ಶಿವಮೊಗ್ಗ

'ಶ್ರೀರಾಮಯಣ ದರ್ಶನಂ' ಡಿವಿಡಿಯಲ್ಲಿ...

Published On :

ಶಿವಮೊಗ್ಗ: ಕುಪ್ಪಳಿ-1971-71ರ ಅವಧಿ, ಮೈಸೂರಿನ ಉದಯ ರವಿಯಲ್ಲಿ ಕುವೆಂಪು ಅವರು ತಮ್ಮ ಅಭಿಲಾಷೆಯನ್ನು ಮೂರ್ನಾಲ್ಕು ಬಾರಿ ಒತ್ತಿ ಒತ್ತಿ ಹೇಳಿದ್ದರು. ಆ ಸಂದರ್ಭ ಇನ್ನೂ ನೆನಪಿದೆ. ಇಂದು ಅವರ ಅಭಿಲಾಷೆ ಈಡೇರಿದೆ... ಖುಷಿಯಾಗುತ್ತಿದೆ ಎಂದು ಹೇಳಿದರು ಸಾಹಿತಿ ಕಮಲಾ ಹಂಪನಾ.
'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಶ್ರೀರಾಮಾಯಣ ದರ್ಶನಂ ಕೃತಿಯು ಹೆಚ್ಚು ಜನರನ್ನು ಮುಟ್ಟಬೇಕು. ಹೀಗಾಗಿ ಅದು ಧ್ವನಿಸುರುಳಿ ರೂಪದಲ್ಲಿ ಬರಬೇಕು. ಅದರಲ್ಲೂ ಗಮಕ ವಾಚನ ವ್ಯಾಖ್ಯಾನ ರೂಪದಲ್ಲಿ ಹೊರಬರಬೇಕು ಎಂಬುದು ಕುವೆಂಪು ಅವರ ಅಪೇಕ್ಷೆಯಾಗಿತ್ತು ಎಂದರು.
ಅಂದಿನ ಘಟನೆ: ನಾನು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಅಂದು ಬಿಎ ಆನರ್ಸ್‌ನಲ್ಲಿದ್ದ 22 ಸಂಶೋಧನಾ ವಿದ್ಯಾರ್ಥಿಗಳ ಗುಂಪನ್ನು ಕುವೆಂಪು ಅವರ ಮನೆಗೆ ಕರೆದೊಯ್ದಿದ್ದೆ. ಕುವೆಂಪು ಅವರೊಂದಿಗೆ ಮಾತನಾಡಬೇಕು, ಅವರ ಮಾತು ಕೇಳಬೇಕೆಂಬುದು ವಿದ್ಯಾರ್ಥಿಗಳ ಅಭಿಲಾಷೆಯಾಗಿತ್ತು.
ಅಂತೆಯೇ ಮೈಸೂರಿನ ಉದಯರವಿಗೆ ತೆರಳಿದೆವು. ಮನೆಯಲ್ಲಿ ಕುವೆಂಪು ಅವರೊಂದಿಗೆ ಪತ್ನಿ ಹೇಮಾವತಿ, ಮಕ್ಕಳೂ ಇದ್ದರು. ಉಪಹಾರವಾಯಿತು, ನಂತರ ಮಾತುಕತೆ ಆರಂಭವಾಯಿತು. ಮಕ್ಕಳು ಕುವೆಂಪು ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಜೊತೆಗೆ ತಾವು ರಚಿಸಿದ ಶ್ರೀರಾಮಾಯಣ ದರ್ಶನಂ ಕೃತಿಯು ಧ್ವನಿಸುರಳಿ ರೂಪದಲ್ಲಿ ಹೊರಬೇಕು ಎಂದು 3 ಬಾರಿ ಒತ್ತಿ ಹೇಳಿ ನನ್ನ ಕಡೆ ನೋಡಿದರು ಕುವೆಂಪು ಅವರು. ಇದನ್ನು