ಶಿವಮೊಗ್ಗ

ಅಡಕೆ ನಿಷೇಧ ಪ್ರಸ್ತಾಪ ವಿರುದ್ಧ ಪಕ್ಷಾತೀತ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಶಿವಮೊಗ್ಗ  ಡಿ.30
ಕೇಂದ್ರ ಸರ್ಕಾರದ ಅಡಕೆ ನಿಷೇಧ ಪ್ರಸ್ತಾಪದ ವಿರುದ್ಧ ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆಯ ಅಡಕೆ ಬೆಳೆಗಾರರು, ವಿವಿಧ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.  
ನಗರದ ಎಪಿಎಂಸಿಯ ಮ್ಯಾಮ್ ಕೋಸ್ ಕಚೇರಿ ಆವರಣದಿಂದ ಎನ್ ಡಿವಿ ಹಾಸ್ಟೆಲ್‌ವರೆಗೆ ಸಾವಿರಾರು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೇಂದ್ರದ ಕ್ರಮಕ್ಕೆ ಖಂಡನೆ: ನಂತರ ನಗರದ ಎನ್ ಡಿವಿ ಹಾಸ್ಟೆಲ್ ಆವರಣದಲ್ಲಿ ರಾಜ್ಯ ಅಡಕೆ ಬೆಳೆಗಾರರ ಒಕ್ಕೂಟದ ಆಯೋಜಿಸಿದ್ದ ಅಡಕೆ ಬೆಳೆಗಾರರ ಸಮಾವೇಶದಲ್ಲಿ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.
ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ವರದಿಯನ್ನು ತಕ್ಷಣ ವಾಪಸ್ ಪಡೆಯಬೇಕು. ಅಡಕೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ ಎಂಬುದನ್ನು ಕೇಂದ್ರ ಸರ್ಕಾರ ಸಾಲಿಸಿಟರ್ ಜನರಲ್ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಅಡಕೆ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಲು ರಾಜ್ಯ ಸರ್ಕಾರ ಕೂಡಲೇ ವಕೀಲರನ್ನು ನೇಮಕ ಮಾಡಬೇಕೆಂದು ಎಲ್ಲಾ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಅಡಕೆ ನಿಷೇಧ ಪ್ರಸ್ತಾಪದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಅಡಕೆ ಬೆಳೆಗರರನ್ನಾಗಲಿ, ಅಡಕೆ ಮಾರಾಟ ಸಹಕಾರ ಸಂಸ್ಥೆಗಳನ್ನಾಗಲಿ ಸಂಪರ್ಕಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವರದಿ ವಾಪಸ್ ಪಡೆಯಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನು ನೇಮಿಸಿ ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ವರದಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿಯನ್ನು ವಾಪಸ್ ಪಡೆಯಬೇಕು ಎಂದ ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಅಡಕೆ ನಿಷೇಧ ಇಲ್ಲ ಎನ್ನುವುದನ್ನು ಕೇಂದ್ರ ಸರ್ಕಾರ ಮಾಧ್ಯಮಗಳ ಮುಂದೆ ಹೇಳುತ್ತಿದೆ. ಅದನ್ನೇ ಸುಪ್ರಿಂಕೋರ್ಟ್‌ನಲ್ಲಿ ದಾಖಲಿಸಬೇಕು.
ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ವರದಿ ಸಲ್ಲಿಸುವ ಮೂಲಕ ಅಡಕೆ ಬೆಳೆಗಾರರ ಮರಣ ಶಾಸನ ಬರೆಯಲು ಮುಂದಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ವಾಣಿಜ್ಯ ಪಟ್ಟಿಗೆ ಸೇರಿಸಲಿ: ಜೆಡಿಎಸ್‌ನ ವಿಧಾನಸಭೆ ಉಪನಾಯಕ ವೈ.ಎಸ್.ವಿ. ದತ್ತ, ಕೇಂದ್ರಕ್ಕೆ ಬದ್ಧತೆ ಇದ್ದರೆ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಪುನರ್ ಪರಿಶೀಲಿಸಲು ಅರ್ಜಿ ಸಲ್ಲಿಸಬೇಕು. ಅಡಕೆಯನ್ನು ಆಹಾರ ಬೆಳೆ ಪಟ್ಟಿಯಿಂದ ತೆಗೆದು ವಾಣಿಜ್ಯ ಬೆಳೆ ಪಟ್ಟಿಯಲ್ಲಿ ಸೇರಿಸಬೇಕೆಂದು ಆಗ್ರಹಿಸಿದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಗುಟ್ಕಾ ತಯಾರಿಸುವ ಕಂಪನಿಗಳಿಂದ ಅಡಕೆ ಬಲಿಯಾಗುವಂತಾಗಿದೆ. ಅಡಕೆ ಬೆಳೆ ನಿಷೇಧ ಪ್ರಸ್ತಾಪವನ್ನು ಕೈ ಬಿಡದಿದ್ದರೆ, ಮಾರ್ಚ್‌ನಲ್ಲಿ ನಡೆಯುವ ಲೋಕಸಭೆಯ ಬಜೆಟ್ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಟ್, ಅಡಕೆ ಬೆಳೆ ನಿಷೇಧ ಪ್ರಸ್ತಾಪ ಕೈಬಿಡಬೇಕು. ಅಡಕೆ ಬೆಳೆಗಾರರನ್ನು ಕಡೆಗಣಿಸಿದರೆ, ರಾಜ್ಯದ ಕೋಟಿಗೂ ಅಧಿಕ ಅಡಕೆ ಬೆಳೆಗಾರರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಸಮಾವೇಶದಲ್ಲಿ ಸಂಸದ ರಾಘವೇಂದ್ರ, ಶಾಸಕ ಡಿ.ಎನ್. ಜೀವರಾಜ್, ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಭಾರತಿ ಶೆಟ್ಟಿ, ಮ್ಯಾಮ್ ಕೋಸ್ ಉಪಾಧ್ಯಕ್ಷ ಕೆ. ನರಸಿಂಹ ನಾಯಕ್, ಮಾಜಿ ಶಾಸಕ ಆರಗ ಜ್ಞಾನೇಂದ್ರ, ಮಾಡಾಳ್ ವಿರೂಪಾಕ್ಷಪ್ಪ, ನೀಲಕಂಠಪ್ಪ, ಕೆ.ಜಿ. ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಸಚಿನ್ ಮೀಗಾ, ರೈತ ಮುಖಂಡರಾದ ಕೆ.ಟಿ. ಗಂಗಾಧರ, ಕಡಿದಾಳು ಶಾಮಣ್ಣ, ಎಚ್.ಆರ್. ಬಸವರಾಜಪ್ಪ ಮತ್ತಿತರರು ಇದ್ದರು.
ಸಂಚಾರಕ್ಕೆ ಅಡ್ಡಿ: ಬೇರೆ ಜಿಲ್ಲೆ, ತಾಲೂಕುಗಳಿಂದ ಸಾವಿರಾರು ಜನ ಅಡಕೆ ಬೆಳೆಗಾರರು ಸಮಾವೇಶಕ್ಕೆ ಆಗಮಿಸಿದ್ದರು. ಇದರಿಂದ ಎನ್ ಡಿಎ ಮೈದಾನದ ಬಳಿ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಸಂಚಾರವನ್ನು ಸುಸ್ಥಿತಿಗೆ ತರಲು ಸಂಚಾರಿ ಪೊಲೀಸರು ಹರಸಾಹಸ ಪಟ್ಟರು. ಕಾರ್ಯಕ್ರಮ ಮುಗಿಯುವ ಹಂತಕ್ಕೆ ತಲುಪಿದರೂ ರೈತರು ಸಮಾವೇಶಕ್ಕೆ ಬರುತ್ತಿರುವ ದೃಶ್ಯ ಕಂಡು ಬಂತು. ರೈತರಿಗೆ ಊಟದ ವ್ಯವಸ್ಥೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.