ನಾನೇನು ಕುರ್ಚಿ ಹುಡುಕಿಕೊಂಡು ಬಿಜೆಪಿಗೆ ಹೋಗ್ತಾ ಇಲ್ಲ
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.30
ನಾನೇನು ಕುರ್ಚಿ ಹುಡುಕಿಕೊಂಡು, ಕೇಳಿಕೊಂಡು ಬಿಜೆಪಿಗೆ ಹೋಗ್ತಾ ಇಲ್ಲ. ಬೇಷರತ್ತಾಗಿಯೇ ಹೋಗ್ತಿದ್ದೇನೆ. ಆದರೆ ಬಿಜೆಪಿಗೆ ನಿಜವಾಗಿಯೂ ರಾಜ್ಯದಲ್ಲಿ ರಾಜಕೀಯ ಲಾಭ ಆಗಬೇಕು ಅನ್ನುವುದು, ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು ಅನ್ನುವುದು ನೀವು (ಬಿಜೆಪಿಯವರು) ಹೇಗೆ ಸಾಮರಸ್ಯದಿಂದ, ಹಿಂದಿನದನ್ನು ಮರೆತು ಒಟ್ಟಾಗಿ ಹೋಗುತ್ತೀರಿ ಎನ್ನುವುದನ್ನು ಆಧರಿಸಿರುತ್ತದೆ....
ಇದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಸ್ಪಷ್ಟೋಕ್ತಿ.
ಭಾನುವಾರ ಶಿಕಾರಿಪುರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ತಾವು ಬಿಜೆಪಿ ಸೇರುವುದಾಗಿ ಘೋಷಿಸಿದ್ದ ಅವರು, ಸೋಮವಾರ ಇನ್ನೂ ಮುಂದೆ ಹೋಗಿ ಕರ್ನಾಟಕ ಜನತಾ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡುವ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿದರು.
ಯಾರ ಶಕ್ತಿ ಏನು? ಆದರೆ ಕೆಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸ್ವಾಭಿಮಾನ, ಹಿತಾಸಕ್ತಿಗೆ ಧಕ್ಕೆ ಆಗದಂತೆ ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆ ಎಂದು ಹೇಳಿರುವ ಅವರು, ಅವರಿಗೆ (ಬಿಜೆಪಿಗೆ) ಯಡಿಯೂರಪ್ಪ ಬೇಕು, ದೇಶದ ದೃಷ್ಟಿಯಿಂದ ಒಟ್ಟಾಗಿ ಇರಬೇಕು ಎಂಬುದು ಎಲ್ಲರ ನಿಲವು. ನಮ್ಮ ಗೌರವಕ್ಕೆ ಧಕ್ಕೆ, ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು. ಒಟ್ಟಾಗಿ, ಒಂದಾಗಿ ಹೋಗಬೇಕು. ಇದೇ ವಿಷಯವನ್ನು ಬಿಜೆಪಿ ಮುಖಂಡರೊಂದಿಗೆ ಮಾತನಾಡುವಾಗ ತಿಳಿಸುತ್ತೇನೆ. ನಮಗೆ ಏನೂ ಬೇಡ, ಗೌರವ ಬೇಕು. ಯಾರ ಶಕ್ತಿ ಏನು ಎಂದು ಗುರುತಿಸಬೇಕು ಎಂದು ಸೂಚ್ಯವಾಗಿ ಹೇಳಿದರು.
ನಗರದಲ್ಲಿ ಸೋಮವಾರ ಮಧ್ಯಾಹ್ನ ಕರ್ನಾಟಕ ಜನತಾ ಪಕ್ಷದ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಕಾರ್ಯಕರ್ತರ ಆತಂಕವನ್ನು ಬಗೆಹರಿಸುವ ಪ್ರಯತ್ನ ಮಾಡಿದರು.
ಮುಖಂಡರ ನಡೆಯ ಆತಂಕ: ನಮ್ಮ ಪಕ್ಷದ ಪ್ರಮುಖ ಕಾರ್ಯಕರ್ತರು, ಪಕ್ಷದ ಜವಾಬ್ದಾರಿ ಹೊತ್ತು, ಚುನಾವಣೆಗೆ ಸ್ಪರ್ಧಿಸಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಸಮಸ್ಯೆ ಎದುರಿಸಿದ್ದಾರೆ. ರಾಜಕೀಯ ಮುಂದಿನ ಭವಿಷ್ಯದ ಬಗ್ಗೆಯೂ ಯೋಚನೆ ಮಾಡ್ತಿದ್ದಾರೆ. ಇದೆಲ್ಲದರ ಅರಿವು ನನಗಿದೆ. ನಾನು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಅವರು ಹೇಳಿರಬಹುದು. ಆದರೆ, ನಾವು ಬಿಜೆಪಿ ಸೇರಿದ ಮೇಲೆ ಪಕ್ಷದ ಮುಖಂಡರು ಹೇಗೆ ನಡೆದುಕೊಳ್ಳಬಹುದು ಎಂಬುದು ಎಲ್ಲರನ್ನೂ ಕಾಡುತ್ತಿವೆ ಎಂದರು.
