ಶಿವಮೊಗ್ಗ

ಹೊಸ ವರ್ಷ ಹೆಸರಲ್ಲಿ ತಪ್ಪು ಆಚರಣೆ ತಡೆಗೆ ಆಗ್ರಹ

Published On :

ಶಿವಮೊಗ್ಗ: ರಾಜ್ಯದ ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳ ಮತ್ತು ಸಾರ್ವಜನಿಕ ಸ್ಥಳ, ಶಾಲಾ- ಮಹಾವಿದ್ಯಾಲಯಗಳಲ್ಲಿ ಡಿ. 31ರಂದು ಹೊಸ ವರ್ಷದ ಹೆಸರಿನಲ್ಲಿ ನಡೆಯುವ ತಪ್ಪು ಆಚರಣೆ, ಕುಸಂಸ್ಕಾರ ತಡೆಯುವಂತೆ ಹಿಂದೂ ಜನಜಾಗೃತಿ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
   ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮನವಿ ಅರ್ಪಿಸಿದ ಸಮಿತಿ ಸದಸ್ಯರು, ಸದ್ಯ ಪಾಶ್ಚಾತ್ಯ ರೂಢಿಗಳ ಹೆಚ್ಚುತ್ತಿರುವ ಅಂಧಾನುಕರಣೆಯಿಂದ ನಮ್ಮ ದೇಶದಲ್ಲಿಯೂ ಹೊಸ ವರ್ಷವನ್ನು ಯುಗಾದಿಯ ಬದಲು ಡಿ. 31ರ ಮಧ್ಯರಾತ್ರಿ 12 ಗಂಟೆಗೆ ಆಚರಿಸುತ್ತಿರುವ ಕೆಟ್ಟ ಸಂಪ್ರದಾಯ ಹೆಚ್ಚಾಗಿದೆ.
    ಅಂದು ರಾತ್ರಿ ಯುವಕರು ತೀರ್ಥಕ್ಷೇತ್ರಗಳಲ್ಲಿ, ಕೋಟೆ, ಪ್ರವಾಸಿ ಸ್ಥಳಗಳು, ಐತಿಹಾಸಿಕ ಮತ್ತು ಸಾರ್ವಜನಿಕ ಸ್ಥಳ, ಶಾಲಾ-ಕಾಲೇಜು ವರಾಂಡಗಳಲ್ಲಿ ಮದ್ಯಪಾನ, ಅಮಲು ಪದಾರ್ಥಗಳ ಸೇವನೆ ಮಾಡುವ ಪ್ರಮಾಣ ಹೆಚ್ಚಾಗಿದೆ ಎಂದು ಸಮಿತಿ ಸದಸ್ಯರು ಆತಂಕ ವ್ಯಕ್ತಪಡಿಸಿದರು.
ಕೆಲವೊಂದು ಕಡೆ ರಾತ್ರಿಯಿಡೀ ದೊಡ್ಡ ಸ್ವರದಲ್ಲಿ ಪಟಾಕಿ ಸಿಡಿಸುವುದು, ಕರ್ಕಶ ಧ್ವನಿವರ್ಧಕ ಹಾಕಿ ಅದರ ತಾಳಕ್ಕೆ ಅಶ್ಲೀಲ ಅಂಗ ಪ್ರದರ್ಶನ ಮಾಡಿ ನೃತ್ಯ ಮಾಡಲಾಗುತ್ತದೆ.
ಅವಾಚ್ಯ ಬೈಗುಳ ಪ್ರಯೋಗಿಸಲಾಗುತ್ತದೆ. ಹಾಗೆಯೇ ಅದರಿಂದ ಯುವತಿಯರನ್ನು ಛೇಡಿಸುವ ಪ್ರಕರಣಗಳು ನಡೆದು ಒಟ್ಟಾರೆ ಕಾನೂನು ಮತ್ತು ಸುವ್ಯವಸ್ಥೆಯ ಸಂದರ್ಭದಲ್ಲಿ ಗಂಭೀರ ಸ್ಥಿತಿ ನಿರ್ಮಾಣವಾಗುತ್ತಿದೆ ಎಂಬುದು ಸಮಿತಿ ಸದಸ್ಯರು ಹೇಳಿದರು.
ಪ್ರತಿಬಂಧಿಸಿ: ಡಿ. 31ರಂದು ರಾಜ್ಯದ ಪ್ರಮುಖ ತೀರ್ಥಕ್ಷೇತ್ರ, ಪ್ರವಾಸಿ ಸ್ಥಳ, ಕೋಟೆಯಂತಹ ಐತಿಹಾಸಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮತ್ತು ಧೂಮಪಾನ ಹಾಗೂ ಪಾರ್ಟಿ ಮಾಡಲು ಪ್ರತಿಬಂಧಿಸಬೇಕು. ಆರಕ್ಷಕರಿಂದ ಗಸ್ತು ದಳ ಪ್ರಾರಂಭಿಸುವುದು, ವೇಗದಲ್ಲಿ ವಾಹನ ಚಲಾಯಿಸುವವರ ಮೇಲೆ ಕ್ರಮ ಕೈಗೊಳ್ಳುವುದು, ಪಟಾಕಿ ಕುರಿತು ಜಾಗೃತಿ ಮೂಡಿಸುವುದು ಸೇರಿದಂತೆ ವಿವಿಧ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿಂದೂ ಜನಜಾಗೃತಿ ಸಮಿತಿಯು ಡಿಸೆಂಬರ 31ರಂದು ರಾತ್ರಿ ಹೊಸ ವರ್ಷದ ಹೆಸರಲ್ಲಿ ನಡೆಯುವ ಚಟುವಟಿಕೆಯ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದು ಮುಖಂಡರು ತಿಳಿಸಿದರು. ಮನವಿ ನೀಡುವ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮುಕುಂದ, ಮಹೇಂದ್ರ, ವಾಗೀಶ್, ಪ್ರಭಾ ಕಾಮತ್, ರಾಘವೇಂದ್ರ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.