ಎಲ್ಲರೂ ಓದಿಕೊಳ್ಳಲು ಸಾಧ್ಯವಿಲ್ಲ. ಜನರಿಗೆ ತಲುಪಬಹುದಾದ ಮಾಧ್ಯಮದಲ್ಲಿ ಅಂದರೆ ಗಮಕ- ವ್ಯಾಖ್ಯಾನದ ಮೂಲಕ ಧ್ವನಿಸುರಳಿ ರೂಪಾಂತರದಲ್ಲಿ ತಲುಪಿಸುವ ಕಾರ್ಯವಾಗಬೇಕೆಂದಿದ್ದರು ಎಂದು ಕಮಲಾ ಹಂಪನಾ ವಿವರಿಸಿದರು.
ನಂತರದ ದಿನಗಳಲ್ಲಿ ಈ ಅಪೇಕ್ಷೆ ಈಡೇರಿಸುವುದು ಅಷ್ಟು ಸುಲಭ ಸಾಧ್ಯವಿಲ್ಲವಾದ್ದರಿಂದ ಬರೀ ಮಾತಿನಲ್ಲೇ ಚರ್ಚೆ ಮುಗಿದು ಹೋಗುತ್ತಿತ್ತು. ಅಂತೂ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಹಂಪನಾ (ಪತಿ)ಯವರಿಗೆ ಈ ವಿಚಾರದಲ್ಲಿ ಮನೆಯಲ್ಲಿ ಸದಾ ಒತ್ತಡ ಹೇರುತ್ತಿದ್ದ ಪರಿಣಾಮ ಚಟುವಟಿಕೆ ಆರಂಭವಾಯಿತು. ಎಲ್ಲರೂ ಕೈಜೋಡಿಸಿದರು ಎಂದು ತಿಳಿಸಿದರು.
ಈಡೇರಿತು ಅಪೇಕ್ಷೆ: ರಾಷ್ಟ್ರಕವಿ ಕುವೆಂಪು ಅವರ ಅಪೇಕ್ಷೆ ನಾಲ್ಕು ದಶಕದ ನಂತರ ಈಡೇರಿದೆ. ಕುವೆಂಪು ಅವರ 109ನೇ ಹುಟ್ಟುಹಬ್ಬದ ಆಚರಣೆ ವೇಳೆಯಲ್ಲಿ ಶ್ರೀರಾಮಯಣ ದರ್ಶನಂ ಕಾವ್ಯವು ಧ್ವನಿ ಸಾಂದ್ರಿಕೆ (ಡಿವಿಡಿ) ರೂಪ ಬಿಡುಗಡೆಯಾಗಿದೆ.
ಕುವೆಂಪು ಅಭಿಮಾನಿಗಳು, ಶಿಷ್ಯರು, ಕಲಾವಿದರು ಕೂಡಿಕೊಂಡು ಕುವೆಂಪು ಅಪೇಕ್ಷೆಗೆ ಮೂರ್ತ ರೂಪಕೊಟ್ಟು ಡಿವಿಡಿ ರೂಪದಲ್ಲಿ ಹೊರತಂದಿದ್ದು, ಗಮಕ ವಾಚನ- ವ್ಯಾಖ್ಯಾನ ರೂಪದಲ್ಲಿ ಪ್ರಸ್ತುತಗೊಂಡಿದೆ.
ಎಂ.ಆರ್. ಸತ್ಯನಾರಾಯಣ ನಿರ್ದೇಶನದಲ್ಲಿ ಜಸ್ಟಿಸ್ ಎ.ಜೆ.ಸದಾಶಿವ, ಪ್ರೊ. ಎಂ.ಎಚ್. ಕೃಷ್ಣಯ್ಯ, ಕಡಿದಾಳು ಪ್ರಕಾಶ್ ಅವರ ತಂಡ ಕಳೆದ ಒಂದೂವರೆ ವರ್ಷದಿಂದ ಪ್ರಯತ್ನ ನಡೆಸಿ ಈ ಅಪರೂಪದ ಕೊಡುಗೆಯನ್ನು ಸಜ್ಜುಗೊಳಿಸಿದ್ದಾರೆ.
