವರ್ನರ್ ಎಚ್.ಎಲ್.ರವಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯನ್ನು ಕಬ್ಬಿಣದ ಕಡಲೆ ಎಂದುಕೊಳ್ಳಬಾರದು. ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದನ್ನು ಮುಂಚಿತವಾಗಿ ಅಭ್ಯಸಿಸಿ ಎಂದು ಕರೆ ನೀಡಿದರು.
ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅದರಿಂದ ದಿಗ್ಭ್ರಮೆಗೆ ಒಳಗಾಗದೆ ಅದನ್ನು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಮುನ್ನುಗ್ಗಿ ಜೀವನ ಸಾಧನೆಯಿಂದ ಅನುಭವಿಸಿ ಹಾಗೆಯೇ ಆರೋಗ್ಯದ ಕಡೆಯೂ ಗಮನ ವಿರಲಿ ಎಂದು ಸಲಹೆ ನೀಡಿದರು. ಅಧ್ಯಕ್ಷತೆಯನ್ನು ಅರಿವು ಸಂಸ್ಥೆ ಅಧ್ಯಕ್ಷ ಎಸ್.ಎಲ್. ಲಕ್ಷ್ಮೀಕಾಂತ ವಹಿಸಿದ್ದರು. ರೋಟರಿ ಶಿವಮೊಗ್ಗ ಜ್ಯುಬಿಲಿ ಅಧ್ಯಕ್ಷ ರೇವಣಸಿದ್ದಪ್ಪ, ಲೆಫ್ಟಿನೆಂಟ್ ಎಸ್.ಎಸ್. ವಾಗೀಶ್, ಅರಿವು ಸಂಸ್ಥೆ ಕಾರ್ಯದರ್ಶಿ ಎಸ್.ಬಿ. ಅಶೋಕ್ ಯಾದವ್, ಸಂಪನ್ಮೂಲ ವ್ಯಕ್ತಿ ವಿಲಿಯಂ ಡಿಸೋಜ, ಡಿ. ಬಾಲಕೃಷ್ಣ ಲೋಕೇಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