ಒಂದು ಮಾತು ಸ್ಪಷ್ಟವಾಗಿ ಹೇಳುತ್ತೇನೆ. ನಾನು ಅಧಿಕಾರವನ್ನು ನೋಡಿದ್ದೇನೆ. ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಬಿಜೆಪಿಗೆ ಹೋಗ್ತಾ ಇರೋದು ಸ್ಥಾನಮಾನಕ್ಕಲ್ಲ. ಸಂಘಪರಿವಾರದ ಹಿನ್ನೆಲೆಯಲ್ಲಿ ಬೆಳೆದವನು ನಾವು, ಬಿಜೆಪಿ ಕಟ್ಟಿ ಬೆಳೆಸಿದ ನಾವು ದೇಶ ಮೋದಿ ಕಡೆ ನೋಡುತ್ತಿರುವ ಸಂದರ್ಭದಲ್ಲಿ ಯಡಿಯೂರಪ್ಪ ಏನು ತೀರ್ಮಾನ ತಗೋತಾರೆ ಎಂದು ನೋಡುತ್ತಿದ್ದಾರೆ.
ಸ್ಥಾನಮಾನ ಕೇಳಿಲ್ಲ: ಹಳೇದನ್ನ ಮರೆತು, ಭಿನ್ನಾಭಿಪ್ರಾಯ ಮರೆತು, ಮೊದಲು ಬಿಜೆಪಿಯಲ್ಲಿದ್ದಾಗ ಯಾವ ರೀತಿ ಸಾಮರಸ್ಯದಿಂದ ಒಟ್ಟಾಗಿ ಕೆಲಸ ಮಾಡಿದ್ವೋ ಆದೇ ರೀತಿ ಮಾಡೋಣ. ಅವರು ಯಾವ ರೀತಿ ನಡ್ಕೋತಾರೋ ಆಮೇಲೆ ಯೋಚನೆ ಮಾಡೋಣ. ಆದರೆ ಒಂದು ಭರವಸೆಯನ್ನು ನಾನು ಕೊಡ್ತೇನೆ, ಕೆಜೆಪಿ ಕಾರ್ಯಕರ್ತರೊಡನೆ ಸಾಮರಸ್ಯದಿಂದ ಬಿಜೆಪಿಯವರು ನಡೆದುಕೊಳ್ಳುವರಗೂ ನಾನು ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಪಡೆಯುವುದಿಲ್ಲ ಎಂದು ಯಡಿಯೂರಪ್ಪ ದೃಢವಾಗಿ ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶ ಏನು ಬಂತು, ನಮ್ಮ ಶಕ್ತಿ ಏನು, ನಿಮ್ಮ ಶಕ್ತಿ ಏನು, ಯಾರು ಮುಂದೆ ಇದ್ದಾರೆ, ಯಾರಿಗೆ ಜನಬೆಂಬಲ ಇದೆಯೋ ಅವರಿಗೆ ಅವಕಾಶಗಳು ಸಿಗಬೇಕು. ಈ ರೀತಿ ಪರಸ್ಪರ ಒಂದೇ ತಾಯಿ ಮಕ್ಕಳಂತೆ ಯೋಚನೆ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು ಗಣನೀಯ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ರಾಜ್ಯದಲ್ಲಿ ಬಿಜೆಪಿಗೆ ಸೇರಿ ಓಡಾಡುವಾಗ ನನಗೆ ಯಾವುದೇ ಸ್ಥಾನಮಾನ ನೀಡುವ ಅಗತ್ಯ ಇಲ್ಲ. ಯಡಿಯೂರಪ್ಪ ಯಡಿಯೂರಪ್ಪನೇ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಕಾರ್ಯಕ್ರಮಗಳನ್ನು ಜನ ಗುರುತಿಸುತ್ತಾರೆ. ತಕ್ಕಂತೆ ಬೆಂಬಲ ಸಿಗುತ್ತೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡರ ರಕ್ಷಣೆ: ಇನ್ನು ಮುಂದಿನ ನನ್ನ ರಾಜಕೀಯ ನಿರ್ಧಾರ ಏನಿರಬೇಕು ಎಂಬುದನ್ನು ಒಟ್ಟಾಗಿ (ಬಿಜೆಪಿಯವರೊಂದಿಗೆ) ಚರ್ಚೆ ಮಾಡ್ತಿವಿ. ಅವರ ತಪ್ಪು ಅವರಿಗೆ ಅರಿವಾಗಿದೆ. ನನಗೂ ಸಹ ನನ್ನ ಅನಿವಾರ್ಯ ತೀರ್ಮಾನದ ಪರಿಣಾಮ ಏನಾಯಿತು ಎಂಬುದು ನನಗೂ ಮನವರಿಕೆ ಆಗಿದೆ. 122 ಇದ್ದೋರು 40ಕ್ಕೆ ಬಂದಿದ್ದು ನನಗೆ ಸಮಾಧಾನ ತಂದಿದೆ ಅಂದ್ಕೋಬೇಡಿ. ಏನೋ ಆಯ್ತು. ಪುನರಾವರ್ತನೆ ಆಗಬಾರದು. ಪಕ್ಷದ ಕಾರ್ಯಕರ್ತರು, ಮುಖಂಡರ ಹಿತ ಕಾಪಾಡುವುದು ನನ್ನ ಮೊದಲ ಆದ್ಯ ಕರ್ತವ್ಯ ಎಂದಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಪ್ರಕಾಶ್ ಅವರು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಸಂಸದ ರಾಘವೇಂದ್ರ, ಅಪೆಕ್ಸ್ ಬ್ಯಾಂಕ್ ರಾಜ್ಯಾಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಗೀತಾ ಮಲ್ಲಿಕಾರ್ಜುನ್, ಮುಖಂಡರಾದ ಎಸ್. ರುದ್ರೇಗೌಡ, ಬಿ.ಆರ್. ಜಯಂತ್ ಸೇರಿ ಹಲವರು ಸಭೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

