ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ
ಭದ್ರಾವತಿ: ಪ್ರಸ್ತುತ ರಾಜಕೀಯ ಬೆಳವಣಿಗೆಯಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಪತನವಾಗುವುದಿಲ್ಲ ಮತ್ತು ಮುಂಬರುವ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಕೆ.ಎಚ್. ಈಶ್ವರಪ್ಪ ನುಡಿದರು.
ಶುಕ್ರವಾರ ಅವರು ಭದ್ರಾವತಿ ತಾಲೂಕಿನ ಬಿಳಕಿ ರಂಭಾಪುರಿ ಶಾಖಾ ಹಿರೇಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕತ್ವದಲ್ಲಿ ಏಕತೆ, ಸಂಘಟನೆಯಲ್ಲಿರುವ ಶಕ್ತಿ ಮತ್ತು ಇದುವರೆಗಿನ ಸರ್ಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಜನತೆಯ ಮುಂದೆ ಧೈರ್ಯದಿಂದ ಹೋಗುವುದಾಗಿ ತಿಳಿಸಿದರು.
ಅಭಿವೃದ್ಧಿಗೆ ಒತ್ತು: ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಮೂವರು ಮುಖ್ಯಮಂತ್ರಿಗಳ ಅವಧಿಯಲ್ಲಿ ಬಿಜೆಪಿ ಸರ್ಕಾರದ ಸಾಧನೆ ಅಪಾರವಾದುದು. ಕೇವಲ ಪಟ್ಟಣಗಳಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೂ ಸರ್ಕಾರ ಒತ್ತು ನೀಡಿದೆ. ಇದನ್ನು ಅಲ್ಲಗಳೆದು ಬೀಳಿಸಲು ಸಾಧ್ಯವಿಲ್ಲ. ಇದರ ಆಧಾರದ ಮೇಲೆ ಮುಂದೆಯೂ ಸಹ ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಅವರು ಭವಿಷ್ಯ ನುಡಿದರು.
ಬ್ಲಾಕ್ ಮೇಲ್ ತಂತ್ರಕ್ಕೆ ಬಲಿ: ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರವನ್ನು ಬೀಳಿಸುವಲ್ಲಿ ರಾಜಕೀಯ ಪಿತೂರಿ ನಡೆಸಿದೆ. ಇದಕ್ಕೆ ಯಡಿಯೂರಪ್ಪನವರನ್ನು ದಾಳವಾಗಿ ಬಳಸಿದೆ. ಯಡಿಯೂರಪ್ಪನವರು ಕಾಂಗ್ರೆಸ್ನ ಬ್ಲಾಕ್ ಮೇಲ್ ತಂತ್ರಕ್ಕೆ ಬಲಿಯಾಗಿದ್ದಾರೆ. ಬಿಜೆಪಿ ಸರ್ಕಾರ ಉರುಳಿಸದಿದ್ದರೆ ಅವರ ಮೇಲೆ ಸಿಬಿಐ ತನಿಖೆ ಮುಂದುವರೆಸುವುದಾಗಿ ಬೆದರಿಕೆ ಹಾಕಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ, ಈ ತಂತ್ರದಲ್ಲಿ ಬಿಎಸ್ವೈ ಯೊಂದಿಗೆ ಹೋದ ಶಾಸಕರ ಭವಿಷ್ಯ ಹಾಳಾಗಲಿದೆ ಎಂಬುದನ್ನು ತಾವು ಈ ಸಂದರ್ಭದಲ್ಲಿ ಹೇಳಲಿಚ್ಛಿಸುವುದಾಗಿ ಅವರು ತಿಳಿಸಿದರು.
ನಾಯಕತ್ವದ ಕೊರತೆ: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆಯಿದೆ. ಇರುವ ನಾಯಕರಲ್ಲಿ ಹೊಂದಾಣಿಕೆ ಇಲ್ಲ. ಲಿಂಗಾಯತರ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಮಾತನಾಡುವ ಪರಮೇಶ್ವರ್ ಅವರನ್ನು ನಂಬಿಕೊಂಡು ಕಾಂಗ್ರೆಸ್ ಪಕ್ಷದ ಮಾತು ಕೇಳಿ ಬಿಜೆಪಿ ಸರ್ಕಾರವನ್ನು ಬೀಳಿಸಲು ಹೊರಟಿರುವ ಯಡಿಯೂರಪ್ಪನವರ ಕಾಳಜಿಯನ್ನು ಏನನ್ನಬೇಕೋ ತಿಳಿಯುವುದಿಲ್ಲ. ಯಡಿಯೂರಪ್ಪ ಬಿಜೆಪಿ ತೊರೆದಾಗಿದೆ ಮತ್ತು ಮರಳಿ ಬರುವುದು ಕಷ್ಟ. ಹೊಸ ಪಕ್ಷ ಕೆಜೆಪಿ ಎಷ್ಟು ಸ್ಥಾನ ಗಳಿಸುವುದೊ ಗೊತ್ತಿಲ್ಲ. ತಮ್ಮ ಹಿಂದೆ 60 ಶಾಸಕರಿದ್ದಾರೆ ಮತ್ತು 16 ಮಂದಿ ಶಾಸಕರು ರಾಜಿನಾಮೆ ನೀಡಲು ಸಿದ್ಧರಿದ್ದಾರೆಂದಿದ್ದರು. ಈಗ 12 ಮುಟ್ಟುವುದೂ ಕಷ್ಟವಾಗುತ್ತಿದೆ. ಇದು ಯಡಿಯೂರಪ್ಪನವರ ವೈಫಲ್ಯತೆಯನ್ನು ಎತ್ತಿ ತೋರುತ್ತಿದೆ ಎಂದರು.
ಜೆಡಿಎಸ್ ಕೆಲವೇ ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯ ಹೊಂದಿದೆ. ಹೀಗಾಗಿ ಜಗದೀಶ್ ಶೆಟ್ಟರ್ ಮುಂಗಡಪತ್ರ ಮಂಡಿಸುವುದು ಖಚಿತ, ಬಿಜೆಪಿ ಸರ್ಕಾರ ತನ್ನ ಅವಧಿ ಸಂಪೂರ್ಣಗೊಳಿಸುವುದರೊಂದಿಗೆ ಮುಂದೆ ಮತ್ತೆ ಅಧಿಕಾರಕ್ಕೆ ಬರುವುದು ಖಂಡಿತ ಎಂದು ಭರವಸೆಯಿಂದ ನುಡಿದರು.
ಈಶ್ವರಪ್ಪನವರೊಂದಿಗೆ ಬಿಳಕಿ ಶಾಖಾ ಹಿರೇಮಠದ ಶ್ರೀಗಳಾದ ರಾಚೋಟೇಶ್ವರ ಶಿವಾಚಾಯ ಸ್ವಾಮೀಜಿ ಮತ್ತು ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

