ಶಿವಮೊಗ್ಗ

ಟ್ಯಾಗೋರ್‌ಗೆ ಕುವೆಂಪು ಸರಿಸಮ

Published On :

ಕುವೆಂಪು 109ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸಚಿವ ಕಿಮ್ಮನೆ ರತ್ನಾಕರ್
ತೀರ್ಥಹಳ್ಳಿ:  ಕುವೆಂಪು ಅವರು ತಮ್ಮ ಸಾಹಿತ್ಯ ಕೃಷಿಯಲ್ಲಿ ತೊಡಗಿದ ಪರ್ವ ದಿನಗಳಲ್ಲಿ ಹಲವಾರು ಖ್ಯಾತರು ತಮ್ಮ ಕಾರ್ಯವೇ ಮೇಲೆಂದು ಹೇಳುತ್ತಿದ್ದವರು ಇಂದು ಕಳೆದು ಹೋಗಿದ್ದಾರೆ. ಕವಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ಕುವೆಂಪು ಸರಿಸಮಾನರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.
ಕುಪ್ಪಳಿಯ ಹೇಮಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ 109ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರವೀಂದ್ರರ 'ಗೋರಾ' ಕಾದಂಬರಿಯನ್ನು ಓದಿದರೆ ಕುವೆಂಪು- ಟ್ಯಾಗೋರ್ ಸರಿಸಮಾನರು ಎಂಬ ಬೆಳಕು ಮೂಡುತ್ತದೆ ಎಂದು ಹೇಳಿದರು.
'ಕುವೆಂಪು ರಾಮಾಯಣ ದರ್ಶನಂ'ನ ಡಿವಿಡಿ- ಧ್ವನಿಸುರಳಿಯನ್ನು ಸಮಾಜದ ಎಲ್ಲರೂ ಕೇಳುವಂತೆ ವ್ಯವಸ್ಥೆ ಮಾಡಲು ಕೈಲಾದ ಪ್ರಯತ್ನ ಮಾಡಲಾಗುವುದು. ಸರ್ಕಾರದಲ್ಲಿರುವ ಸಣ್ಣ ಸಚಿವ ನಾನು. ವೇದಿಕೆಯಲ್ಲಿ ಯಾವುದೇ ಆಶ್ವಾಸನೆ ಕೊಡದೇ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದರು.
ಕುವೆಂಪು ಅವರ 'ರಾಮಾಯಣ ದರ್ಶನಂ' ಕೃತಿಯನ್ನು ಗಮಕ ಕೃತಿಯನ್ನಾಗಿಸಿ ಕೇಳುವ ಅವಕಾಶ ಕೊನೆಗೂ ಕೈಗೂಡಿದ್ದಕ್ಕಾಗಿ ಭಾವುಕರಾಗಿಯೇ ಮಾತಿಗಾರಂಭಿಸಿದ ಜಸ್ಟಿಸ್ ಎ.ಜೆ. ಸದಾಶಿವ, ಈ ವ್ಯವಸ್ಥೆ ಆಗಬೇಕೆಂಬುದು ಕಳೆದ ಹತ್ತಾರು ವರ್ಷಗಳಿಂದಲೂ ಕನಸುಕಾಣುತ್ತಿದ್ದೆ. ಗಮಕ ಕಲೆ ಇಲ್ಲದಿದ್ದರೇ ಕುಮಾರ ವ್ಯಾಸನ ಕರ್ಣ, ಕೃಷ್ಣ ಜನರ ಮನಸ್ಸನ್ನು ತಲುಪುತ್ತಿರಲಿಲ್ಲ. ಜನರಲ್ಲಿ ಕಾನೂನುಪ್ರಜ್ಞೆಯ ಅರಿವು ಮೂಡಿಸಲು ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಕುವೆಂಪು ರಾಮಾಯಣ ದರ್ಶನಂ- ಶ್ರವಣವ್ಯವಸ್ಥೆಯ ಪ್ರಸಾರ ಮಾಡುವ ಅಗತ್ಯವಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಭವ್ಯ ಭಾರತದ ಕಲ್ಪನೆ ಇಟ್ಟುಕೊಂಡು ಬರೆದ ಕಾವ್ಯಗಳಲ್ಲಿ ಮೇರು ಕೃತಿಯಾದ 'ಕುವೆಂಪು ರಾಮಾಯಣ ದರ್ಶನಂ', ಪ್ರತಿಷ್ಠಾನದ ಉತ್ತಮ  ಕಾರ್ಯನಿರ್ವಹಣೆಯಿಂದಾಗಿ ಧ್ವನಿ ಸುರಳಿಯಾಗಿ ಬಿಡುಗಡೆಯಾಗಿದೆ. ಪ್ರತಿಷ್ಠಾನವು ಮೂಲಕ ಇನ್ನೊಬ್ಬ ಮಹಾನ್ ಕವಿಯನ್ನು ಗುರುತಿಸುವ ಮೂಲಕ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಂಡಿದೆ ಎಂದೂ ಹೇಳಿದರು.
ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ಕರವೇ ಅಧ್ಯಕ್ಷ ನಾರಾಯಣ ಗೌಡ ಮಾತನಾಡಿದರು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಹಂ.ಪ. ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜೇಂದ್ರ ಬುರಡಿಕಟ್ಟಿ ಕಾರ್ಯಕ್ರಮ ನಿರೂಪಿಸಿ, ಕಡಿದಾಳು ಪ್ರಕಾಶ್ ಸ್ವಾಗತಿಸಿದರು. ಮನುದೇವ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.