ನಾಡಿನ 40 ಗಮಕಿಗಳು, ವ್ಯಾಖ್ಯಾನಕಾರರನ್ನು ಕಲೆ ಹಾಕಿ ಅದಕ್ಕೊಂದು ರೂಪ ಕೊಟ್ಟಿದ್ದು ಸತ್ಯನಾರಾಯಣ ಅವರು. ಅವರ ಮಾರ್ಗದರ್ಶನದಲ್ಲಿ ಸಾಹಿತಿಗಳ ತಂಡ ತಿದ್ದಿ ತೀಡಿ 81 ಗಂಟೆಯಲ್ಲಿ ಶ್ರೀರಾಮಾಯಣ ದರ್ಶನಂ ಮೂಡಿಬಂದಿದೆ. ಐದು ಡಿವಿಡಿಗಳಲ್ಲಿ ಅಡಕಗೊಂಡಿದೆ. ಲಹರಿ ಸಂಸ್ಥೆ ಡಿವಿಡಿ ಸಿದ್ಧಪಡಿಸಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಯೋಜನೆಗೆ ಸರ್ಕಾರದ ಆರ್ಥಿಕ ನೆರವು ಪಡೆದುಕೊಂಡಿದ್ದು, 500 ಮುಖಬೆಲೆಯ ಐದು ಡಿವಿಡಿ ಗುಚ್ಛ ಸೋಮವಾರದಿಂದಲೇ ಮಾರುಕಟ್ಟೆಯಲ್ಲಿ ದೊರೆಯಲಿದೆ.
ಬರುತ್ತಿದೆ ಕುವೆಂಪು ಚಿತ್ರ ಸಂಪುಟ
ಕುವೆಂಪು ಅವರ ಅಪರೂಪದ ಕ್ಷಣಗಳನ್ನು ಸೆರೆ ಹಿಡಿದಿರುವ ಫೋಟೋಗಳ ಸಂಪುಟವೊಂದು ಇನ್ನೆರಡು ತಿಂಗಳಲ್ಲಿ ಹೊರಬರುತ್ತಿದೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಈ ಸಂಪುಟ ಹೊರತರುತ್ತಿದ್ದು, ಅಂದಾಜು ಒಂದು ಸಾವಿರ ಫೋಟೋಗಳು ಸಂಪುಟದಲ್ಲಿರುತ್ತವೆ ಎಂದು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ತಿಳಿಸಿದ್ದಾರೆ.
ಇದು ನಮ್ಮ ಸಂಸ್ಥೆಯ ಶ್ರೇಷ್ಠ ಮಟ್ಟದ ಯೋಜನೆ ಎಂದು ಭಾವಿಸಿದ್ದೇನೆ. ಹಾಗೆಯೇ ಇದೊಂದು ದಾಖಲೆ ಕೂಡ. ಒಂದು ಸಾಹಿತ್ಯ ಕೃತಿಯನ್ನು 81 ಗಂಟೆಯಲ್ಲಿ ದಾಖಲಿಸಿ ಪ್ರಸ್ತುತಪಡಿಸುತ್ತಿರುವುದು ಇದೇ ಮೊದಲು. ಹೆಮ್ಮೆ ಎನಿಸುತ್ತಿದೆ.
- ವೇಲು, ಲಹರಿ ಆಡಿಯೋ ರೆಕಾರ್ಡಿಂಗ್

ಹತ್ತಾರು ವರ್ಷಗಳ ಕನಸು ಈಡೇರಿದ ಕ್ಷಣದಲ್ಲಿ ಭಾವುಕನಾಗಿದ್ದೇನೆ. ಶ್ರೀರಾಮಾಯಣ ದರ್ಶನಂಅನ್ನು ಜನರಿಗೆ ತಲುಪಿಸದೆ ಇದ್ದರೆ ಹೇಗೆ, ಇದೀಗ ಡಿವಿಡಿ ಹೊರತಾಗಿ ಬೇರೆ ಬೇರೆ ಮಾರ್ಗಗಳಲ್ಲೂ ತಲುಪಿಸುವ ಕೆಲಸವಾಗಬೇಕು.
- ಜಸ್ಟಿಸ್ ಎ.ಜೆ. ಸದಾಶಿವ



-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.